ಒಂಟಿಯಾಗಿ ವಾಸಿಸುತ್ತಿದ್ದ ಸರ್ವೆಯರ್ ಮನೆಯಲ್ಲೇ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Death--01
ಹಾಸನ, ನ.14- ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಸರ್ವೆಯರ್ ಒಬ್ಬರು ಮನೆಯಲ್ಲೇ ಸಾವನ್ನಪ್ಪಿರುವ ಘಟನೆ ಹಾಸನದ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ತಾಲೂಕು ಕಚೇರಿ ಸರ್ವೆಯರ್ ಟಿ.ಎಸ್.ಆನಂದ್ (42) ಮೃತಪಟ್ಟವರು. ಅವರು ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಅರಕಲಗೂಡು ತಾಲೂಕಿನ ಮಾದೀಹಳ್ಳಿ ಗ್ರಾಮದವರಾದ ಆನಂದ್ ಹಾಸನದ ಕರಿಗೌಡ ಕಾಲೋನಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಆದರೆ ಇಂದು ಬೆಳಗ್ಗೆ ಕೊಠಡಿಯಲ್ಲೇ ಅವರು ನಿಧನರಾಗಿದ್ದಾರೆ. ಸ್ಥಳೀಯರು ವಿಷಯ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಡಾವಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

# ಈ ಸುದ್ದಿಯನ್ನೂ ಓದಿ… :

ಚಿರತೆ ಪ್ರತ್ಯಕ್ಷ : ಗ್ರಾಮಸ್ಥರು ಆತಂಕ
ಬೇಲೂರು, ನ.14- ಕಳೆದ 15 ದಿನಗಳ ಹಿಂದೆ ದೊಡ್ಡಿಹಳ್ಳಿ ಗ್ರಾಮದಲ್ಲಿ ಹಸುವಿನ ಮೇಲೆ ಚಿರತೆ ದಾಳಿ ಮಾಡಿ ತಿಂದ ಘಟನೆ ಮಾಸುವ ಮುನ್ನವೇ ಗ್ರಾಮದ ಆಸುಪಾಸಿನಲ್ಲಿ ಚಿರತೆ ಕಾಣಿಸಿ ಕೊಂಡು ಗ್ರಾಮಸ್ಥರ ನಿದ್ದೆಗೆಡಿಸಿದ್ದು, ತಕ್ಷಣವೇ ಚಿರತೆ ಹಿಡಿಯುವಂತೆ ಅರಣ್ಯಾಧಿಕಾರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ತಾಲೂಕಿನ ಬಿಕ್ಕೋಡು ಹೋಬಳಿಯ ದೊಡ್ಡಿಹಳ್ಳಿ ಗ್ರಾಮದಲ್ಲಿ ಕಳೆದ 15 ದಿನಗಳ ಹಿಂದೆ ಜಮೀನಿನ ಸಮೀಪ ಕಟ್ಟಿ ಹಾಕಿದ್ದ ಮೂರು ವರ್ಷದ ಹಸುವನ್ನು ಚಿರತೆ ಎಳೆದೊಯ್ದು ಸ್ವಲ್ಪ ಭಾಗ ತಿಂದು ನಾಪತ್ತೆಯಾಗಿತ್ತು.

ಚಿರತೆ ಹಸು ತಿಂದಿರುವುದನ್ನು ಕಂಡ ಗ್ರಾಮಸ್ಥರು ಹಾಗೂ ರೈತರು ಆತಂಕಕ್ಕೊಳಗಾಗಿ ತಮ್ಮ ಜಮೀನುಗಳತ್ತ ತೆರಳಲು ಭಯಭೀತರಾಗಿ ಗುಂಪುಗುಂಪಾಗಿ ಹೋಗಿ ಬರುವಂತಾಗಿದೆ. ಗ್ರಾಮದಲ್ಲಿ ಚಿರತೆ ಹಸುವನ್ನು ತಿಂದಿರುವ ಬಗ್ಗೆ ಹಾಗೂ ಚಿರತೆಯನ್ನು ಹಿಡಿದು ಗ್ರಾಮಸ್ಥರ ಆತಂಕ ದೂರ ಮಾಡುವಂತೆ 15 ದಿನಗಳ ಹಿಂದೆಯೇ ಬೇಲೂರು ವಲಯ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಆದರೆ, ಈಗ ಪುನಃ ಕಳೆದೆರೆಡು ದಿನಗಳಿಂದ ಸಂಜೆ ಹಾಗೂ ರಾತ್ರಿ ದೊಡ್ಡಿಹಳ್ಳಿ ಗ್ರಾಮದ ಅಕ್ಕಪಕ್ಕ, ರಸ್ತೆಯಲ್ಲಿ ಚಿರತೆ ಗ್ರಾಮಸ್ಥರ ಕಣ್ಣಿಗೆ ಬೀಳುತ್ತಿರುವುದು ಗ್ರಾಮಸ್ಥರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ.

ತಕ್ಷಣ ಚಿರತೆಯನ್ನು ಹಿಡಿದು ಗ್ರಾಮಸ್ಥರಲ್ಲಿನ ಆತಂಕ ದೂರ ಮಾಡಬೇಕೆಂದು ಒತ್ತಾಯಿಸಿ ದೊಡ್ಡಿಹಳ್ಳಿ ಗ್ರಾಮಸ್ಥರು ಬೇಲೂರು ವಲಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ದೊಡ್ಡಿಹಳ್ಳಿ ಗ್ರಾಮದ ಸಂಜುಕುಮಾರ್ ಮಾತನಾಡಿ, ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣವೆ ಚಿರತೆ ಹಿಡಿಯುವುದಕ್ಕೆ ಮುಂದಾಗಬೇಕು. ಇಲ್ಲದಿದ್ದಲ್ಲಿ ಗ್ರಾಮಸ್ಥರೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅರಣ್ಯ ರಕ್ಷಕರಾದ ವೇದರಾಜ್, ಸಂತೋಷ್‍ಕುಮಾರ್, ಸಿಬ್ಬಂದಿ ನವೀನ್, ದೊಡ್ಡಿಹಳ್ಳಿ ಗ್ರಾಮಸ್ಥ ಉಮಾಶಂಕರ್, ವಿಶ್ವನಾಥ್, ಚಂದ್ರಶೇಖರ್, ಯತೀಶ್ ಇದ್ದರು.

Facebook Comments

Sri Raghav

Admin