ಜನಾರ್ಧನ ರೆಡ್ಡಿ ಯಡಿಯೂರಪ್ಪರನ್ನ ಮೀಟ್ ಮಾಡಿದ್ದೇಕೆ..?

ಈ ಸುದ್ದಿಯನ್ನು ಶೇರ್ ಮಾಡಿ

Janardhan-Reddy--1

ಬೆಂಗಳೂರು,ನ.17- ಆಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಸಿಬಿಐ ಬಂಧನಕ್ಕೊಳಪಟ್ಟಿದ್ದ ರೆಡ್ಡಿ ಜೊತೆ ಯಾರೊಬ್ಬರೂ ವೇದಿಕೆ ಹಂಚಿಕೊಳ್ಳಬಾರದೆಂದು ಬಿಜೆಪಿ ರಾಷ್ಟ್ರೀಯ ನಾಯಕರು ಸ್ಪಷ್ಟ ಸಂದೇಶವನ್ನು ರವಾನಿಸಿದ್ದರು.

ಇದರ ನಡುವೆಯೂ ಕಳೆದ ರಾತ್ರಿ ಜನಾರ್ಧನ ರೆಡ್ಡಿಯವರು ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪನವರ ನಿವಾಸಕ್ಕೆ ತೆರಳಿ ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ರಹಸ್ಯ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ನಾನಾ ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಉಭಯ ನಾಯಕರ ಮಾತುಕತೆ ವಿವರಗಳು ಪೂರ್ಣವಾಗಿ ಲಭ್ಯವಾಗಿಲ್ಲವಾದರೂ ಈ ಪ್ರಕರಣದಲ್ಲಿ ನಾನು ಯಾವುದೇ ರೀತಿಯ ಅಕ್ರಮವೆಸಗಿಲ್ಲ. ರಾಜ್ಯ ಸರ್ಕಾರ ನನ್ನನ್ನು ಗುರಿಯಾಗಿಟ್ಟುಕೊಂಡು ಸುಳ್ಳು ಮೊಕದ್ದಮ್ಮೆ ದಾಖಲಿಸಲು ಪೊಲೀಸರಿಗೆ ಒತ್ತಡ ಹಾಕಿದೆ. ಕಷ್ಟಕಾಲದಲ್ಲಿರುವ ನನಗೆ ಪಕ್ಷ ನೆರವಿಗೆ ಬರಬೇಕೆಂದು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಾನು ಬಿಜೆಪಿ ಪರವಾಗಿ ಎಲ್ಲ ರೀತಿಯ ಕೆಲಸ ಮಾಡಲು ಮುಂದಾಗಿದ್ದೆ. ಆದರೆ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ಅವರು ರೆಡ್ಡಿಗೂ, ಬಿಜೆಪಿಗೂ ಸಂಬಂಧವಿಲ್ಲ ಎಂದು ಹೇಳಿದ್ದರಿಂದ ನೊಂದು ನಾನು ದೂರ ಉಳಿಯುವಂತಾಗಿತ್ತು. ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಒಂದಿಷ್ಟು ಶ್ರಮ ವಹಿಸಿದ್ದರೆ ಇಂದು ಬಿಜೆಪಿ ಅಧಿಕಾರದಲ್ಲಿ ಇರುತ್ತಿತ್ತು. ಅಧ್ಯಕ್ಷರು ಯಾವ ಕಾರಣಕ್ಕಾಗಿ ಈ ರೀತಿ ಹೇಳಿಕೆ ನೀಡಿದರೋ ಗೊತ್ತಿಲ್ಲ ಎಂದು ರೆಡ್ಡಿ ಬಿಎಸ್‍ವೈ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಅಕ್ರಮ ಗಣಿಗಾರಿಕೆ ಕುರಿತಂತೆ ನನ್ನ ಮೇಲಿನ ಆರೋಪಗಳಿಗೆ ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆಯುತ್ತದೆ. ನನ್ನ ಹೆಸರಿನಲ್ಲಿ ಅಕ್ರಮ ಗಣಿಗಾರಿಕೆ ಮಾಡಿದವರು ಇಂದು ರಾಜರೋಷವಾಗಿ ತಿರುಗಾಡುತ್ತಿದ್ದಾರೆ. ಹಳೆಯ ಸೇಡನ್ನು ಮುಂದಿಟ್ಟುಕೊಂಡು ಸರ್ಕಾರ ನನ್ನ ವಿರುದ್ಧ ದ್ವೇಷದ ರಾಜಕಾರಣಕ್ಕೆ ಮುನ್ನುಡಿ ಬರೆದಿದೆ. ಯಾವ ತಪ್ಪು ಮಾಡದಿರುವ ನನ್ನನ್ನು ಕಟ್ಟಿ ಹಾಕುವ ಪ್ರಯತ್ನ ಇದಾಗಿದೆ. ಕಡೆಪಕ್ಷ ನೀವಾದರೂ ನನ್ನ ನೆರವಿಗೆ ನಿಲ್ಲಿ ಎಂದು ರೆಡ್ಡಿ ಮನವಿ ಮಾಡಿದ್ದಾರೆ.

