ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ನೀಡುವ ತೀರ್ಪಿಗೆ ತಡೆ ನೀಡಲು ಸುಪ್ರೀಂ ನಕಾರ

ಈ ಸುದ್ದಿಯನ್ನು ಶೇರ್ ಮಾಡಿ

surem coretನವದೆಹಲಿ, ನ.14- ವಿಶ್ವವಿಖ್ಯಾತ ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶಾವಕಾಶ ನೀಡುವ ತನ್ನ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೊರ್ಟ್ ಇಂದು ಸ್ಪಷ್ಟವಾಗಿ ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ನೇತೃತ್ವದ ಪೀಠವು ಈ ಕುರಿತು ಸಲ್ಲಿಸಲಾಗಿದ್ದ ತಡೆಯಾಜ್ಞೆ ಮನವಿಯನ್ನು ತಳ್ಳಿ ಹಾಕಿತು. ಅಲ್ಲದೆ, ಆದೇಶ ಪರಾಮರ್ಶೆ ಅರ್ಜಿಗಳನ್ನು ಸಂವಿಧಾನ ಪೀಠ ಜ.22ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದ್ದು, ಅಲ್ಲಿಯವರೆಗೂ ಕಾಯುವಂತೆ ಅರ್ಜಿದಾರರಿಗೆ ಸೂಚಿಸಿತು.

ಎಲ್ಲ ವಯೋಮಾನದ ಮಹಿಳೆಯರಿಗೆ ಶಬರಿಮಲೆ ದೇವಾಲಯಕ್ಕೆ ಪ್ರವೇಶಾವಕಾಶ ನೀಡಿರುವ ಸೆ.28ರ ತೀರ್ಪಿಗೆ ತಡೆ ನೀಡುವಂತೆ ರಾಷ್ಟ್ರೀಯ ಅಯ್ಯಪ್ಪ ಭಕ್ತರ (ಮಹಿಳೆಯರ) ಸಂಘದ ಪರವಾಗಿ ವಕೀಲ ಮ್ಯಾಥ್ಯೂಸ್ ಜೆ. ನೆಡುಂಪರ ಅವರು ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ. ಪರಾಮರ್ಶೆ ಕುರಿತು ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ಮುಂದಿನ ವರ್ಷ ಜ.22ರಂದು ನಡೆಯಲಿದೆ. ಆಲ್ಲಿಯವರೆಗೂ ಕಾಯುವಂತೆ ವಕೀಲರಿಗೆ ಪೀಠವು ಸೂಚಿಸಿತು.

ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಸನ್ನಿಧಾನಕ್ಕೆ 10 ವರ್ಷದಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶ ವಿರೋಧಿಸಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದರೂ ಸ್ತ್ರೀಯರ ಪ್ರವೇಶಕ್ಕೆ ಅನುಮತಿ ಕಲ್ಪಿಸುವ ತನ್ನ ತೀರ್ಪಿಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿರುವುದರಿಂದ ಶಬರಿಮಲೆಯಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ತಲೆದೋರುವ ಸಾಧ್ಯತೆ ಇದೆ.

ನ.16ರಿಂದ ಆರಂಭವಾಗುವ ವಾರ್ಷಿಕ ಯಾತ್ರೆ ವೇಳೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು ಎಲ್ಲ ವಯೋಮಾನದ ಮಹಿಳೆಯರಿಗೆ ನ್ಯಾಯಾಲಯದಿಂದ ದೊರೆತಿರುವ ಅನುಮತಿ ಮುಂದುವರಿಯಲಿದೆ. ಇದಕ್ಕೆ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಶಬರಿಮಲೆ ಮತ್ತೆ ಉದ್ರಿಕ್ತವಾಗುವ ಲಕ್ಷಣಗಳು ಗೋಚರಿಸುತ್ತಿವೆ.

Facebook Comments