ಬ್ಯಾಂಕ್‍ನಿಂದ ನೋಟಿಸ್ ಬಂದಿದ್ದರಿಂದ ರೈತ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

suicideದೇವದುರ್ಗ  , ನ.18-ಸಾಲ ಪಡೆದಿದ್ದ ಬ್ಯಾಂಕ್‍ನಿಂದ ನೋಟಿಸ್ ಬಂದಿದ್ದರಿಂದ ಹೆದರಿದ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದೇವದುರ್ಗದ ಬೆಣಕಲ್ ನಿವಾಸಿ ರಾಮಪ್ಪ (35) ಆತ್ಮಹತ್ಯೆಗೆ ಶರಣಾದ ರೈತ. ಅವರು ಆಕ್ಸಿಸ್ ಬ್ಯಾಂಕ್‍ನಿಂದ 10 ಲಕ್ಷ ರೂ. ಕೃಷಿ ಸಾಲ ಪಡೆದಿದ್ದರು. ರೈತರಿಗೆ ನೋಟಿಸ್ ನೀಡಿ ಬೆದರಿಸುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ನಿನ್ನೆಯಷ್ಟೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ.

ಮುಖ್ಯಮಂತ್ರಿಯವರ ಎಚ್ಚರಿಕೆಗೆ ಕ್ಯಾರೇ ಎನ್ನದ ಆ್ಯಕ್ಸಿಸ್ ಬ್ಯಾಂಕ್ ದೇವದುರ್ಗದ ರಾಮಪ್ಪ ಅವರಿಗೆ ನೋಟಿಸ್ ನೀಡಿತ್ತು. ರಾಮಪ್ಪ ಅವರು ಕೃಷಿ ಸಾಲವಾಗಿ 10 ಲಕ್ಷ ರೂ. ಸಾಲ ಪಡೆದಿದ್ದರು. ಮುಖ್ಯಮಂತ್ರಿ ಸಾಲ ಮನ್ನಾ ಘೋಷಣೆ ಮಾಡಿದ್ದರಿಂದ ಹರ್ಷಗೊಂಡಿದ್ದ ಅವರು ನಿಶ್ಚಿಂತೆಯಿಂದಿದ್ದರು. ಆದರೆ ಬ್ಯಾಂಕ್‍ನಿಂದ ನೋಟಿಸ್ ಬಂದಾಗ ದಿಕ್ಕೇ ತೋಚದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸಾಲ ಮರುಪಾವತಿ ಮಾಡದಿದ್ದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ನೋಟಿಸ್‍ನಲ್ಲಿ ಎಚ್ಚರಿಕೆ ನೀಡಲಾಗಿತ್ತು. ಇದರಿಂದ ನೊಂದು ಅವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುದ್ದಿ ತಿಳಿದ ದೇವದುರ್ಗ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Facebook Comments