ನೂತನ ಶಾಸಕರಿಗೆ ಸ್ಪೀಕರ್ ಹೇಳಿದ ಕಿವಿಮಾತೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Speaker--1

ಬೆಂಗಳೂರು, ನ.15- ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರು ಪ್ರತಿ ಹಂತದಲ್ಲೂ ಜನರನ್ನೇ ಪ್ರತಿನಿಧಿಸುವಂತಿರಬೇಕು ಎಂದು ನೂತನ ಶಾಸಕರಿಗೆ ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಸಲಹೆ ನೀಡಿದರು. ಕರ್ನಾಟಕ ವಿಧಾನ ಮಂಡಲ ತರಬೇತಿ ಸಂಸ್ಥೆ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ವಿಧಾನಸಭೆ, ವಿಧಾನ ಪರಿಷತ್ ಸೇರಿದಂತೆ ಶಾಸನ ಸಭೆಗಳಲ್ಲಿ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಶಾಸಕರು ಕಾರ್ಯ ನಿರ್ವಹಿಸಬೇಕು. ಅಧಿವೇಶನದಲ್ಲಿ ಶಾಸಕರ ಸಮಸ್ಯೆಗಳಿಗಿಂತ ಹೆಚ್ಚಾಗಿ ಸಾರ್ವಜನಿಕರ ಹಿತಾಸಕ್ತಿಗೆ ಆದ್ಯತೆ ನೀಡುವ ಮೂಲಕ ಅವರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಕಿವಿಮಾತು ಹೇಳಿದರು.

ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ವರ್ಗಾವಣೆ ವಿಚಾರ, ಅಧಿಕಾರಿಯೊಬ್ಬರ ಅಮಾನತು ವಿಚಾರ ಶಾಸಕರಿಗೆ ಪ್ರತಿಷ್ಠೆಯಾಗಬಾರದು. ರಸ್ತೆ ನಿರ್ಮಾಣ , ಕುಡಿಯುವ ನೀರಿನ ಸಮಸ್ಯೆಗಳು ಶಾಸಕರಿಗೆ ಪ್ರತಿಷ್ಠೆಯಾಗಬೇಕು. ಶಾಸಕ ಸ್ಥಾನದ ಗೌರವಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕೆಂದು ಸಲಹೆ ಮಾಡಿದರು. ವಿಶ್ವಕ್ಕೆ ಸಂಸದೀಯ ಪ್ರಜಾಪ್ರಭುತ್ವ ಬಿಟ್ಟು ಬೇರೆ ದಾರಿ ಇಲ್ಲ. ಮಿಲಿಟರಿ ಆಡಳಿತ, ಸರ್ವಾಧಿಕಾರಿ ಆಡಳಿತಗಳು ಸರಿಯಾದ ಫಲ ಕೊಟ್ಟಿಲ್ಲ. ಸಂಸದೀಯ ಪ್ರಜಾಪ್ರಭುತ್ವ 700 ವರ್ಷದಷ್ಟು ಹಳೆಯದು. ಇದು ಬ್ರಿಟನ್‍ನಲ್ಲಿ ಮೊಳಕೆಯೊಡೆದಿದೆ. ಜನಹಿತ ಗಣನೆಗೆ ತೆಗೆದುಕೊಳ್ಳದೆ ಆಡಳಿತ ನಡೆಸುವ ಚಕ್ರಾಧಿಪತ್ಯದ ವಿರುದ್ಧ ತಿರುಗಿ ಬೀಳುವುದೇ ಪ್ರಜಾಪ್ರಭುತ್ವ ಎಂದರು.

ಸಾರ್ವಜನಿಕರ ಹಿತ, ದೇಶದ, ರಾಜ್ಯದ ಹಿತ ಬಂದಾಗ ಪಕ್ಷ ಭೇದ ಮರೆತು ಶಾಸಕರು ಕಾರ್ಯ ನಿರ್ವಹಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಿಗೂ ಸರ್ವಾಧಿಕಾರಿ ಮನೋಭಾವ ಇರಬಾರದು. ಭಾರತದಲ್ಲಿ ಪ್ರಜಾಪ್ರಭುತ್ವದ ನೆರಳಲ್ಲೇ ಸರ್ವಾಧಿಕಾರ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.ವಿಧಾನ ಸಭೆ, ಪರಿಷತ್‍ಗೆ ಆಯ್ಕೆಯಾಗಿರುವ ಶಾಸಕರು ಅದೃಷ್ಟವಂತರು ಹಾಗೂ ಪುಣ್ಯವಂತರಾಗಿದ್ದು , ಸದನದ ಗೌರವವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಅಧಿವೇಶನ ನಡೆಯುವ ಸಂದರ್ಭದಲ್ಲಿ ಗೈರು ಹಾಜರಾಗಬಾರದು. ಸದನ ನಡೆಯುವಾಗ ಹೊರಗೆ ಕೂರಬಾರದು. ಸಾರ್ವಜನಿಕ ಮಹತ್ವದ ವಿಚಾರಗಳ ಗಮನ ಸೆಳೆಯಬೇಕು ಎಂದು ಕಿವಿಮಾತು ಹೇಳಿದರು.

