ಕೇಂದ್ರದ 3 ತಂಡಗಳಿಂದ ರಾಜ್ಯದಲ್ಲಿ ಬರ ಪರಿಸ್ಥಿತಿ ಅಧ್ಯಯನ

ಈ ಸುದ್ದಿಯನ್ನು ಶೇರ್ ಮಾಡಿ

karnatakನವದೆಹಲಿ/ಬೆಂಗಳೂರು, ನ.14- ರಾಜ್ಯದಲ್ಲಿ ಉತ್ತಮ ಮುಂಗಾರು ಮಳೆಯಾಗಿದ್ದರೂ, ಕೆಲವು ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ಬರ ಪರಿಸ್ಥಿತಿ ತಲೆದೋರಿದೆ. ಈ ಸಂಬಂಧ ಬರ ಪೀಡಿತ ತಾಲೂಕು ಗಳಲ್ಲಿ ಅಧ್ಯಯನ ನಡೆಸಿ ನಷ್ಟವನ್ನು ಅಂದಾಜು ಮಾಡಲು ಕೇಂದ್ರದ ಬರ ಅಧ್ಯಯನ ತಂಡ (ಐಎಂಸಿಟಿ) ನ.17 ರಿಂದ 19ರವರೆಗೆ ಈ ಪ್ರದೇಶಗಳಲ್ಲಿ ಕ್ಷೇತ್ರ ಭೇಟಿ ನೀಡಲಿದೆ.

ಕೇಂದ್ರ ಸರ್ಕಾರದ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಅಮಿತಾಭ್ ಗೌತಮ್ ನೇತೃತ್ವದಲ್ಲಿ 10 ಸದಸ್ಯರು ಮೂರು ತಂಡಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಬರದಿಂದ ಆದ ನಷ್ಟವನ್ನು ಸ್ಥಳದಲ್ಲೇ ಅಧ್ಯಯನ ಮಾಡಿ ಬರ ನಷ್ಟದ ಮೌಲ್ಯಾಂಕನ ಮಾಡಲಿದ್ದಾರೆ. ಗ್ರೂಪ್ ಎ ತಂಡವು ಯಾದಗಿರಿ, ರಾಯಚೂರು, ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಗಳ ಬರಪೀಡಿತ ತಾಲೂಕುಗಳಿಗೆ ಭೇಟಿ ನೀಡಿ ಅಧ್ಯಯನ ಮತ್ತು ನಷ್ಟದ ಅಂದಾಜು ಮಾಡಲಿದೆ.

ಗ್ರೂಪ್ ಬಿ ತಂಡ ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯ ಪುರ ಮತ್ತು ಗದಗ್ ಜಿಲ್ಲೆಗಳ ಕ್ಷಾಮ ಸಂತ್ರಸ್ತ ತಾಲೂಕುಗಳಲ್ಲಿ ಕ್ಷೇತ್ರ ಭೇಟಿ ಕೈಗೊಂಡು ಪರಿಸ್ಥಿತಿ ಪರಾಮರ್ಶೆ ನಡೆಸಲಿದೆ. ಗ್ರೂಪ್ ಸಿ ತಂಡ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ತೆರಳಿ ಬರದಿಂದ ತೀವ್ರ ಹಾನಿಗೆ ಒಳಗಾಗಿರುವ ತಾಲ್ಲೂಕುಗಳಲ್ಲಿ ವಾಸ್ತವ ಪರಿಸ್ಥಿತಿಯ ಅಧ್ಯಯನ ನಡೆಸಲಿದೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ತಾಲ್ಲೂಕುಗಳ ಉನ್ನತಾಧಿಕಾರಿಗಳು ಹಾಜರಿದ್ದು ಈ ತಂಡಕ್ಕೆ ಅಗತ್ಯವಾದ ಮಾಹಿತಿ ನೀಡಿ ಸಹಕರಿಸಲಿದ್ದಾರೆ.

ಮುಂದಿನ ಶುಕ್ರವಾರದಿಂದ ಸೋಮವಾರದವರೆಗೆ ಈ ಮೂರು ತಂಡಗಳು 13ಕ್ಕೂ ಹೆಚ್ಚು ಜಿಲ್ಲೆಗಳ ಅನೇಕ ತಾಲ್ಲೂಕಿಗಳಿಗೆ ಭೇಟಿ ನೀಡಿ ಕ್ಷೇತ್ರ ಅಧ್ಯಯನ ನಡೆಸಿದ ನಂತರ ಕೇಂದ್ರ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲಿದೆ. ಈ ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರ ಬರಪೀಡಿತ ಜಿಲ್ಲೆಗಳು ಮತ್ತು ತಾಲ್ಲೂಕುಗಳಿಗೆ ಸೂಕ್ತ ಪರಿಹಾರ ಘೋಷಿಸಲಿದೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ರಾಜ್ಯದ ಅನೇಕ ನಾಯಕರು ಇತ್ತೀಚೆಗೆ ಕೇಂದ್ರಕ್ಕೆ ಮನವಿ ಮಾಡಿ ಬರ ಪೀಡಿತ ತಾಲ್ಲೂಕುಗಳಲ್ಲಿ ಅಧ್ಯಯನ ನಡೆಸಿ ಸೂಕ್ತ ಪರಿಹಾರ ನೀಡುವಂತೆ ಕೋರಿದ್ದರು.

Facebook Comments