ಭಾರತ-ಚೀನಾ ಉನ್ನತಾಧಿಕಾರಿಗಳ ಮಹತ್ವದ ಸಭೆಯಲ್ಲಿ ಸೇನಾ ಸಹಕಾರ ವಿನಿಮಯಕ್ಕೆ ಸಮ್ಮತಿ

ಈ ಸುದ್ದಿಯನ್ನು ಶೇರ್ ಮಾಡಿ

ind v chainaಬೀಜಿಂಗ್, ನ.15-ಭಾರತ ಮತ್ತು ಚೀನಾದ ಉನ್ನತಾಧಿಕಾರಿಗಳು ಇಂದು ಒಂಭತ್ತನೇ ವಾರ್ಷಿಕ ರಕ್ಷಣಾ ಮತ್ತು ಭದ್ರತೆ ಸಭೆಯಲ್ಲಿ ಪಾಲ್ಗೊಂಡು ಪರಸ್ಪರ ಸೇನಾ ಮಾಹಿತಿ ವಿನಿಮಯಗಳಿಗೆ ಸಮ್ಮತಿ ನೀಡಿದ್ದಾರೆ. ದೋಕ್ಲಂ ಗಡಿ ಬಿಕ್ಕಟ್ಟಿನಿಂದಾಗಿ ಒಂದು ವರ್ಷ ಅಂತರದ ನಂತರ ನಡೆದ ಇಂಡೋ-ಚೀನಾ ಉನ್ನತಾಧಿಕಾರಿಗಳ ಸಭೆ ಮಹತ್ವ ಪಡೆದುಕೊಂಡಿದೆ. ಚೀನಾ ರಾಜಧಾನಿ ಬೀಜಿಂಗ್‍ನಲ್ಲಿ ನಡೆದ ಈ ಸಭೆಯಲ್ಲಿ ಭಾರತದ ರಕ್ಷಣಾ ಇಲಾಖೆ ಕಾರ್ಯದರ್ಶಿ ಸಂಜಯ್ ಮಿತ್ರಾ ನೇತೃತ್ವ ನಿಯೋಗ ಭಾಗವಹಿಸಿತ್ತು. ಭಾರತೀಯ ಭೂಸೇನೆ, ವಾಯುಪಡೆ ಮತ್ತು ನೌಕಾದಳದ ಉನ್ನತಾಧಿಕಾರಿಗಳು ಈ ನಿಯೋಗದಲ್ಲಿದ್ದರು.

ಚೀನಾದ ಕೇಂದ್ರೀಯ ಸೇನಾ ಆಯೋಗದ ಉನ್ನತಾಧಿಕಾರಿಗಳು ಪಾಲ್ಗೊಂಡು ಉಭಯ ದೇಶಗಳ ರಕ್ಷಣೆ ಮತ್ತು ಭದ್ರತೆ ಸಂಬಂಧಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಿದರು. ಸಭೆಯ ಅಂತ್ಯದಲ್ಲಿ ಭಾರತ-ಚೀನಾ ನಡುವಣ ರಕ್ಷಣಾ ಮಾಹಿತಿ ವಿನಿಮಯ ಕುರಿತು ಒಪ್ಪಿಗೆ ಸೂಚಿಸಲಾಯಿತು. ಈ ಮಾತುಕತೆ ಫಲಪ್ರದವಾಗಿದೆ ಎಂದು ಚೀನಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಸಭೆ ನಂತರ ಸಂಜಯ್ ಮಿತ್ರಾ ಅವರು ಚೀನಾ ರಕ್ಷಣಾ ಸಚಿವ ವೀ ಫೆಂಘೀ ಅವರನ್ನು ಭೇಟಿ ಮಾಡಿದ್ದರು.ಕಳೆದ ವರ್ಷ ಇಂಡೋ-ಚೀನಾ ಗಡಿ ಸಮೀಪ ಚೀನಿ ಸೇನಾ ಪಡೆಗಳ ಚಟುವಟಿಕೆ ಬಿರುಸುಗೊಂಡ ಕಾರಣ ದೋಕ್ಲಂ ಸರಹದ್ದು ಪ್ರದೇಶದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿ ಉಭಯ ದೇಶಗಳ ನಡುವೆ ಯುದ್ಧದ ಕಾರ್ಮೋಡಗಳು ಕವಿದಿತ್ತು. 73 ದಿನಗಳ ಕಾಲ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದರಿಂದ ಕಳೆದ ವರ್ಷ ಎರಡು ದೇಶಗಳ ನಡುವೆ ವಾರ್ಷಿಕ ಸಭೆ ನಡೆಯಲಿಲ್ಲ. ಈ ವರ್ಷ ಮತ್ತೆ ಭಾರತ-ಚೀನಾ ನಡುವೆ ರಕ್ಷಣಾ ಮತ್ತು ಭದ್ರತೆ ಸಹಕಾರ ಮಾತುಕತೆ ಫಲಪ್ರದವಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

Facebook Comments