ಮೈಸೂರು : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

img repedಮೈಸೂರು, ನ.17-ಹಾಡಹಗಲೇ ಮನೆಗೆ ನುಗ್ಗಿದ ಕಾಮುಕನೊಬ್ಬ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ನಂತರ ಆಕೆಯನ್ನು ಹತ್ಯೆ ಮಾಡಿರುವ ಹೇಯ ಘಟನೆ ನಂಜನಗೂಡಿನಲ್ಲಿ ನಡೆದಿದೆ. ನಂಜನಗೂಡಿನ ಚಾಮಲಾಪುರ ಹುಂಡಿಯಲ್ಲಿ ಈ ಮನಕಲಕುವ ಘಟನೆ ನಡೆದಿದೆ. ಬಾಲಕಿಯ ತಂದೆ-ತಾಯಿ ನಂಜನಗೂಡಿನ ಕೈಗಾರಿಕಾ ಪ್ರದೇಶದಲ್ಲಿ ತಳ್ಳುವ ಗಾಡಿಯಲ್ಲಿ ಹೊಟೇಲ್ ನಡೆಸುತ್ತಾರೆ.

ಎಂದಿನಂತೆ ನಿನ್ನೆ ತಂದೆ-ತಾಯಿ ಹೊಟೇಲ್ ನಡೆಸಲು ಹೋಗಿದ್ದರು. ಸಂಜೆ ಇಬ್ಬರು ವಾಪಾಸ್ಸಾದಾಗ ತಮ್ಮ ಪುತ್ರಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ದಿಗ್ಭ್ರಾಂತರಾಗಿದ್ದಾರೆ. 12 ವರ್ಷದ ಬಾಲಕಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಶಾಲೆಯಿಂದ ವಾಪಸ್ಸಾಗಿದ್ದ ಸಂದರ್ಭದಲ್ಲಿ ಕಾಮುಕ ಅವರ ಗುಡಿಸಲು ಮನೆಗೆ ನುಗ್ಗಿ ಅತ್ಯಾಚಾರವೆಸಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಬಾಲಕಿಯ ಮುಖದ ಮೇಲೆ ಪರಚಿದ ಗುರುತುಗಳಿವೆ. ಗುಡಿಸಲಿನ ನೆಲದ ಮೇಲೆ ರಕ್ತ ಹರಿದಿದೆ.

ಮನೆಗೆ ವಾಪಸ್ಸಾದ ಬಾಲಕಿಯ ತಾಯಿ ರತ್ನಮ್ಮ ಹಾಗೂ ತಂದೆ ಕುಮಾರ್ ಹೌಹಾರಿ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಮೇಲ್ನೋಟಕ್ಕೆ ಕತ್ತು ಹಿಸುಕಿ ಕೊಲೆ ಮಾಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments