ರೊಚ್ಚಿಗೆದ್ದ ರೈತರು, ಸುವರ್ಣಸೌಧದಕ್ಕೆ ಕಬ್ಬಿನ ಲಾರಿ ನುಗ್ಗಿಸಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Belagavi--01

ಬೆಂಗಳೂರು, ನ.18- ಕಬ್ಬು ಬೆಳೆಗಾರರ ಆಕ್ರೋಶ ತೀವ್ರಗೊಂಡಿದೆ. ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರೊಂದಿಗೆ ನಡೆಸಲು ಉದ್ದೇಶಿಸಿದ್ದ ಸಭೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರದ್ದುಪಡಿಸಿ ಬೆಂಗಳೂರಿಗೆ ವರ್ಗಾಯಿಸಿದ್ದನ್ನು ವಿರೋಧಿಸಿ ಬಾಕಿ ಪಾವತಿ ಹಾಗೂ ದರ ನಿಗದಿಗೆ ಒತ್ತಾಯಿಸಿ ಬೆಳಗಾವಿಯ ಸುವರ್ಣಸೌಧದ ಗೇಟ್‍ನ ಬೀಗ ಒಡೆದು ಕಬ್ಬಿನ ಲಾರಿಗಳನ್ನು ನುಗ್ಗಿಸಿ ರೈತರು ಪ್ರತಿಭಟನೆ ನಡೆಸಿದರು. ಕಬ್ಬು ತುಂಬಿದ ಸುಮಾರು ನಾಲ್ಕು ಲಾರಿಗಳ ಮೂಲಕ ಬಂದ ರೈತರು ಅಡ್ಡಬಂದ ಪೊಲೀಸರನ್ನು ತಳ್ಳಿ ಸುವರ್ಣಸೌಧಕ್ಕೆ ನುಗ್ಗಿಸಿದರು. ಇದಲ್ಲದೆ, ಸುವರ್ಣಸೌಧದ ಗೇಟ್‍ನ ಬೀಗವನ್ನು ಕಲ್ಲಿನಿಂದ ಒಡೆದು ಹಾಕಿ ಲಾರಿಗಳನ್ನು ಒಳನುಗ್ಗಿಸಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಲ್ಲಿಗೆ ಬಂದು ಸಭೆ ನಡೆಸಿ ನಮ್ಮ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.

ಹಲವು ರೈತ ಮಹಿಳೆಯರು ಕೂಡ ಈ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಖಾನೆ ಮಾಲೀಕರ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿಗಳು ಸಭೆಯನ್ನು ಬೆಳಗಾವಿಯಲ್ಲಿ ಮಾಡುತ್ತಿಲ್ಲ ಎಂದು ಪ್ರತಿಭಟನಾನಿರತರು ಗಂಭೀರ ಆರೋಪ ಮಾಡಿದರು. ಕಬ್ಬಿಗೆ ಸೂಕ್ತ ಬೆಲೆ ನಿಗದಿ, ಬಾಕಿ ಪಾವತಿಗೆ ಆಗ್ರಹಿಸಿ ಬೆಳಗಾವಿಯ ವಿವಿಧೆಡೆ ಪ್ರತಿಭಟನೆ ನಡೆಯುತ್ತಿತ್ತು. ಇಂದು ಸುವರ್ಣಸೌಧದ ಬಳಿ ಈ ಘಟನೆ ದಿಢೀರ್ ನಡೆದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸುವರ್ಣಸೌಧದ ಬಳಿ ಪೊಲೀಸರು ಇರಲಿಲ್ಲ. ನಂತರ ಬಂದ ಪೊಲೀಸರು ಹಲವರನ್ನು ವಶಕ್ಕೆ ಪಡೆದರು.

ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಿ.ಸಿ.ರಾಜಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾನಿರತ ರೈತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ಪೊಲೀಸರ ವಿರುದ್ಧವೂ ಘೋಷಣೆಗಳನ್ನು ಕೂಗಿದರು. ಸುವರ್ಣಸೌಧದ ಬಳಿ ಪ್ರತಿಭಟನೆ ಕಾವು ತೀವ್ರಗೊಳ್ಳುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಕಬ್ಬು ಬೆಳೆಗಾರರು ಅತ್ತ ಕಡೆ ದಾವಿಸತೊಡಗಿದರು. ಬಂದೋಬಸ್ತ್‍ಗಾಗಿ ಹೆಚ್ಚಿನ ಪೊಲೀಸರನ್ನು ಕೂಡ ನಿಯೋಜಿಸಲಾಯಿತು.

