ಎಲ್ಲರ ಚಿತ್ತ ನಾಳೆಯ ಆರ್‌ಬಿಐ ಸಭೆಯತ್ತ, ರಾಜೀನಾಮೆ ನೀಡುವರೇ ಗೌರ್ನರ್ ಊರ್ಜಿತ್ ಪಟೇಲ್..?

ಈ ಸುದ್ದಿಯನ್ನು ಶೇರ್ ಮಾಡಿ

rbi-Urjit-Patel

ಮುಂಬೈ/ನವದೆಹಲಿ, ನ.18-ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ನಡುವಣ ಜಟಾಪಟಿ ಹಿನ್ನೆಲೆಯಲ್ಲಿ ನಾಳೆ ನಡೆಯಲಿರುವ ಆರ್‍ಬಿಐ ಆಡಳಿತ ಮಂಡಳಿ ಸಭೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಪ್ರಮುಖ ವಿಷಯಗಳು ಚರ್ಚೆಯಾಗಿ ಭಾರೀ ಕೋಲಾಹಲ ವಾತಾವರಣ ಸೃಷ್ಟಿಯಾಗುವ ಸಾಧ್ಯತೆಯೂ ದಟ್ಟವಾಗಿದೆ. ನಾಳೆಯೇ ಆರ್‍ಬಿಐ ಗೌರ್ನರ್ ಊರ್ಜಿತ್ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿಯೂ ಈ ಸಭೆ ಮಹತ್ವದ್ದಾಗಿದೆ.

ರಿಸರ್ವ್ ಬ್ಯಾಂಕ್‍ನ ನಿರ್ಲಕ್ಷ್ಯ ಧೋರಣೆ ಮತ್ತು ನೀತಿಗಳಿಂದಾಗಿ ರಾಷ್ಟ್ರೀಕೃತ ಬ್ಯಾಂಕ್‍ಗಳು ಭಾರೀ ಪ್ರಮಾಣದಲ್ಲಿ ಬೇಕಾಬಿಟ್ಟಿ ಸಾಲ ಮಂಜೂರು ಮಾಡಿ ದೊಡ್ಡ ಮಟ್ಟದ ಆರ್ಥಿಕ ಹೊರೆಗೆ ಸಿಲುಕಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಆರೋಪಿಸಿದ ನಂತರ ಆರ್‍ಬಿಐ ಮತ್ತು ಹಣಕಾಸು ಸಚಿವಾಲಯದ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಆರ್‍ಬಿಐ ಸ್ವಾಯತ್ತತೆಯನ್ನು ಕೇಂದ್ರ ಸರ್ಕಾರ ಪ್ರಶ್ನಿಸಿರುವುದರಿಂದ ವಿವಾದ ತಾರಕಕ್ಕೇರಿದ್ದು, ನಾಳಿನ ಸಭೆಯಲ್ಲಿ ಈ ಎಲ್ಲಾ ವಿಷಯಗಳು ಪ್ರಮುಖವಾಗಿ ಚರ್ಚೆಯಾಗಲಿವೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ನಾಳೆ ನಡೆಯಲಿರುವ ಸಭೆಯಲ್ಲಿ ಮಂಡಳಿಯ ಕೆಲವು ಸದಸ್ಯರು ಆರ್‍ಬಿಐನ 9 ಲಕ್ಷ ಕೋಟಿ ಮೀಸಲು, ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆ(ಎಂಎಸ್‍ಎಂಇ)ಗಳ ಬಂಡವಾಳ ಹೂಡಿಕೆ, ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಹೊಸ ನೀತಿ ಮತ್ತು ತಿದ್ದುಪಡಿಗಳು ಸೇರಿದಂತೆ ಮಹತ್ವದ ವಿಷಯಗಳನ್ನು ಸದಸ್ಯರು ಪ್ರಸ್ತಾಪಿಸಲಿದ್ದು, ಭಾರೀ ಕೋಲಾಹಲ ಉಂಟಾಗುವ ಸಾಧ್ಯತೆಯೂ ಇದೆ.

# ಕೇಂದ್ರದ ವಿರುದ್ಧ ಚಿದು ವಾಗ್ದಾಳಿ:
ನಾಳಿನ ಆರ್‍ಬಿಐ ಸಭೆಗೂ ಮುನ್ನ ಕೇಂದ್ರ ಸರ್ಕಾರದ ವಿರುದ್ಧ ಇಂದು ವಾಗ್ದಾಳಿ ನಡೆಸಿದ ಹಣಕಾಸು ಖಾತೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ.ಚಿದಂಬರಂ, ಕೇಂದ್ರ ಸರ್ಕಾರ ಆರ್‍ಬಿಐ ಮೇಲೆ ಹಿಡಿತ ಸಾಧಿಸಿ 9 ಲಕ್ಷ ಕೋಟಿ ರೂ.ಗಳ ಮೀಸಲು ಹಣದ ಮೇಲೆ ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಚಿದಂಬರಂ, ಕೇಂದ್ರ ಸರ್ಕಾರದ ಕ್ರಮದಿಂದಾಗಿ ನಾಳೆ ನಡೆಯುವ ಆರ್‍ಬಿಐ ಸಭೆ ಸಂಘರ್ಷದತ್ತ ಸಾಗಲಿದೆ ಎಂಬ ಮುನ್ಸೂಚನೆಯನ್ನು ನೀಡಿದರು.

ಈ ವಿಷಯದಲ್ಲಿ ಆರ್‍ಬಿಐನಂತಹ ಯಾವುದೇ ಬ್ಯಾಂಕ್‍ಗಳು ಆಯಾ ಸರ್ಕಾರದಿಂದ ಇಂಥ ಪರಿಸ್ಥಿತಿಗೆ ಸಿಲುಕಿಲ್ಲ. ಬ್ಯಾಂಕ್‍ನ ಸ್ವಾಯತ್ತತೆಯನ್ನು ಪ್ರಶ್ನಿಸಿರುವ ಹಣಕಾಸು ಸಚಿವರ ವರ್ತನೆ ಸಾಧುವಾದುದ್ದಲ್ಲ ಎಂದು ಅವರು ಟೀಕಿಸಿದರು. ನಾಳೆ ನಡೆಯುವ ಸಭೆಯಲ್ಲಿ ಕೋಲಾಹಲ ವಾತಾವರಣ ಉಂಟಾಗುವ ಸಾಧ್ಯತೆ ದಟ್ಟವಾಗಿದೆ. ಈ ಎಲ್ಲಾ ಬೆಳವಣಿಗೆಗಳಿಗೆ ಕೇಂದ್ರ ಸರ್ಕಾರವೇ ನೇರ ಕಾರಣ ಎಂದು ಚಿದಂಬರಂ ಆರೋಪಿಸಿದರು.

Facebook Comments

Sri Raghav

Admin