ರಾಜ್ಯ ಸರ್ಕಾರಗಳ ವಿರುದ್ಧ ಕೆಂಡ ಕಾರಿದ ಸುಪ್ರೀಂ ಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Supreme-Court

ನವದೆಹಲಿ,ನ.16-ದೇಶದ ವಿವಿಧ ಅಧೀನ ನ್ಯಾಯಾಲಯದಲ್ಲಿ ಕಳೆದ ಹಲವು ವರ್ಷಗಳಿಂದ ಖಾಲಿ ಇರುವ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡದಿರುವುದು ಹಾಗೂ ನ್ಯಾಯಾಲಯಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡದ ರಾಜ್ಯದ ಸರ್ಕಾರಗಳ ವಿರುದ್ಧ ಸುಪ್ರೀಂಕೋರ್ಟ್ ಕೆಂಡ ಕಾರಿದೆ. ನಿಗದಿತ ಅವಧಿಯೊಳಗೆ ಅಧೀನ ನ್ಯಾಯಾಲಯಗಳ ನ್ಯಾಯಾಧೀಶರನ್ನು ಭರ್ತಿ ಮಾಡಬೇಕು. ನ್ಯಾಯಾಲಯಗಳು ಹಾಗೂ ನ್ಯಾಯಾಧೀಶರ ನಿವಾಸಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಸುಪ್ರೀಂಕೋರ್ಟ್ ಎಚ್ಚರಿಸಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ಅವರನ್ನೊಳಗೊಂಡ ಪೀಠ ಸ್ವಯಂ ಅರ್ಜಿ ವಿಚಾರಣೆ ನಡೆಸಿದ ವೇಳೆ, ರಾಜ್ಯ ಸರ್ಕಾರಗಳ ವಿರುದ್ಧ ಕಠಿಣ ಪದಗಳಲ್ಲೇ ತರಾಟೆಗೆ ತೆಗೆದುಕೊಂಡಿದೆ. ಯಾವ ಕಾರಣಕ್ಕಾಗಿ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರನ್ನು ಭರ್ತಿ ಮಾಡಲು ರಾಜ್ಯ ಸರ್ಕಾರಗಳು ಮೀನಾಮೇಷ ಎಣಿಸುತ್ತಿವೆ. ಇದರ ಪರಿಣಾಮ ನಾವು ದಾಖಲಾಗಿರುವ ದೂರುಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಈ ನಿರ್ಲಕ್ಷತನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಪೀಠ ಗುಡುಗಿತು.

ನಮಗೆ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಕೆಲಸ ಮಾಡುವಂತಾಗಬೇಕು. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರಕ್ಕೆ ಇರುವ ತೊಂದರೆಯಾದರೂ ಏನು ಎಂಬುದನ್ನು ತಿಳಿಸಿ. ನಿಮಗೆ ಕನಿಷ್ಠ ಮೂಲಭೂತ ಕಲ್ಪಿಸಿಕೊಡಲು ಸಾಧ್ಯವಿಲ್ಲ ಎನ್ನುವುದಾದರೆ ಸರ್ಕಾರದಲ್ಲಿ ಏನೂ ಇಲ್ಲ ಎಂದು ಹೇಳಿಬಿಡಿ. ಮುಂದಿನದನ್ನು ನಾವು ನೋಡಿಕೊಳ್ಳುತ್ತೇವೆ ಎಂದು ತಾಕೀತು ಮಾಡಿದರು.

ದೇಶ ವಿವಿಧ ಅಧೀನ ನ್ಯಾಯಾಲಯಗಳಲ್ಲಿ 5000ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಈ ಹಿಂದೆ 22,036 ಹುದ್ದೆಗಳ ಪೈಕಿ ಶೀಘ್ರದಲ್ಲೇ ಭರ್ತಿ ಮಾಡಿಕೊಳ್ಳುವ ಆಶ್ವಾಸನೆಯನ್ನು ನೀಡಲಾಗಿತ್ತು. ರಾಜ್ಯ ಸರ್ಕಾರಗಳ ಉದಾನಸೀನದಿಂದಾಗಿ ಬಾಕಿ ಉಳಿದಿರುವ ಕೋಟ್ಯಂತರ ಪ್ರಕರಣಗಳನ್ನು ಇತ್ಯರ್ಥ ಮಾಡಲು ಸಾಧ್ಯವಾಗುತ್ತಿಲ್ಲ. ನ್ಯಾಯಾಲಯದ ಅಂಗಳದಲ್ಲೇ ಸರಿಯಾದ ಮೂಲಭೂತ ಸೌಕರ್ಯಗಳು ಇಲ್ಲವೆಂದಾದರೆ ಕಾರ್ಯ ನಿರ್ವಹಿಸುವುದು ಹೇಗೆ ಎಂದು ಛಾಟಿ ಬೀಸಿದರು.

ದೇಶದ ಅತಿದೊಡ್ಡ ರಾಜ್ಯವೆನಿಸಿದ ಉತ್ತರ ಪ್ರದೇಶವೊಂದರಲ್ಲಿ ಅಧೀನ ನ್ಯಾಯಾಲಯದಲ್ಲಿ ಒಂದು ಸಾವಿರ ಹುದ್ದೆಗಳು ಖಾಲಿ ಇವೆ. ನಂತರದ ಸ್ಥಾನದಲ್ಲಿ ಪಶ್ಚಿಮ ಬಂಗಾಳ ಹಾಗೂ ಮೇಘಾಲಯ ಮೂರನೇ ಸ್ಥಾನದಲ್ಲಿದೆ.  ಮುಂದಿನ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಏನು ಕ್ರಮ ಕೈಗೊಂಡಿದ್ದೀರಿ ಎಂಬುದನ್ನು ಆಯಾ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳೇ ವಿವರಣೆ ನೀಡಬೇಕೆಂದು ಸೂಚಿಸಿತು.

Facebook Comments

Sri Raghav

Admin