ಈ ಪ್ರತಿಭಟನೆಯಿಂದ ಎಚ್ಚೆತ್ತುಕೊಂಡ ಸರ್ಕಾರ ನಾಳೆ ಬೆಳಗ್ಗೆ 11 ಗಂಟೆಗೆ ತುರ್ತು ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಿತು. ಕಬ್ಬು ಬೆಳೆಗಾರರ ಬಾಕಿ ಪಾವತಿ, ಸೂಕ್ತ ಬೆಲೆ ನಿಗದಿ ಸಂಬಂಧ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು. ಅಥಣಿಯಲ್ಲಿ ಉರುಳು ಸೇವೆ: ಇತ್ತ ಅಥಣಿಯಲ್ಲಿ ಕಬ್ಬು ಬೆಳೆಗಾರರು ಯಾವುದೇ ಕಾರಣಕ್ಕೂ ಬೆಂಗಳೂರಿಗೆ ಬರುವುದಿಲ್ಲ. ದೂರದ ಬೆಂಗಳೂರಿಗೆ ಖರ್ಚು ಮಾಡಿಕೊಂಡು ಬರುವಷ್ಟು ಸಾಮಥ್ರ್ಯ ನಮ್ಮಲ್ಲಿಲ್ಲ ಎಂದು ಅರೆಬೆತ್ತಲೆಯಾಗಿ ಉರುಳುಸೇವೆ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಲೂಕಿನಾದ್ಯಂತ ರೈತರ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ಮರಗುಂಡಿಯಲ್ಲಿ 300ಕ್ಕೂ ಹೆಚ್ಚು ಟ್ರ್ಯಾಕ್ಟರ್‍ಗಳನ್ನು ಕಬ್ಬು ಸಾಗಿಸದಂತೆ ತಡೆಹಿಡಿಯಲಾಗಿದೆ. ಸಂಕ್ರಟಿ ದರೂರಿನಲ್ಲಿ ಮುನ್ನೂರು, ಮಲಾದಾಬಾದ್‍ನಲ್ಲಿ ನೂರು, ಮಸರಗುಪ್ಪಿಯಲ್ಲಿ ಎಪ್ಪತ್ತು ಹೀಗೆ ವಿವಿಧೆಡೆಯಲ್ಲಿ ಕಬ್ಬು ಸಾಗಿಸದಂತೆ ಕಬ್ಬು ಕಟಾವು ಮಾಡುವವರು ಹಾಗೂ ರೈತರು ಒಗ್ಗಟ್ಟಿನಿಂದ ಧರಣಿ ನಡೆಸುತ್ತಿದ್ದು, ಮುಂಬರುವ ದಿನಗಳಲ್ಲಿ ಹೋರಾಟ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ.

Belagavi--03

# ಈ ವರ್ಷವೂ ಮೋಸ :
ಈ ವರ್ಷ ಎಫ್‍ಆರ್‍ಪಿ ಪ್ರಕಾರ ದರ ಘೋಷಣೆಯನ್ನು ಕಾರ್ಖಾನೆಗಳು ಮಾಡುತ್ತಿರುವ ಹಿನ್ನೆಲೆಯಲ್ಲಿ ಇದರಲ್ಲಿಯೂ ಕೂಡ ದೊಡ್ಡ ಮೋಸ ಅಡಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಫ್‍ಆರ್‍ಪಿ ಪ್ರಕಾರ ದರ ಘೋಷಿಸಿ ಅದರಲ್ಲಿ ಟ್ರ್ಯಾಕ್ಟರ್ ಬಾಡಿಗೆ ಹಾಗೂ ಕಬ್ಬು ಕಟಾವು ಬಾಡಿಗೆ ಎಲ್ಲವನ್ನೂ ರೈತರ ಮೇಲೆ ಹೇರುವ ಹುನ್ನಾರ ಇದ್ದು ರೈತರನ್ನು ಮೋಸಗೊಳಿಸುವ ತಂತ್ರವನ್ನು ಕಾರ್ಖಾನೆಗಳು ಹೂಡಿವೆ. ಕಾರ್ಖಾನೆಗಳ ಈ ತಂತ್ರದ ಪ್ರಕಾರ ರೈತನಿಗೆ ಟನ್ ಕಬ್ಬಿಗೆ ಕೇವಲ ಎರಡು ಸಾವಿರದ ಇನ್ನೂರು ದಕ್ಕುವ ಸಾಧ್ಯತೆಯಿದೆ ಎಂಬುದು ರೈತರ ಆರೋಪವಾಗಿದೆ.

ಮುಖ್ಯಮಂತ್ರಿಯವರು ಕೊಟ್ಟ ಮಾತಿನಂತೆ ಬೆಳಗಾವಿ ವಿಧಾನಸೌಧಕ್ಕೆ ಬಂದು ಸಮಸ್ಯೆ ಆಲಿಸಿ ಪರಿಹರಿಸಬೇಕು ಏಕೆಂದರೆ ರಾಜ್ಯದಲ್ಲಿ ಅತಿ ಹೆಚ್ಚು ಕಾರ್ಖಾನೆಗಳು ಉತ್ತರ ಕರ್ನಾಟದಲ್ಲಿವೆ. ಬೆಳಗಾವಿ ಜಿಲ್ಲೆಯಲ್ಲಿ 22, ವಿಜಯಪುರ ಜಿಲ್ಲೆಯಲ್ಲಿ 7 ಹಾಗೂ ಬಾಗಲಕೋಟ ಜಿಲ್ಲೆಯಲ್ಲಿ 12 ಹೀಗೆ ಹೆಚ್ಚು ಕಾರ್ಖಾನೆಗಳಿವೆ. ಕುಮಾರಸ್ವಾಮಿ ಅವರು ಯಾವುದೋ ರಾಜಕೀಯ ಒತ್ತಡಕ್ಕೆ ಮಣಿದು ನಮ್ಮನ್ನು ಬೆಂಗಳೂರಿಗೆ ಕರೆದಿದ್ದಾರೆ ಎಂದು ರೈತರು ಆರೋಪಿಸಿದರು.

Belagavi--02

ರೈತರ ಜತೆ ದಿನೇ ದಿನೇ ಚೆಲ್ಲಾಟವಾಡಿದರೆ ಮುಂದೆ ಆಗುವ ಅನಾಹುತಗಳಿಗೆ ಸರಕಾರವೇ ಹೊಣೆಯಾಗುತ್ತದೆ. ಇದನ್ನರಿತು ಆದಷ್ಟು ಶೀಘ್ರ ಮುಖ್ಯಮಂತ್ರಿಯವರು ಬೆಳಗಾವಿಗೆ ಆಗಮಿಸಿ ಸಮಸ್ಯೆ ಪರಿಹರಿಸಬೇಕು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಮಹದೇವ್ ಮಡಿವಾಳ ಆಗ್ರಹಿಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin