ಸುಪ್ರೀಂನಲ್ಲಿ ರಫೇಲ್ ‘ವಾರ್’, ವಿಚಾರಣೆ ವೇಳೆ ತೀಕ್ಷ್ಣ ವಾದ-ಪ್ರತಿವಾದ

ಈ ಸುದ್ದಿಯನ್ನು ಶೇರ್ ಮಾಡಿ

Rafel--11

ನವದೆಹಲಿ, ನ.14 (ಪಿಟಿಐ)- ಭಾರತ ಮತ್ತು ಫ್ರಾನ್ಸ್ ನಡುವಣ 59,000 ಕೋಟಿ ರೂ.ಗಳ ಮೊತ್ತದ 36 ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದ ವಿವಾದದ ಬಗ್ಗೆ ನ್ಯಾಯಾಲಯದ ಉಸ್ತುವಾರಿಯಲ್ಲೇ ತನಿಖೆ ನಡೆಯಬೇಕೆಂದು ಕೋರಿ ಸಲ್ಲಿಸಿಲಾಗಿರುವ ಮನವಿಗಳ ಮಹತ್ವದ ವಿಚಾರಣೆ ಸುಪ್ರೀಂಕೋರ್ಟ್‍ನಲ್ಲಿ ಇಂದು ಆರಂಭವಾಗಿದೆ.

ವಿಚಾರಣೆ ವೇಳೆ ಅರ್ಜಿದಾರರು ಮತ್ತು ಸರ್ಕಾರದ ಪರ ಪ್ರತಿನಿಧಿಗಳ ನಡುವೆ ಭಾರೀ ತೀಕ್ಷ್ಣ ವಾದ-ಪ್ರತಿವಾದ ನಡೆದಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠವು ಇಂದು ಈ ಸಂಬಂಧ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿದರು. ಹಿರಿಯ ವಕೀಲ ಪ್ರಶಾಂತ್ ಭೂಷಣ್ ತಮ್ಮ ವಾದ ಮಂಡಿಸಿ. ರಫೇಲ್ ಜೆಟ್ ವಿಮಾನಗಳ ಖರೀದಿಯಲ್ಲಿ ದೊಡ್ಡ ಮಟ್ಟದ ಅವ್ಯವಹಾರ ಮತ್ತು ಭ್ರಷ್ಟಾಚಾರ ನಡೆದಿದೆ. ಅಂಬಾನಿ ಸಮೂಹಕ್ಕೆ ಅನಗತ್ಯ ಲಾಭ ಮಾಡಿ ಕೊಡಲಾಗಿದೆ. ಖರೀದಿ ದರ ವಿವರಗಳ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ರಫೇಲ್ ಒಪ್ಪಂದದಲ್ಲಿನ ಗೌಪ್ಯ ಖಂಡದ ಬಗ್ಗೆ ಮಾಹಿತಿ ನೀಡುವಂತೆ ಒತ್ತಾಯಿಸಿದರು.

ಸರ್ಕಾರದ ಪರವಾಗಿ ಕೋರ್ಟ್‍ನಲ್ಲಿ ಹಾಜರಿದ್ದ ಅಟಾರ್ನಿ ಜನರಲ್ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ರಹಸ್ಯ ಒಪ್ಪಂದ ಗೌಪ್ಯವಾಗಿರಲೇಬೇಕು. ಅದನ್ನು ಎಲ್ಲರ ಮುಂದೆ ಬಹಿರಂಗಗೊಳಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಭೂಷಣ್ ಮತ್ತು ವೇಣುಗೋಪಾಲ್ ಅವರ ನಡುವೆ ತೀಕ್ಷ್ಣ ವಾದ-ಪ್ರತಿವಾದ ನಡೆಯಿತು.  ತಮ್ಮ ಪರವಾಗಿ ಹಾಗೂ ಕೇಂದ್ರದ ಮಾಜಿ ಸಚಿವರಾದ ಯಶ್ವಂತ್ ಸಿನ್ಹ ಮತ್ತು ಅರುಣ್ ಶೌರಿ ಪರವಾಗಿ ವಾದ ಮುಂದುವರಿಸಿದ ಪ್ರಶಾಂತ್ ಭೂಷಣ್, ಕೇಂದ್ರ ಸರ್ಕಾರ ಒಪ್ಪಂದದಲ್ಲಿನ ಕೆಲವು ಮಹತ್ವದ ಸಂಗತಿಗಳನ್ನು ಮುಚ್ಚುಮರೆ ಮಾಡುತ್ತಿದೆ. ದರದ ಬಗ್ಗೆಯಂತೂ ಯಾವುದೇ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದರು. ಮುಖ್ಯ ನ್ಯಾಯಾಮೂರ್ತಿ ಅವರು ಮಧ್ಯಪ್ರವೇಶಿಸಿದರು. ನಾವು ನಿಮಗೆ ವಾದ ಮಂಡಿಸಲು ಅವಕಾಶ ನೀಡಿದ್ದೇವೆ. ಈ ಅವಕಾಶವನ್ನು ಜಾಗ್ರತೆಯಿಂದ ಬಳಸಿಕೊಳ್ಳು. ಎಷ್ಟು ಅಗತ್ಯವೋ ಅಷ್ಟನ್ನು ಮಾತ್ರ ಮಾತನಾಡಿ ಎಂದು ಪ್ರಶಾಂತ್ ಭೂಷಣ್ ಅವರಿಗೆ ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಅರುಣ್ ಶೌರಿ ಅವರಿಂದ ಸಲ್ಲಿಕೆಯಾಗಬೇಕಿದ್ದ ಕೆಲವು ದಾಖಲೆಪತ್ರಗಳು ಮತ್ತು ದಸ್ತಾವೇಜುಗಳನ್ನು ಸ್ವೀಕರಿಸಲು ನ್ಯಾಯಾಲಯ ನಿರಾಕರಿಸಿತು. ರಫೇಲ್ ಜೆಟ್‍ಗೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ನಾವು ಭಾರತೀಯ ವಾಯು ಪಡೆಯಿಂದ ಅಗತ್ಯವಾದ ವಿವರಗಳನ್ನು ಪಡೆಯುತ್ತೇವೆ ಎಂದು ಸುಪ್ರೀಂಕೋರ್ಟ್ ತಿಳಿಸಿತು. ರಫೇಲ್ ಜೆಟ್ ವಿಮಾನಗಳ ಖರೀದಿ ದರಕ್ಕೆ ಸಂಬಂಧಿಸಿದಂತೆ ಅಗತ್ಯವಾದ ಅಂಶಗಳನ್ನು ಪರಿಗಣಿಸಿದ ನಂತರ ಈ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದು ಪೀಠವು ಹೇಳಿದೆ. ಭೋಜನ ವಿರಾಮದ ನಂತರ ಈ ಅರ್ಜಿಗಳ ವಾದ-ಪ್ರತಿವಾದ ಮುಂದುವರಿದಿತ್ತು.

Facebook Comments

Sri Raghav

Admin