ಬಿಜೆಪಿ ನಾಯಕರನ್ನು ಗುರಿಯಾಗಿಟ್ಟುಕೊಂಡು ಹಳೆ ಪ್ರಕರಣಗಳಿಗೆ ಮರುಜೀವ ನೀಡಲು ದೋಸ್ತಿ ಸರ್ಕಾರ ಮುಂದಾಗಿದೆ. ನನ್ನ ವಿರುದ್ಧವೂ ಹಳೆ ಪ್ರಕರಣಗಳನ್ನು ಸಂಗ್ರಹಿಸಲು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. ಇದಕ್ಕೆ ನಾವು ಜಗ್ಗ ಬಾರದು ಎಂದು ಬಿಎಸ್‍ವೈ ರೆಡ್ಡಿಗೆ ಅಭಯ ನೀಡಿದ್ದಾರೆ. ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‍ಗೆ ಎಲ್ಲ ರೀತಿಯಲ್ಲಿ ಸಹಾಯ ಮಾಡಿದ್ದೆ. ಆದರೆ ಇಂದು ಅದೇ ವ್ಯಕ್ತಿ ನನ್ನ ವಿರುದ್ಧ ಕುಮಾರಸ್ವಾಮಿ ಜೊತೆ ಕೈ ಜೋಡಿಸಿ ನಮ್ಮ ಪಕ್ಷದ ವಿರುದ್ಧವಾಗಿ ಷಡ್ಯಂತ್ರ ರೂಪಿಸುತ್ತಿದ್ದಾರೆ. ಇವರ ಆಟಕ್ಕೆ ಕಡಿವಾಣ ಹಾಕುವುದು ನನಗೂ ಗೊತ್ತು ಎಂದು ಯಡಿಯೂರಪ್ಪ ಹೇಳಿದ್ದಾರೆ.

ನಾವು ಇನ್ನು ಸುಮ್ಮನೆ ಕೈ ಕಟ್ಟಿ ಕೂರಬಾರದು. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತದೆ ಎಂದು ಕಾಂಗ್ರೆಸ್-ಜೆಡಿಎಸ್ ನಾಯಕರು ಹೇಳುವುದಾದರೆ ಅದಕ್ಕೆ ಪ್ರತಿಯಾಗಿ ನಾವು ಕೂಡ ತಿರುಗೇಟು ನೀಡಬೇಕು. ಯಾವ ಕಾರಣಕ್ಕೂ ನೀವು ಧೃತಿಗೆಡಬಾರದೆಂದು ಆತ್ಮವಿಶ್ವಾಸದ ಮಾತುಗಳನ್ನು ರೆಡ್ಡಿಗೆ ಬಿಎಸ್‍ವೈ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವಾರವಷ್ಟೇ ಜನಾರ್ಧನ ರೆಡ್ಡಿಯನ್ನು ಆಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದರು. ನಂತರ ನ್ಯಾಯಾಲಯ ಅವರಿಗೆ ಷರತ್ತುಬದ್ಧ ಜಾಮೀನು ನೀಡಿದ ಬಳಿಕ ಹೊರಬಂದಿದ್ದರು.

Facebook Comments

Sri Raghav

Admin