ಪೇಜಾವರ ಶ್ರೀಗಳ ಬೆಂಗಾವಲು ವಾಹನಕ್ಕೆ ಕಾರು ಡಿಕ್ಕಿ ಹೊಡೆದು ದಂಪತಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident--01

ಹೊಸಕೋಟೆ, ನ.18- ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳಿಗೆ ಬೆಂಗಾವಲು ನೀಡುತ್ತಿದ್ದ ಪೊಲೀಸ್ ವಾಹನಕ್ಕೆ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಂದು ನಡೆದಿದೆ. ಚಿಂತಾಮಣಿ ಮೂಲದ ರಾಮಕೃಷ್ಣಯ್ಯ(65), ಹಾಗೂ ಸುಲೋಚನಮ್ಮ(55) ಮೃತಪಟ್ಟ ದಂಪತಿ.

ಪೇಜಾವರ ಸ್ವಾಮೀಜಿಗಳಿಗೆ ಬೆಂಗಾವಲು ನೀಡುತ್ತಿದ್ದ ಕಾರಿನಲ್ಲಿದ್ದ ಎಎಸ್‍ಐ ಶಂಭಯ್ಯ ಅವರಿಗೂ ಗಾಯಗಳಾಗಿದ್ದು, ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವಾಮೀಜಿಯವರು ತಮ್ಮ ಬೆಂಗಾವಲುನೊಂದಿಗೆ ಹೊಸಕೋಟೆಯಿಂದ ಚಿಂತಾಮಣಿ ರಸ್ತೆಯಲ್ಲಿ ಇಂದು ಬೆಳಗ್ಗೆ ಹೋಗುತ್ತಿದ್ದಾಗ ಕರಪನಹಳ್ಳಿ ಗೇಟ್ ಬಳಿ ಈ ಅವಘಡ ಸಂಭವಿಸಿದೆ. ಸ್ವಾಮೀಜಿ ಇದ್ದ ಕಾರಿಗೆ ಯಾವುದೇ ಹಾನಿಯಾಗಿಲ್ಲ. ಬೆಂಗಾವಲು ವಾಹನದಿಂದ ಸುಮಾರು 300 ಮೀಟರ್ ದೂರದಲ್ಲಿ ಸ್ವಾಮೀಜಿ ಕಾರು ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬೇರೆ ಕಾರನ್ನು ಹಿಂದಿಕ್ಕುವ ರಭಸಕ್ಕೆ ದಂಪತಿ ಇದ್ದ ಕಾರು ಸ್ವಾಮೀಜಿಯವರ ಬೆಂಗಾವಲು ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಸಭಕ್ಕೆ ಅವರ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಕ್ಷಣ ಸ್ವಾಮೀಜಿಯವರು ತಾವಿದ್ದ ಕಾರು ನಿಲ್ಲಿಸಿ ಸ್ಥಳಕ್ಕೆ ಬಂದು ವೀಕ್ಷಿಸಿ, ಅರ್ಧ ಗಂಟೆಗೂ ಹೆಚ್ಚು ಕಾಲ ಸ್ಥಳದಲ್ಲಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.

ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಸ್ವಾಮೀಜಿಯವರು ಬಳಿಕ ಚಿಕ್ಕಬಳ್ಳಾಪುರದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ತೆರಳಿದರು. ಪೊಲೀಸ್ ಬೆಂಗಾವಲು ಕಾರು ಒಂದು ವೇಳೆ ಇಲ್ಲದೇ ಇದ್ದರೆ ಇಂಡಿಗೋ ಕಾರು ನೇರವಾಗಿ ಶ್ರೀಗಳ ಕಾರಿಗೆ ಡಿಕ್ಕಿ ಹೊಡೆಯುತ್ತಿತ್ತು ಎನ್ನಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂದಗುಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ನಂದಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin