ಸುಪ್ರೀಂ ಆದೇಶ ಪಾಲನೆಗೆ ಸಮಯ ಕೇಳಿದ ಶಬರಿಮಲೆ ದೇವಸ್ವಂ

ಈ ಸುದ್ದಿಯನ್ನು ಶೇರ್ ಮಾಡಿ

Sabarimala--01

ಕೊಚ್ಚಿ, ನ.17- ವಿಶ್ವವಿಖ್ಯಾತ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿರುವಂತೆಯೇ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲದ ದೇವಸ್ವಂ ಮಂಡಳಿ ಸುಪ್ರೀಂ ಕೋರ್ಟ್ ಆದೇಶ ಪಾಲನೆಗೆ ಸಮಯಬೇಕಿದೆ ಎಂದು ಹೇಳಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದು ಅಸಾಧ್ಯ ಎಂದು ಪರೋಕ್ಷವಾಗಿ ಹೇಳಿದೆ. ಮಹಿಳಾ ಪ್ರವೇಶದ ವಿರುದ್ಧ ಹೆಚ್ಚುತ್ತಿರುವ ಜನಾಕ್ರೋಶದ ಹಿನ್ನೆಲೆಯಲ್ಲಿ ದೇವಸ್ವಂ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆ ಕೂಡ ಒಮ್ಮತದ ತೀರ್ಮಾನಕ್ಕೆ ಬರದೆ ವಿಫಲವಾಗಿತ್ತು. ಇದೇ ಕಾರಣಕ್ಕೆ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಆದೇಶ ಪಾಲನೆಗಾಗಿ ಸಮಯಾವಕಾಶ ಕೇಳುವ ಸಾಧ್ಯತೆಯೂ ಇದೆ.ಅಲ್ಲದೆ, ಇದೇ ಗುರುವಾರದಿಂದ ಶಬರಿಮಲೆ ಯಾತ್ರೆ ಆರಂಭವಾಗಲಿದ್ದು, ಎರಡು ತಿಂಗಳ ಯಾತ್ರಾವಧಿಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವುದು ಕೇರಳ ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ.

ಅದರ ನಡುವೆ ಮಹಿಳೆಯರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸುವುದರಿಂದ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಕೇರಳ ಸರ್ಕಾರ ಈ ವಿಚಾರದಲ್ಲಿ ಹಿಂದೇಟು ಹಾಕಿದೆ. ಇಂದು ಕೇರಳ ಬಂದ್: ಏತನ್ಮಧ್ಯೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಹಿಂದೂ ಐಕ್ಯವೇದಿಯ ರಾಜ್ಯಾಧ್ಯಕ್ಷರಾದ ಕೆ.ಪಿ.ಶಶಿಕಲಾ ಅವರನ್ನು ಬಂಧಿಸಿರುವ ಕೇರಳ ಪೊಲೀಸರ ನಡೆಯನ್ನು ಖಂಡಿಸಿ ಶಬರಿಮಲೆ ಕ್ರಿಯಾ ಸಮಿತಿ ಇಂದು ಕೇರಳದಾದ್ಯಂತ ಬಂದ್‍ಗೆ ಕರೆ ನೀಡಿದೆ.

ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೂ ತಮ್ಮ ಪ್ರತಿಭಟನೆಗೆ ಬೆಂಬಲ ನೀಡುವಂತೆ ಮನವಿ ಮಾಡಿದೆ. ಕಳೆದ ರಾತ್ರಿ ಸನ್ನಿಧಾನಂ ಬಳಿ ಪ್ರತಿಭಟನೆ ನಡೆಸಲು ತೆರಳುತ್ತಿದ್ದ ಕೆ.ಪಿ.ಶಶಿಕಲಾ ಅವರನ್ನು ಪೊಲೀಸರು ಮರಕ್ಕೊಟ್ಟಂ ಬಳಿ ಬಂಧಿಸಿದ್ದರು. ಬಂದ್ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವ್ಯಾಪಕ ಭದ್ರತೆ ಒದಗಿಸಲಾಗಿದೆ.

Facebook Comments

Sri Raghav

Admin