‘ಸಕ್ಕರೆ ಕಂಪೆನಿಗಳ ಮಾಲೀಕರಿಗೆ ವೋಟ್ ಹಾಕಿ, ಈಗ ಪ್ರತಿಭಟಿಸಿದರೇನು ಪ್ರಯೋಜನ’ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--01

ಬೆಂಗಳೂರು, ನ.8- ಚುನಾವಣೆಯಲ್ಲಿ ಸಕ್ಕರೆ ಕಂಪೆನಿಗಳ ಮಾಲೀಕರಿಗೆ ಮತ ಹಾಕಿ ಶಾಸಕರು, ಸಚಿರನ್ನಾಗಿ ಮಾಡಿ ತಪ್ಪು ಮಾಡಿದ ಜನ. ಈಗ ಕುಮಾರಸ್ವಾಮಿ ಸರ್ಕಾರ ಕಬ್ಬಿನ ಬಾಕಿ ಕೊಡಿಸಲಿಲ್ಲ ಎಂದು ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.  ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಕೃಷಿ ಮೇಳದ ಕೊನೆಯ ದಿನದ ಸಮಾರೋಪ ಸಮಾರಂಭದಲ್ಲಿ ಇಂದು ಅತ್ತುತ್ತಮ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಹೆಸರಿನಲ್ಲಿ ಕೆಲವರು ಬೆಳಗಾವಿ ಸುವರ್ಣಸೌಧ ಬೀಗ ಹೊಡೆಯುತ್ತಿದ್ದಾರೆ. ರೈತರು ಶಾಂತಿ ಪ್ರೀಯರು, ಅವರ ಹೆಸರಿನಲ್ಲಿ ಕೆಲವು ವಿಚ್ಛಿದ್ರಕಾರಿ ಶಕ್ತಿಗಳು ದರೋಡೆ ಮಾಡುವವರ ರೀತಿಯಲ್ಲಿ ಕಲ್ಲು ತೆಗೆದುಕೊಂಡು ಹೋಗಿ ಸುವರ್ಣ ಸೌಧದ ಬೀಗ ಹೊಡೆಯುತ್ತಿದ್ದಾರೆ, ಅವರು ನಿಜವಾದ ರೈತರಲ್ಲ, ರೈತರ ಹೆಸರಿಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿದ್ದಾರೆ.‌

ನನ್ನ ತಾಳ್ಮೆಗೂ ಮಿತಿ ಇದೆ. ನಾಲ್ಕು ವರ್ಷದಿಂದ ದುಡ್ಡು ಕೊಡದ ಸಕ್ಕರೆ ಕಾರ್ಖಾನೆ ಕಂಪನಿಯ ಮಾಲೀಕರಿಗೆ ಚುನಾವಣೆಯಲ್ಲಿ ಮತ ಹಾಕಿ ಶಾಸಕರು, ಸಚಿವರನ್ನಾಗಿ ಮಾಡಿದ್ದೀರಾ. ಆರು ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ಕುಮಾರಸ್ವಾಮಿ ದುಡ್ಡು ಕೊಡಿಸಲಿಲ್ಲ ಎಂದು ಗಧಾ ಪ್ರಹಾರ ಮಾಡಿ, ಸುವರ್ಣ ಸೌಧದ ಬೀಗ ಹೊಡೆಯುತ್ತಿದ್ದಿರಾ ಎಂದು ಸಿಟ್ಟಾದರು.

