ವೀರ ಸಾವರ್ಕರ್ ಬಗ್ಗೆ ಸುಳ್ಳು ಹೇಳಿದ ರಾಹುಲ್ ವಿರುದ್ಧ ಪೊಲೀಸ್ ಕೇಸ್

ಈ ಸುದ್ದಿಯನ್ನು ಶೇರ್ ಮಾಡಿ

Rahul--01

ಮುಂಬೈ, ನ.15 (ಪಿಟಿಐ)-ಹಿಂದುತ್ವ ಪ್ರತಿಪಾದಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸುಳ್ಳು ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಅವರ ವಿರುದ್ಧ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಾಗಿದೆ.

ವೀರ ಸಾವರ್ಕರ್ ಅವರ ಮೊಮ್ಮಗ ರಂಜೀತ್ ಸಾವರ್ಕರ್ ಈ ಸಂಬಂಧ ಮುಂಬೈನ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಸುಳ್ಳು ಹೇಳಿಕೆ ನೀಡಿ ಜನರಿಗೆ ತಪ್ಪು ಮಾಹಿತಿ ನೀಡಿರುವ ರಾಹುಲ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

ರಾಹುಲ್ ಚುನಾವಣಾ ರ್ಯಾಲಿಯೊಂದರ ಸಂದರ್ಭದಲ್ಲಿ ವೀರ ಸಾವರ್ಕರ್ ಅವರ ಬಗ್ಗೆ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅವರು ಕಾರಾಗೃಹದಲ್ಲಿದ್ದಾಗ ಬ್ರಿಟಿಷರಲ್ಲಿ ತಮ್ಮ ಕ್ಷಮೆ ಕೋರಿ ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಹಾಗೂ ಇನ್ನು ಮುಂದೆ ಇಂಥ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ ಎಂದು ಹೇಳಿದ್ದಾಗಿ ತಿಳಿಸಿದ್ದರು.

ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಾವರ್ಕರ್ ಕುಟುಂಬ ರಾಹುಲ್ ಹೇಳಿಕೆ ಶುದ್ಧ ಸುಳ್ಳು. ವೀರ ಸಾವರ್ಕರ್ ಬ್ರಿಟಿಷರ ವಿರುದ್ಧ ಹೋರಾಡಿ ಅವರ ದುರಾಡಳಿತವನ್ನು ಖಂಡಿಸಿ ಭಾರೀ ಪ್ರತಿಭಟನೆ ನಡೆಸಿದ್ದರು. ತತ್ಪರಿಣಾಮವಾಗಿ 27 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. ಅಪ್ಪಟ ದೇಶಪ್ರೇಮಿ ಮತ್ತು ಸ್ವಾಭಿಮಾನಿಯಾದ ಅವರು ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ವಾಸ್ತವ ಸಂಗತಿ ಹೀಗಿರುವಾಗ ಅವರು ಬ್ರಿಟಿಷರ ಬಳಿ ಕ್ಷಮೆ ಕೋರುವ ಪ್ರಮೇಯವೇ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Facebook Comments