ತಾಯ್ನಾಡಿಗೆ ಮರಳಿದ ದೀಪ್-ವೀರ್ ನವದಂಪತಿ ಭವ್ಯ ಸ್ವಾಗತ

ಈ ಸುದ್ದಿಯನ್ನು ಶೇರ್ ಮಾಡಿ

Ranveer--01ಮುಂಬೈ, ನ.18-ಇಟಲಿಯ ಐತಿಹಾಸಿಕ ಲೇಕ್ ಕೊಮೊ ದ್ವೀಪದಲ್ಲಿ ನ.14ರಂದು ಸಪ್ತಪದಿ ತುಳಿದು ಸತಿಪತಿಯಾದ ಬಾಲಿವುಡ್ ಸೂಪರ್‍ಸ್ಟಾರ್ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇಂದು ಬೆಳಗ್ಗೆ ತಾಯ್ನಾಡಿಗೆ ಹಿಂದಿರುಗಿದರು. ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನವ ತಾರಾ ದಂಪತಿಯನ್ನು ನೋಡಲು ಅನೇಕ ಅಭಿಮಾನಿಗಳು ಮುಂಜನೆಯಿಂದಲೇ ಏರ್ಪೋರ್ಟ್ನಲ್ಲಿ ಜಮಾಯಿಸಿದ್ದರು.

ಕೈ-ಕೈ ಹಿಡಿದು ಜೊತೆಜೊತೆಯಾಗಿ ಹೆಜ್ಜೆ ಹಾಕಿದ ಸ್ಟಾರ್ ಕಪಲ್‍ಗಳನ್ನು ಮಾಧ್ಯಮದ ಕ್ಯಾಮೆರಾಗಳು ಸೆರೆ ಹಿಡಿದವು. ಮಾಧ್ಯಮದವರತ್ತ ಕೈ ಬೀಸಿ ಮುಗುಳ್ನಗುತ್ತಾ ಈ ಜೋಡಿ ಸಾಗಿದರು. ಖ್ಯಾತ ವಸ್ತ್ರವಿನ್ಯಾಸಕ ಸಬ್ಯಸಾಚಿ ವಿನ್ಯಾಸಗೊಳಿಸಿದ ಸಂಪ್ರದಾಯಿಕ ಉಡುಪುಗಳಲ್ಲಿ ಈ ಜೋಡಿ ಯುವರಾಜ-ಯುವರಾಣಿಯಂತೆ ಕಂಗೊಳಿಸಿದರು. ದೀಪ್ವೀರ್ ಆಗಮಿಸುತ್ತಿದ್ದಂತೆ ಕೆಲಕಾಲ ವಿಮಾನ ನಿಲ್ದಾಣದ ಚಟುವಟಿಕೆಗಳು ಸ್ತಬ್ಧಗೊಂಡವು. ಭಾರೀ ಬಂದೋಬಸ್ತ್ ಮಾಡಲಾಗಿತ್ತು.

ವಿಶೇಷ ಭದ್ರತಾಪಡೆಗಳ ಬೆಂಗಾವಲಿನೊಂದಿಗೆ ಈ ತಾರಾ ಜೋಡಿಯನ್ನು ನಂತರ ಕುಟುಂಬದ ಹಿರಿಯ ಸದಸ್ಯರು ಸಂಪ್ರದಾಯದಂತೆ ಮಧುಮಗನ ಮನೆಗೆ ಕರೆದೊಯ್ದರು. ಅಲ್ಲಿ ನವ ದಂಪತಿಯ ಗೃಹ ಪ್ರವೇಶ ಮತ್ತು ಸೊಸೆಯನ್ನು ಮನೆ ತುಂಬಿಸಿಕೊಳ್ಳುವ ಶಾಸ್ತ್ರ ನೆರವೇರಿತು. ಈ ಸಂದರ್ಭದಲ್ಲಿ ಹಾಜರಿದ್ದ ಮಾಧ್ಯಮ ಪ್ರತಿನಿಧಿಗಳು ಮತ್ತು ಕ್ಯಾಮೆರಾಮ್ಯಾನ್‍ಗಳಿಗೆ ದೀಪ್ವೀರ್ ಧನ್ಯವಾದ ಹೇಳಿದರು. ಅದಕ್ಕೆ ಪ್ರತಿಯಾಗಿ ಗುಂಪಿನಿಂದ ಶುಭ ಹಾರೈಕೆ ಮೊಳಗಿತು.

ಲೇಕ್ ಕೊಮೊದಲ್ಲಿ ನ.14ರಂದು ಬೆಳಗ್ಗೆ ಇವರಿಬ್ಬರ ವಿವಾಹ ಕರ್ನಾಟಕ ಶೈಲಿಯಲ್ಲಿ ಅದ್ಧೂರಿಯಾಗಿ ನಡೆಯಿತು. ನ.15ರಂದು ಉತ್ತರ ಭಾರತೀಯ ರೀತಿಯಲ್ಲಿ ಸ್ವಯಂವರ ಸಮಾರಂಭ ಜರುಗಿತು.  ನ.21 ಮತ್ತು 22ರಂದು ಈ ಜೋಡಿಯ ವೈಭವೋಪೇತ ಆರತಕ್ಷತೆ ಸಮಾರಂಭ ಅನುಕ್ರಮವಾಗಿ ಬೆಂಗಳೂರು ಮತ್ತು ಮುಂಬೈನಲ್ಲಿ ನಡೆಯಲಿದೆ.

Facebook Comments