ನಾ‌ನು ರೈತರ ಮೇಲೆ ಕ್ರಮ ಕೈಗೊಳ್ಳಲ್ಲ, ಆದರೆ ರೈತರ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವವರನ್ನು ಸುಮ್ಮನೆ ಬಿಡಲ್ಲ ಎಂದು ಎಚ್ಚರಿಕೆ ನೀಡಿದರು. ಸರ್ಕಾರ ಪತನವಾಗಲಿದೆ, 16 ಮಂದಿ ಶಾಸಕರು ಬಿಜೆಪಿಗೆ ಹೋಗುತ್ತಿದ್ದಾರೆ ಎಂದು‌ ಪ್ರಚಾರ ಮಾಡುತ್ತಿದ್ದಾರೆ. ಯಾವ ಶಾಸಕರು ಸರ್ಕಾರ ಬಿಟ್ಟು ಹೋಗಲ್ಲ. ಈ ರೀತಿಯ ಪ್ರಚಾರದಿಂದ ಶಾಸಕರ ಘನತೆ ಧಕ್ಕೆ ತರಲಾಗುತ್ತಿದೆ. ಕ್ಷೇತ್ರದಲ್ಲಿ ಮತದಾರರು ಶಾಸಕರನ್ನು ತಪ್ಪು ತಿಳಿದುಕೊಳ್ಳುತ್ತಾರೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ಕಬ್ಬುಬೆಳೆಗಾರರನ್ನು ಲಾರಿ ಕೆಳಗೆ ಮಲಗಿಸಿ ಅದನ್ನು ಕುಮಾರ ಸ್ವಾಮಿ ಸರ್ಕಾರದ ವಿರುದ್ದದ ಪ್ರತಿಭಟನೆ ಎಂದು ತೋರಿಸಲಾಗುತ್ತಿದೆ. ನಾನು ಅದಕ್ಕೆಲ್ಲ ಹೆದರಲ್ಲ. ನಾನು ಜನರ ಪ್ರಿತಿ ಗಳಿಸಲು ಪ್ರಯತ್ನಿಸುತ್ತಿದ್ದೇನೆ. ವಿಧಾನಸೌಧ ಮೂರನೆ ಮಹಡಿಯಲ್ಲಿ ಕುಳಿತು ಕೆಲಸ ಮಾಡುವ ಮುಖ್ಯಮಂತ್ರಿ ನಾನಲ್ಲ. ರೈತರ ಜಮೀನಿನಲ್ಲಿ ನಿಂತು ಕೆಲಸ ಮಾಡುತ್ತೇನೆ. ರೈತರು ದಯವಿಟ್ಟು ಸರ್ಕಾರದ ಮೇಲೆ ಅನುಮಾನ ಪಡಬೇಡಿ. ರೈತರ ಹಿತ ರಕ್ಷಣೆಗೆ ನನ್ನ ಸರ್ಕಾರ ಬದ್ಧವಾಗಿದೆ. ನಮ್ಮ ಯೋಜನೆಗಳನ್ನು ಬಳಸಿಕೊಳ್ಳಿ‌. ‌ನಮ್ಮ ಸರ್ಕಾರ ಒಂದು ಜಾತಿ, ಪ್ರದೇಶ, ಪಕ್ಷಕ್ಕೆ ಸೀಮಿತವಾಗಿಲ್ಲ. ರಾಜ್ಯದ ಆರುವರೆ ಕೋಟಿ ಜನರ ಹಿತ ರಕ್ಷಣೆಗೆ ಬದ್ಧರಾಗಿದೆ ಎಂದರು. ಕೃಷಿಕನ ಬದುಕು ದುಸ್ಥರವಾಗಿದೆ. ರೈತನ ಸ್ಥಿತಿ ಸುಧಾರಿಸಲು ಅರ್ಧ ಶತಮಾನದಲ್ಲಿ ಅನೇಕ ಸಂಶೋದನೆಗಳ ಮೂಲಕ ಕೃಷಿ ವಿವಿ ಸಾಕಷ್ಟು ಪ್ರಯತ್ನ ನಡೆಸಿದೆ.

ಮಳೆಕೊರತೆಯಿಂದ ರೈತರ ಕಷ್ಟ ಹೆಚ್ಚಾಗಿದೆ. ಬೀತ್ತನೆ ಬೀಜ ಮೊಳಕೆ ಹೊಡೆಯದೆ ಬೆಳೆ ನಷ್ಟ ಅನುಭವಿಸುತ್ತಿದ್ದಾನೆ. ಕತ್ತಲಿನಲ್ಲಿರುವ ರೈತನನ್ನು ಬೆಳಕಿಗೆ ತರಲು ನಮ್ಮ ಸರ್ಕಾರ ಅನೇಕ‌ ಪ್ರಯತ್ನ ನಡೆಸಿದೆ. ಹಿಂದಿನ ಕೃಷಿ ಸಚಿವ ಕೃಷ್ಣ ಬೈರೇಗೌಡ ಮತ್ತು ಈಗಿನ ಸಚಿವ ಶಿವಶಂಕರ ರೆಡ್ಡಿ ಇಬ್ಬರೂ ರೈತರ ಏಳಿಗೆಗಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆ ಎಂದರು. ಮಳೆ ಕೊರತೆಯಿಂದ ಆರೇಳು ವರ್ಷದಲ್ಲಿ ರಾಜ್ಯದಲ್ಲಿ ಸುಮಾರು 50 ಸಾವಿರ ಕೋಟಿ ಬೆಳೆ ನಷ್ಟವಾಗಿದೆ. ತಾತ್ಕಾಲಿಕ ಪರಿಹಾರವಾಗಿ ನಮ್ಮ ಸರ್ಕಾರ 45 ಸಾವಿರ ಕೋಟಿ ಬೆಳೆ ಸಾಲ ಮನ್ನಾ ಮಾಡಿದ್ದೆ. ಸಾಲಮನ್ನಾದ ವಿಷಯದಲ್ಲಿ ಯಾವುದೇ ಅನುಮಾನ ಬೇಡ. ಸುಳ್ಳು ಪ್ರಚಾರಕ್ಕೆ ಕಿವಿಗೊಡಬೇಡಿ. ಬರುವ ಜೂನ್ ಒಳಗೆ ನಿಮ್ಮ ಸಾಲದ ಹಣ ತಿರುವಳಿಯಾಗಲಿದೆ. ಯಾವ ರೈತರು ಆತ್ಮಹತ್ಯೆಗೆ ಕೈ ಹಾಕದೆ ನೆಮ್ಮದಿಯಿಂದ, ಧೈರ್ಯವಾಗಿರಿ.

