ಹೆಚ್ಚುವರಿ ಹಣ ಪಡೆಯಲು ಆರ್‌ಬಿಐ ಕಾಯ್ದೆಗೆ ತಿದ್ದುಪಡಿ ಮಾಡಲು ಮುಂದಾದ ಕೇಂದ್ರ..?

ಈ ಸುದ್ದಿಯನ್ನು ಶೇರ್ ಮಾಡಿ

RBI--01

ನವದೆಹಲಿ, ನ.17- ತೀವ್ರ ಚರ್ಚೆಗೆ ಗ್ರಾಸವಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ಮತ್ತು ಕೇಂದ್ರದ ಹಣಕಾಸು ಸಚಿವಾಲಯದ ನಡುವಿನ ಜಟಾಪಟಿ ಮಧ್ಯೆ ಮತ್ತೊಂದು ವಿವಾದಾತ್ಮಕ ನಡೆಗೆ ಸರ್ಕಾರ ಮುಂದಾಗಿದೆ. 1934ರ ಆರ್‍ಬಿಐ ಕಾಯ್ದೆಯನ್ನು ಸರ್ಕಾರ ಬದಲಿಸುವ ಸಾಧ್ಯತೆಯಿದೆ. ನ.19ರಂದು ನವದೆಹಲಿಯಲ್ಲಿ ನಡೆಯಲಿರುವ ಆರ್‍ಬಿಐ ಆಡಳಿತ ಮಂಡಳಿ ಸಭೆ ಸಂದರ್ಭದಲ್ಲೇ ಕೇಂದ್ರ ಸರ್ಕಾರದ ಹಿನ್ನಡೆ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಡುವ ಸ್ಪಷ್ಟ ಸೂಚನೆಗಳು ಲಭಿಸಿವೆ.

ಇದುವರೆಗೆ ಕಾಯ್ದೆ 19 ಬಾರಿ ತಿದ್ದುಪಡಿಯನ್ನು ಕಂಡಿದ್ದರೂ ಮೀಸಲು ಮತ್ತು ಹೆಚ್ಚುವರಿ ಲಾಭ ವರ್ಗಾವಣೆಗೆ ಸಂಬಂಧಪಟ್ಟ ವಿಭಾಗ ಆರ್‍ಬಿಐಯ 84 ವರ್ಷಗಳ ಇತಿಹಾಸದಲ್ಲಿ ಯಾವುದೇ ಬದಲಾವಣೆ ಕಂಡಿರಲಿಲ್ಲ. ಪ್ರತಿವರ್ಷ ಮೀಸಲಿಗೆ ಲಾಭದ ಕೆಲವು ಮೊತ್ತವನ್ನು ಆರ್‍ಬಿಐ ವರ್ಗಾಯಿಸಬೇಕಾಗಿದ್ದು, ಈ ಬಗ್ಗೆ ನಿರ್ಧರಿಸಲು ಸರ್ಕಾರ ಆರ್ಥಿಕ ಚೌಕಟ್ಟನ್ನು ಪ್ರಸ್ತಾಪಿಸಲಿದೆ. ಸದ್ಯಕ್ಕೆ ಬೇರೆ ಕೇಂದ್ರೀಯ ಬ್ಯಾಂಕ್‍ಗಳಂತೆ ಯಾವುದೇ ಪೂರ್ವ ನಿರ್ಧರಿತ ಲಾಭ ಹಂಚಿಕೆ ಸೂತ್ರಗಳಿಲ್ಲ.

ಲಾಭಗಳನ್ನು ವಿನಿಯೋಗಿಸುವ ಪರಿಕಲ್ಪನೆಯನ್ನು ಅಧಿಕೃತಗೊಳಿಸುವ ಮತ್ತು ಅದಕ್ಕೆ ತಕ್ಕಂತೆ ಕಾಯ್ದೆ ತಿದ್ದುಪಡಿ ಮಾಡುವುದು ಸಮಂಜಸವಾಗಿರುತ್ತದೆ ಎಂದು ಸರ್ಕಾರದ ಅಧಿಕಾರಿಯೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್‍ಗೆ ತಿಳಿಸಿದ್ದಾರೆ. ಬರುವ ಸೋಮವಾರ ಆರ್‍ಬಿಐ ಮಂಡಳಿ ಸಭೆ ನಡೆಯಲಿದೆ. ಮೀಸಲು ಖಾತೆಗಳಿಗೆ ವರ್ಗಾವಣೆ ಮಾಡುವ ಲಾಭದ ಶೇಕಡ ಮೊತ್ತದ ಬಗ್ಗೆ ನಿರ್ಧರಿಸಲು ತಾಂತ್ರಿಕ ಸಮಿತಿ ರಚಿಸುವ ಸಾಧ್ಯತೆಯಿದೆ. ಕಳೆದ ಎರಡು ದಶಕಗಳಿಂದೀಚೆಗೆ ಇಂತಹ ಎರಡು ಸಮಿತಿಗಳನ್ನು ರಚಿಸಲಾಗಿದ್ದು, ಅವುಗಳು ವೈರುಧ್ಯ ಸಲಹೆಗಳನ್ನು ನೀಡಿದ್ದವು. ಆದರೆ, ಅವುಗಳನ್ನು ಜಾರಿಗೊಳಿಸಿರಲಿಲ್ಲ.

ಸೋಮವಾರ ನಡೆಯಲಿರುವ ಆರ್‍ಬಿಐ ಆಡಳಿತ ಮಂಡಳಿ ಸಭೆಯತ್ತ ಈಗ ಎಲ್ಲರ ಚಿತ್ತ ನೆಟ್ಟಿದೆ. ಗವರ್ನರ್ ಊರ್ಜಿತ್‍ಪಟೇಲ್ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಗಳ ನಡುವೆಯೇ ನಡೆಯುವ ಈ ಸಭೆಯಲ್ಲಿ ಭಾರೀ ವಾದ-ವಾಗ್ವಾದ ನಡೆಯುವ ಸಾಧ್ಯತೆಗಳಿವೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin