ರಾಜ್ಯದಲ್ಲಿ ಎಚ್1ಎನ್1 ಹೆಮ್ಮಾರಿ ಮರಣಮೃದಂಗ, 31 ಮಂದಿ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

H1N1-0
ಬೆಂಗಳೂರು, ನ.18-ರಾಜ್ಯದಲ್ಲಿ ಎಚ್1ಎನ್1 ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರು ರಾಜ್ಯದ ಎಲ್ಲಾ ಜಿಲ್ಲಾ ವೈದ್ಯಾಧಿಕಾರಿಗಳು ಹಾಗೂ ವಿಶೇಷ ವೈದ್ಯಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದರು.

ರಾಜ್ಯದಲ್ಲಿ ಇದುವರೆಗೆ ಎಚ್1ಎನ್1 ಸೋಂಕಿಗೆ ತುತ್ತಾದ 31 ಮಂದಿ ಸಾವನ್ನಪ್ಪಿದ್ದಾರೆ ಅಕ್ಟೋಬರ್ 12ರಂದು ಒಂದೇ ದಿನ ಐದು ಮಂದಿ ಬಲಿಯಾಗಿದ್ದಾರೆ. ನವೆಂಬರ್ 16ರ ವೇಳೆಗೆ ಸಾವಿನ ಸಂಖ್ಯೆ 19ಕ್ಕೆ ಏರಿಕೆಯಾಗಿತ್ತು. ಆದರೆ ಇದುವರೆಗೆ ಒಟ್ಟು 31 ಮಂದಿ ಬಲಿಯಾಗಿರುವುದು ತಿಳಿದುಬಂದಿದೆ.

ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಈಗಾಗಲೇ ತೆಗೆದುಕೊಂಡ ವಿವಿಧ ಆರೋಗ್ಯ ಶಿಕ್ಷಣ ಚಟುವಟಿಕೆಗಳಾದ ಜಾಥಾ, ಶಾಲೆಗಳಲ್ಲಿ ಜಾಗೃತಿ ಮೂಡಿಸುವುದು, ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಸಭೆಗಳಲ್ಲಿ ಆಶಾಗಳ ಮುಖಾಂತರ ಜಾಗೃತಿ ಮೂಡಿಸುತ್ತಿರುವುದು ಮತ್ತು ಈ ಕುರಿತು ರೇಡಿಯೋ, ಟಿವಿ, ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ವಿವಿಧ ಚಟುವಟಿಕೆಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ರೋಗ ಹರಡದಂತೆ ತಡೆಗಟ್ಟಲು ಎಚ್1ಎನ್1 ರೋಗ ಲಕ್ಷಣಗಳಾದ ಜ್ವರ, ಗಂಟು ನೋವು, ಉಸಿರಾಟದ ತೊಂದರೆ ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾರ್ವಜನಿಕರಲ್ಲಿ ಈ ಕುರಿತು ಇನ್ನು ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ವಿವಿಧ ಆರೋಗ್ಯ ಶಿಕ್ಷಣ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಅವರು ಸೂಚಿಸಿದರು.

ಎಚ್1ಎನ್1 ನಿಂದ ಉಂಟಾಗಬಹುದಾದ ಸಾವುಗಳನ್ನು ತಪ್ಪಿಸಲು ಜಿಲ್ಲೆಗಳಲ್ಲಿರುವ ಎಲ್ಲಾ ಖಾಸಗಿ ವೈದ್ಯರಿಗೂ ಶಂಕಿತ ರೋಗಲಕ್ಷಣಗಳುಳ್ಳ ರೋಗಿಗಳು ಬಂದಾಗ ತಕ್ಷಣ ಅಗತ್ಯವಿರುವ ಔಷಧೋಪಚಾರ ಮಾಡಲು ಮಾಹಿತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ಹಾಗೂ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಗಳನ್ನು ನಡೆಸಲು ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಸೂಚಿಸಿದ್ದಾರೆ.

Facebook Comments

Sri Raghav

Admin