ಬ್ಯಾಂಕ್‌ಗಳಿಗೆ ಸಾಲದ ಹಣ ಮರುಪಾವತಿಸಲು ಮೂರು ನಾಲ್ಕು ವರ್ಷ ಬೇಡ. ಸರ್ಕಾರ ರಚನೆಯಾಗಿ ಕೇವಲ‌ ಆರು ತಿಂಗಳಾಗಿದೆ. ಇನ್ನೂ ಸ್ವಲ್ಪ ಸಮಯ ಕೊಡಿ‌ಸಾಕು. ಈಗಾಗಲೇ ಐಎಎಸ್ ಅಧಿಕಾರಿಯನ್ನು ವಿಶೇಷವಾಗಿ ನೇಮಿಸಿ ಕ್ರಮ‌ ಕೈ ಗೊಂಡಿದ್ದೇವೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ತೆಂಗಾಣ, ಆಂಧ್ರ ಪ್ರದೇಶ ಸರ್ಕಾರಗಳು ಸಾಲ ಮನ್ನಾ ಮಾಡಿ ಎರಡು ಮೂರು ವರ್ಷವಾದರೂ ಬ್ಯಾಂಕ್ ಗಳಿಗೆ ಹಣ ಪಾವತಿಸಿಲ್ಲ. ನಾವು ಅಷ್ಟು ಸಮಯ ಕೇಳಲ್ಲ‌ . ಬಹುತೇಕ ಜೂನ್ ವೇಳೆಗೆ ಸಾಲ ಚುಕ್ತಾ ಮಾಡುತ್ತೇವೆ ಎಂದು ಭರವಸೆ ನೀಡಿದರು.

ರೈತರು ಸರ್ಕಾರದ ಸಲಹೆ ಆಧರಿಸಿ ಕೃಷಿ ಪದ್ಧತಿಯನ್ನ ಬದಲಾವಣೆ ಮಾಡಿಕೊಂಡರೆ ಕೃಷಿ ಲಾಭದಾಯಕವಾಗಲಿದೆ. ಸಾಲದ ಸುಳಿಯಿಂದ ಹೊರ ಬಂದು, ಆರ್ಥಿಕವಾಗಿ‌ ಸಬಲರಾಗುತ್ತಿರಾ. ಸರ್ಕಾರಕ್ಕೆ ಸಾಲ ನೀಡುವಷ್ಟು ರೈತರನ್ನು ಸಬಲಗೊಳಿಸಲು ನಾವು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು.
ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಂಡು ರಫ್ತು ಗುಣಮಟ್ಟದ ಕೃಷಿ ಕೈಗೊಳ್ಳಬೇಕಿದೆ. ತನ್ಮೂಲಕ ವೈಜ್ಙಾನಿಕ ಬೆಲೆ ಸಿಗುವಂತಾಗಬೇಕು ಎಂದರು.

ಮೇಳ ಯಶಸ್ವಿಗೆ ವಿವಿಯ ಎಲ್ಲರನ್ನು ಮುಖ್ಯಮಂತ್ರಿ ಅಭಿನಂದಿಸಿದರು. ಗ್ರಾಮೀಣಾಭಿವೃದ್ದಿ‌ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಞಬೈರೇಗೌಡ ಮಾತನಾಡಿ, ದೇಶದ ಯಾವ ರಾಜ್ಯವೂ ತೋರಿದಷ್ಟು ದೈರ್ಯವನ್ನು ತೋರಿಸಿ ನಮ್ಮ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೊತೆ ಇಡೀ ಸರ್ಕಾರವಿದೆ. ಕುಮಾರಸ್ವಾಮಿ ಅವರು ಯಾವುದಕ್ಕೂ ಹಿಂದೇಟು ಹಾಕುವ ಅಗತ್ಯ ಇಲ್ಲ ಎಂದು ಭರವಸೆ ನೀಡಿದರು.

Facebook Comments

Sri Raghav

Admin