ವಿಧಾನಮಂಡಲದ ಸಮಿತಿ ಸಭೆಗಳಿಗೆ ಗೈರು ಹಾಜರಾಗಬಾರದು. ಶಾಸಕರಿಗೆ ಕೌಟುಂಬಿಕ ಹಿನ್ನೆಲೆ, ವರ್ಚಸ್ಸು , ಸಿರಿ-ಸಂಪತ್ತಿಗಿಂತ ಹೆಚ್ಚಾಗಿ ಜನರ ಸಮಸ್ಯೆ ಮುಖ್ಯವಾಗಬೇಕು. ಮೊದಲ ಬಾರಿಗೆ ಆಯ್ಕೆಯಾದ ಶಾಸಕರಿಗೆ ವಿಧಾನ ಮಂಡಲದ ಕಾರ್ಯ ಕಲಾಪಗಳ ಜವಾಬ್ದಾರಿ , ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶವೇ ಇಂದಿನ ಕಾರ್ಯಕ್ರಮವಾಗಿದೆ. ಯಾರು ಯಾರಿಗೂ ತರಬೇತಿ ನೀಡುವುದಲ್ಲ. ಎಲ್ಲರೂ ಸಮಾನರೇ. ತಮ್ಮ ಕರ್ತವ್ಯಗಳ ಬಗ್ಗೆ ಅರಿತು ಕಾರ್ಯ ನಿರ್ವಹಿಸಬೇಕು ಎಂದರು.

ವಿಧಾನಸಭೆಗೆ 224 ಮಂದಿ ಶಾಸಕರು , ಪರಿಷತ್‍ಗೆ 75 ಮಂದಿ ಸದಸ್ಯರು ಆಯ್ಕೆಯಾಗುತ್ತಾರೆ. ಯಾವುದೋ ಅಗೋಚರದ ಶಕ್ತಿ ನಿಮ್ಮ ಹಿಂದೆ ಇದ್ದಾಗ ಮಾತ್ರ ಶಾಸನಸಭೆಗಳ ಮೆಟ್ಟಿಲು ಹತ್ತಲು ಸಾಧ್ಯ. ನಾವು ವಿಧಾನಸಭಾಧ್ಯಕ್ಷರಾದ ನಂತರ ಸಾರ್ವಜನಿಕ ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದರು.ಶಾಸನ ಸಭೆಗಳಿಗೆ ಬರುವ ಮುನ್ನ ಪೂರ್ವ ಸಿದ್ಧತೆ ಮಾಡಿಕೊಂಡು ಬನ್ನಿ ಎಂದು ಹೇಳುವ ಮೂಲಕ ಅಧಿವೇಶನದಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದರ ಬಗ್ಗೆ ರಮೇಶ್‍ಕುಮಾರ್ ಅವರು ಮಾರ್ಗದರ್ಶನ ನೀಡಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ವಿಧಾನ ಮಂಡಲದ ಸದನ ಸಮಿತಿಗಳಿಗೆ ಶಾಸಕರು ತಪ್ಪದೆ ಹಾಜರಾಗಬೇಕು. ಅಲ್ಲಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಸಾಧ್ಯವಿದೆ. ಸಹಿ ಮಾಡಿ ಹೋಗಬಾರದು. ಸಭಾಧ್ಯಕ್ಷರು , ಸಭಾಪತಿಗಳು ರೂಲಿಂಗ್ ನೀಡಿದಾಗ ಶಾಸಕರು ಗೌರವ ಕೊಡಬೇಕು. ಹೆಚ್ಚು ಅಧ್ಯಯನ ಶೀಲರಾಗಬೇಕು ಎಂದರು.  ಸದನದ ಕಾರ್ಯ ಕಲಾಪಗಳು ಮುಗಿಯುವವರೆಗೂ ಹಾಜರಿದ್ದು , ಕಲಾಪವನ್ನು ಅರ್ಥಪೂರ್ಣಗೊಳಿಸಬೇಕು ಎಂದು ಸಲಹೆ ಮಾಡಿದ ಅವರು, ಇತ್ತೀಚೆಗೆ ಶಾಸನ ಸಭೆಗಳಿಗೆ ಬಂದವರು ಸಹಿ ಮಾಡಿ ಲಾಂಜ್ (ಮಾಗಸಾಲೆ) ನಲ್ಲಿ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್.ಶಂಕರ್, ಅರಣ್ಯ ಸಚಿವ ಆರ್.ಶಂಕರ್, ವಿಧಾನಸಭೆ ನಿರ್ದೇಶಕಿ ವಿಶಾಲಾಕ್ಷಿ ಪಾಲ್ಗೊಂಡಿದ್ದರು.

Facebook Comments

Sri Raghav

Admin