ಲಂಕಾ ಪ್ರಧಾನಿ ವಿರುದ್ಧ ಸಂಸತ್ ಅವಿಶ್ವಾಸ ನಿರ್ಣಯ : ರಾಷ್ಟ್ರಾಧ್ಯಕ್ಷರಿಗೆ ಭಾರೀ ಮುಖಭಂಗ

ಈ ಸುದ್ದಿಯನ್ನು ಶೇರ್ ಮಾಡಿ

srilankaಕೊಲೊಂಬೊ, ನ. 14 (ಪಿಟಿಐ)- ತೀವ್ರ ವಿವಾದದ ನಡುವೆ ನೇಮಕಗೊಂಡಿದ್ದ ಪ್ರಧಾನಮಂತ್ರಿ ಮಹಿಂದ ರಾಜಪಕ್ಸೆ ನೇತೃತ್ವದ ಸರ್ಕಾರದ ವಿರುದ್ಧ ಶ್ರೀಲಂಕಾ ಸಂಸತ್ತು ಇಂದು ಅವಿಶ್ವಾಸ ನಿರ್ಣಯ ಅನುಮೋದಿಸಿದೆ. ಇದರಿಂದ ಸರ್ಕಾರ ಬಹುಮತ ಕಳೆದುಕೊಂಡಿದೆ. ಸಂವಿಧಾನದ ನಿಯಮ ಉಲ್ಲಂಘಿಸಿ ಪ್ರಧಾನಿ ನೇಮಕ ಮಾಡಿದ್ದ ರಾಷ್ಟ್ರಾಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಅವರಿಗೆ ಇದರಿಂದ ಭಾರೀ ಮುಖಭಂಗವಾಗಿದೆ.

ಅಧ್ಯಕ್ಷರು ಅ.26ರಂದು ರನಿಲ್ ವಿಕ್ರಮಸಿಂಘೆ ಅವರನ್ನು ಪ್ರಧಾನಮಂತ್ರಿ ಹುದ್ದೆಯಿಂದ ಪದಚ್ಯುತಗೊಳಿಸಿ ಆ ಸ್ಥಾನಕ್ಕೆ ರಾಜಪಕ್ಸೆಯನ್ನು ನಿಯೋಜಿಸಿ ಬಳಿಕ ಪಾರ್ಲಿಮೆಂಟ್‍ನನ್ನು ವಿಸರ್ಜಿಸಿ ದೇಶದಲ್ಲಿ ಸಂವಿಧಾನಿಕ ಬಿಕ್ಕಟ್ಟು ಸೃಷ್ಟಿಗೆ ಕಾರಣರಾಗಿದ್ದರು. ಈ ಎಲ್ಲ ಬೆಳವಣಿಗೆ ನಂತರ ಇಂದು ಇದೇ ಮೊದಲ ಬಾರಿಗೆ ಸಮಾವೇಶಗೊಂಡ ಲಂಕಾ ಸಂಸತ್ತು ರಾಜಪಕ್ಸೆ ನೇತೃತ್ವದ ವಿವಾದಿತ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ ಅನುಮೋದನೆ ನೀಡಿದೆ. ಇದರಿಂದಾಗಿ ಸಿರಿಸೇನಾ ಅವರಿಗೆ ಭಾರೀ ಹಿನ್ನಡೆಯಾಗಿದೆ.

ಪ್ರಧಾನಿ ರಾಜಪಕ್ಸೆ ವಿರುದ್ಧ ಸಂಸತ್ತಿನ 225 ಸದಸ್ಯರಲ್ಲಿ ಬಹುತೇಕ ಮಂದಿ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ ಎಂದು ಪಾರ್ಲಿಮೆಂಟ್ ಸ್ಪೀಕರ್ ಕರು ಜಯಸೂರ್ಯ ಇಂದು ಪ್ರಕಟಿಸಿದರು. ರಾಜಪಕ್ಸೆ ವಿರುದ್ಧ ಅವಿಶ್ವಾಸ ಮಂಡನೆ ಮತ್ತು ಅನುಮೋದನೆಯಾಗಿರುವುದರಿಂದ ಅವರ ನೇತೃತ್ವದ ಸರ್ಕಾರ ಸಂಸತ್ತಿನಲ್ಲಿ ಬಹುಮತ ಕಳೆದುಕೊಂಡಿದೆ ಎಂದು ಅವರು ಹೇಳಿದರು. ಈ ಬೆಳವಣಿಗೆ ನಂತರ ರಾಜಪಕ್ಸೆ ಬೆಂಬಲಿಗರು ಸಂಸತ್ತಿನ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸಿದ್ದರಿಂದ ಕೆಲಕಾಲ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು.

Facebook Comments