ಅಯ್ಯಪ್ಪನ ದರ್ಶನಕ್ಕೆ ಬಂದ ತೃಪ್ತಿ ದೇಸಾಯಿಗೆ ಏರ್ಪೋರ್ಟ್ ನಲ್ಲೆ ತಡೆ, ಉದ್ವಿಗ್ನ ಪರಿಸ್ಥಿತಿ

ಈ ಸುದ್ದಿಯನ್ನು ಶೇರ್ ಮಾಡಿ

Trupti-Desai

ಕೊಚ್ಚಿ, ನ.16- ವಿಶ್ವವಿಖ್ಯಾತ ಶಬರಿಮಲೆ ದೇವಸ್ಥಾನದಲ್ಲಿ ಇಂದಿನಿಂದ ಭಕ್ತರಿಗೆ ದರ್ಶನ ಲಭಿಸಲಿದ್ದು, ಇದೇ ವೇಳೆ ಮಹಿಳಾ ಭಕ್ತರಿಗೆ ತಡೆ ನೀಡಲು ಸ್ವಾಮಿ ಅಯ್ಯಪ್ಪ ಭಕ್ತರು ಸಜ್ಜಾಗಿರುವುದರಿಂದ ತ್ವೇಷಮಯ ವಾತಾವರಣ ಸೃಷ್ಟಿಯಾಗಿದೆ. ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಶಬರಿಮಲೆ ದೇಗುಲಕ್ಕೆ ತೆರಳುವ ಸಲುವಾಗಿ ಇಂದು ಮುಂಜಾನೆ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದರಾದರೂ ಅವರು ತೀವ್ರ ಪ್ರತಿಭಟನೆ ಎದುರಿಸಬೇಕಾಯಿತು. ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರು ಏರ್ಪೋರ್ಟ್ನಿಂದ ಹೊರಬರಲು ಸಾಧ್ಯವಾಗಿಲ್ಲ.

ಬೆಳಗ್ಗೆ 4.40ಕ್ಕೆ ಪುಣೆಯಿಂದ ಆಗಮಿಸಿರುವ ತೃಪ್ತಿ ಮತ್ತವರ ತಂಡ ಯಾವುದೇ ಕಾರಣಕ್ಕೂ ವಿಮಾನ ನಿಲ್ದಾಣದಿಂದ ಹೊರಗೆ ಹೋಗಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿರುವುದರಿಂದ ಹಾಗೂ ಶಬರಿಮಲೆಯಲ್ಲಿ ಅಯ್ಯಪ್ಪಸ್ವಾಮಿ ದರ್ಶನ ಮಾಡದ ಹೊರತು ಇಲ್ಲಿಂದ ಕದಲುವುದಿಲ್ಲ ಎಂದು ತೃಪ್ತಿ ಪಟ್ಟು ಹಿಡಿದಿರುವುದರಿಂದ ವಿಮಾನ ನಿಲ್ದಾಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.ಸೆ.28ರಂದು ಕೋರ್ಟ್ ಅಂತಿಮ ತೀರ್ಪು ನೀಡಿದ ನಂತರ ಮೂರನೆ ಬಾರಿಗೆ ಅಯ್ಯಪ್ಪ ದೇವಾಲಯದ ಬಾಗಿಲು ತೆರೆಯಲಾಗುತ್ತಿದೆ.

ಪ್ರತಿಭಟನಾಕರರು ಹಿಂಸಾಚಾರಕ್ಕಿಳಿಯಬಾರದು, ಒಮ್ಮೆ ನಾವು ಅಲ್ಲಿ ತಲುಪಿದರೆ ನಮಗೆ ಯಾವ ರೀತಿಯ ಭದ್ರತೆ ನೀಡಿದ್ದಾರೆ ಎಂಬುದು ತಿಳಿಯುತ್ತದೆ. ಒಂದು ವೇಳೆ ನಮಗೆ ಭದ್ರತೆ ನೀಡದಿದ್ದರೂ ನಾವು ಅಲ್ಲಿಗೆ ತೆರಳುತ್ತೇವೆ. ನನಗೆ ಈಗಾಗಲೇ ಹಲವು ಬೆದರಿಕೆ ಕರೆಗಳು ಬಂದಿವೆ. ಹೀಗಾಗಿ ನನ್ನ ಮೇಲೆ ದಾಳಿ ನಡೆಯಬಹುದು. ಆದರೆ, ಯಾವುದೇ ಕಾರಣಕ್ಕೂ ಅಯ್ಯಪ್ಪ ದರ್ಶನ ಪಡೆಯದೆ ವಾಪಸ್ ಮಹಾರಾಷ್ಟ್ರಕ್ಕೆ ತೆರಳುವುದಿಲ್ಲ ಎಂದು ತೃಪ್ತಿ ದೇಸಾಯಿ ಹೇಳಿದ್ದಾರೆ.

ತೃಪ್ತಿ ದೇಸಾಯಿ ಶಬರಿಮಲೆ ದೇವಾಲಯ ಪ್ರವೇಶಿಸುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಏರ್ಪೋರ್ಟ್ ಟ್ಯಾಕ್ಸಿ ಚಾಲಕರು, ತಾವು ಯಾವುದೇ ಕಾರಣಕ್ಕೂ ತೃಪ್ತಿ ದೇಸಾಯಿ ಶಬರಿಮಲೆ ತೆರಳಲು ಬಿಡವುದಿಲ್ಲ, ತಮ್ಮ ಸ್ವಂತ ವಾಹನದಲ್ಲಿ ಅಥವಾ ಪೊಲೀಸ್ ವಾಹನದಲ್ಲಿ ತೆರಳಲಿ ಎಂದು ಹೇಳಿದ್ದಾರೆ. ಶತಮಾನಗಳಷ್ಟು ಹಿಂದಿನ ಸಂಪ್ರದಾಯ ಮುರಿಯಲು ತೃಪ್ತಿ ದೇಸಾಯಿ ಮತ್ತವರ ತಂಡ ಬಂದಿದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ಮುಂದುವರಿಸಿರುವ ಸ್ಥಳೀಯ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೃಪ್ತಿ ದೇಸಾಯಿ ಅಯ್ಯಪ್ಪ ದರ್ಶನ ಪಡೆಯುತ್ತಿಲ್ಲ. ಇಲ್ಲಿನ ಶಾಂತಿ-ನೆಮ್ಮದಿ ಕೆಡಿಸಲು ಬರುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಏರ್ಪೋರ್ಟ್‍ನಲ್ಲಿ ಪ್ರತಿಭಟನೆ ತೀವ್ರಗೊಂಡಿರುವುದರಿಂದ ಪರಿಸ್ಥಿತಿ ಕೈ ಮೀರುವುದನ್ನು ತಡೆಯಲು ಪೊಲೀಸರು ಹರಸಾಹಸ ಮಾಡಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin