‘ತಾಕತ್ತಿದ್ದರೆ ಮೋದಿ ನನ್ನ ಜೊತೆ 15 ನಿಮಿಷ ಚರ್ಚಿಸಲಿ ‘: ರಾಹುಲ್ ಸವಾಲ್

ಈ ಸುದ್ದಿಯನ್ನು ಶೇರ್ ಮಾಡಿ

Modi-vs-Rahul--0141
ಅಂಬಿಕಾಪುರ (ಛತ್ತೀಸ್‍ಗಢ), ನ.18- ಭಾರತ ಮತ್ತು ಫ್ರಾನ್ಸ್ ನಡುವಣ 59,000 ಕೋಟಿ ರೂ. ಮೌಲ್ಯದ 36 ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಹಗರಣದ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ರಫೇಲ್ ವಿಚಾರ ಕುರಿತು ನನ್ನೊಂದಿಗೆ 15 ನಿಮಿಷ ಚರ್ಚೆ ನಡೆಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್ ಸವಾಲು ಹಾಕಿದ್ದಾರೆ.

ಛತ್ತೀಸ್‍ಗಢ ಚುನಾವಣೆ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಹಲವು ಹಗರಣಗಳು ಹಾಗೂ ಒಪ್ಪಂದ ವಿವಾದಗಳ ಕುರಿತು ನನ್ನಲ್ಲಿರುವ ಪ್ರಶ್ನೆಗಳಿಗೆ ಉತ್ತರಿಸಿರುವ ಮಟ್ಟದಲ್ಲಿ ನರೇಂದ್ರ ಮೋದಿ ಅವರು ಇಲ್ಲ. ಯಾವುದೇ ವೇದಿಕೆಯಲ್ಲಿಯೇ, ಸಮಯದಲ್ಲಿಯೇ ಆದರೂ ರಫೇಲ್ ವಿವಾದ ಕುರಿತು ಪ್ರಧಾನಿಯವರೊಂದಿಗೆ ಚರ್ಚೆ ನಡೆಸಲು ನಾನು ಸಿದ್ಧನಿದ್ದೇನೆ. ರಫೇಲ್ ಕುರಿತು ಮೋದಿಯವರು ನನ್ನೊಂದಿಗೆ 15 ನಿಮಿಷಗಳ ಕಾಲ ಚರ್ಚೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.

ಅನಿಲ್ ಅಂಬಾನಿ, ಹೆಚ್‍ಎಎಲ್, ಫ್ರೆಂಚ್ ಅಧ್ಯಕ್ಷ ಹೇಳಿಕೆ ಹಾಗೂ ವಿಮಾನ ಖರೀದಿಯ ಬೆಲೆ ಕುರಿತು ನಾನು ಮಾತನಾಡುತ್ತೇನೆ. ಎಲ್ಲಾ ಒಪ್ಪಂದವನ್ನೂ ಪ್ರಧಾನಮಂತ್ರಿಗಳೇ ಮಾಡಿದ್ದಾರೆಂದು ರಕ್ಷಣಾ ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ. ಪ್ರಧಾನಮಂತ್ರಿಗಳು ಪ್ರಕ್ರಿಯೆಗಳನ್ನು ಅನುಸರಿಸಿಲ್ಲ. ರಾತ್ರೋರಾತ್ರಿ ಸಿಬಿಐ ನಿರ್ದೇಶಕರನ್ನು ಅಧಿಕಾರದಿಂದ ತೆಗೆದುಹಾಕಲಾಯಿತು. ಇಷ್ಟೆಲ್ಲಾ  ಆದರೂ ನನ್ನ ಪ್ರಶ್ನೆಗಳಿಗೆ ಮೋದಿಯವರು ಉತ್ತರ ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ.

ನೋಟು ನಿಷೇಧ ಕುರಿತಂತೆ ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಮತ್ತೆ ಪುನರುಚ್ಛರಿಸಿದ ರಾಹುಲ್, ನೋಟು ನಿಷೇಧ ನಿರ್ಧಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಉದ್ಯಮ ಕ್ಷೇತ್ರದಲ್ಲಿರುವ ಅವರ ಕೆಲ ಸ್ನೇಹಿತರಿಗೆ ಸಹಾಯಕವಾಗಿದೆ ಎಂದಿದ್ದಾರೆ. ಬಳಿಕ ಛತ್ತೀಸ್‍ಗಢದ ಅವ್ಯವಸ್ಥೆ ಕುರಿತಂತೆ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದಲೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದರೂ, ಯುವಕರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ವಿಫಲರಾಗಿದ್ದಾರೆಂದು ಹೇಳಿದ್ದಾರೆ.

ರಾಜ್ಯದಲ್ಲಿ ರಮಣ್ ಸಿಂಗ್ ಅವರು 15 ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಪ್ರಧಾನಿ ಮೋದಿಯವರು ನಾಲ್ಕೂವರೆ ವರ್ಷ ಅಧಿಕಾರ ಪೂರ್ಣಗೊಳಿಸಿದ್ದಾರೆ. ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸುವಲ್ಲಿ ಎರಡೂ ಸರ್ಕಾರಗಳು ವಿಫಲಗೊಂಡಿವೆ.ರಾಜ್ಯದಲ್ಲಿ ಒಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಸರ್ಕಾರದಲ್ಲಿ ಖಾಲಿ ಇರುವ ಎಲ್ಲಾ ಉದ್ಯೋಗಳನ್ನೂ ಭರ್ತಿ ಮಾಡಲಾಗುತ್ತದೆ. ಅಧಿಕಾರಕ್ಕೆ ಬಂದ 10 ದಿನಗಳೊಳಗಾಗಿ ರಾಜ್ಯ ರೈತರ ಸಾಲಗಳನ್ನು ಮನ್ನಾ ಮಾಡಲಾಗುತ್ತದೆ. ಎಲ್ಲರಿಗೂ ಬೋನಸ್ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin