ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನವಲಿ ಹಿರೇಮಠ್ ಕಣಕ್ಕೆ..?

ಈ ಸುದ್ದಿಯನ್ನು ಶೇರ್ ಮಾಡಿ

Navali Hiramathಬಾಗಲಕೋಟೆ, ನ.17-ಮುಂಬರುವ ಲೋಕಸಭಾ ಚುನಾವಣೆಗೆ ಬಾಗಲಕೋಟೆಯಿಂದ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿರುವ ನವಲಿ ಹಿರೇಮಠ್ ಅವರನ್ನು ಮೈತ್ರಿ ಕೂಟದ ಒಮ್ಮತದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಚಿಂತನೆ ನಡೆಸಲಾಗಿದೆ. ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಲಗೈ ಭಂಟರೂ ಆಗಿರುವ ಹಿರೇಮಠ್ ಅವರು ಮುಖ್ಯಮಂತ್ರಿಯವರ ಆತ್ಮೀಯರೂ ಆಗಿದ್ದಾರೆ.

ಯಾವುದೇ ಅಡಚಣೆ ಉಂಟಾಗಲಾರದು ಎಂಬ ಉದ್ದೇಶದಿಂದ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ಜೆಡಿಎಸ್ ಮೂಲಗಳಿಂದ ತಿಳಿದುಬಂದಿದೆ. ನವಲಿ ಹಿರೇಮಠ್ ರಾಜಕೀಯ ಜೀವನದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಹುಲ್ಲಪ್ಪ ಮೇಟಿ, ನಂಜೇನ್ ಮಠ್ ಹಾಗೂ ಜೆ.ಟಿ.ಪಾಟೀಲ್ ಸೇರಿದಂತೆ ಜಿಲ್ಲೆಯ ಹಲವು ಕಾಂಗ್ರೆಸ್ ನಾಯಕರೂ ಕೂಡ ಇವರ ಬಗ್ಗೆ ಒಲವು ಹೊಂದಿದ್ದಾರೆ.

ಕಳೆದ ಚುನಾವಣೆಯಲ್ಲಿ ಕೊನೆ ಘಳಿಗೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅವರು 20 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದರು. ಉತ್ತರ ಕರ್ನಾಟಕದಲ್ಲಿ ಜೆಡಿಎಸ್‍ಗೆ ಅದರಲ್ಲೂ ಬಾಗಲಕೋಟೆ ಜಿಲ್ಲೆಯಲ್ಲಿ ಶಕ್ತಿ ತುಂಬುವ ಉದ್ದೇಶದಿಂದ ಸಮಾಜ ಸೇವಕರೂ ಆಗಿರುವ ನವಲಿ ಎಸ್. ಹಿರೇಮಠ್ ಅವರನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪಕ್ಷಕ್ಕೆ ಬರಮಾಡಿಕೊಂಡಿದ್ದರು. ಮಾತ್ರವಲ್ಲ, ಬಾಗಲಕೋಟೆಯ ಪಕ್ಷದ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಪಕ್ಷ ಸೇರ್ಪಡೆ ಸಂದರ್ಭದಲ್ಲೇ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವ ಬಗ್ಗೆ ದೇವೇಗೌಡರು ಭರವಸೆ ನೀಡಿದ್ದರು ಎನ್ನಲಾಗಿದೆ.
ನವಲಿ ಹಿರೇಮಠ್ ಅವರನ್ನು ಕಣಕ್ಕಿಳಿಸಿದರೆ ಜಿಲ್ಲೆಯಲ್ಲಿ ಬಿಜೆಪಿಗೆ ತಕ್ಕ ತಿರುಗೇಟು ನೀಡಲು ಸಾಧ್ಯವಾಗುತ್ತದೆ ಎಂಬ ಲೆಕ್ಕಾಚಾರವೂ ಇದರ ಹಿಂದಿದೆ.

Facebook Comments