ವಿವಾದಿತ ಹೇಳಿಕೆ ಕುರಿತು ಸಿಎಂ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲೇನಿದೆ..?

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--01-C-CM

ಬೆಂಗಳೂರು,ನ.19- ರೈತರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ನನ್ನನ್ನು ನಿಂದಿಸಿದ್ದರಿಂದ ಅತೀವ ನೋವಾಗಿತ್ತು. ಈ ಬಗ್ಗೆ ನಾನು ನೀಡಿದ ಪ್ರತಿಕ್ರಿಯೆಯಲ್ಲಿ ಯಾವುದೇ ದುರದ್ದೇಶವಿರಲಿಲ್ಲ. ನನ್ನ ಮಾತಿನ ಅರ್ಥವನ್ನು ಗ್ರಹಿಸದೆ ಚರ್ಚೆಯಾಗುತ್ತಿರುವುದು ದುರಷ್ಟಕರ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಹೇಳಿಕೆಯಿಂದ ರೈತರು ಆಕ್ರೋಶಗೊಂಡು ಪ್ರತಿಭಟನೆಗಿಳಿದ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ತಾವು ಹಿಂದಿನಿಂದಲೂ ರೈತರ ಪರವಾಗಿದ್ದವನು. ಇದರಲ್ಲಿ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಎಂಬ ಬೇಧವಿಲ್ಲ. ರೈತರಿಗೆ ಕೋಲ್ಕತ್ತಾನ್ಯಾಯಾಲಯದಿಂದ ಬಂಧನದ ವಾರೆಂಟ್ ಬಂದಾಗಿನಿಂದಲೂ ಮಧ್ಯಪ್ರವೇಶಿಸಿ ರೈತರ ಪರ ನಿಂತಿದ್ದೇನೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಲೇ ಇದ್ದೇನೆ. ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಹಿತ ಕಾಯಲು ಬದ್ಧವಾಗಿದೆ. ನಾಳೆ ಮಧ್ಯಾಹ್ನ ವಿಧಾನಸೌಧದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕಾಗಿ ಉನ್ನತ ಮಟ್ಟದ ಸಭೆ ಕರೆಯಲಾಗಿದೆ.ಅಲ್ಲಿ ರೈತರ ಹಿತದೃಷ್ಟಿಯಿಂದ ಒಮ್ಮತದ ನಿರ್ಣಯ ಹೊರಹೊಮ್ಮುತ್ತದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.  ನಿನ್ನೆ ರಾತ್ರಿ ಕೂಡ ಬೆಳಗಾವಿಯಲ್ಲಿ ಸಕ್ಕರೆ ಆಯುಕ್ತರು ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿದ್ದಾರೆ. ರೈತರ ಹಿತ ಬಿಟ್ಟರೆ ಬೇರ್ಯಾವ ಮುಲಾಜು ನನಗಿಲ್ಲ. ಈ ಬದ್ಧತೆಯ ಬಗ್ಗೆ ಯಾವುದೇ ಸಂಶಯ ಬೇಡ ಎಂದು ಹೇಳಿದ್ದಾರೆ.

ಸಾಲಮನ್ನಾ ರೈತರ ಸಮಸ್ಯೆಗಳಿಗೆ ಪರಿಹಾರ ಅಲ್ಲ. ಆದರೆ ಒಮ್ಮೆ ರೈತ ಋಣಭಾರ ಕಳೆದುಕೊಂಡು ಹೊಸ ಬದುಕು ಪ್ರಾರಂಭಿಸಬೇಕು ಎಂಬ ಆಶಯದೊಂದಿಗೆ ಸಹಕಾರ ಬ್ಯಾಂಕ್‍ಗಳಷ್ಟೇ ಅಲ್ಲ ವಾಣಿಜ್ಯ ಬ್ಯಾಂಕ್‍ಗಳಲ್ಲಿನ ಬೆಳೆ ಸಾಲ ಮನ್ನಾಕ್ಕೂ ನಮ್ಮ ಸರ್ಕಾರ ಮುಂದಾಗಿದೆ. ಈ ಸಂಬಂಧ ಕೈಗೊಂಡಿರುವ ಎಲ್ಲಾ ರೂಪುರೇಷೆಗಳು ಅಂತಿಮ ಹಂತದಲ್ಲಿದ್ದು, ಶೀಘ್ರವೇ ಸಾಲಮನ್ನಾ ಪ್ರಕ್ರಿಯೆ ಆರಂಭವಾಗಲಿದೆ.ಇದಕ್ಕಾಗಿ ರೈತರ ಸಾಲಮನ್ನಾ ಮಾಡಲು ಸುಮಾರು 48 ಸಾವಿರ ಕೋಟಿ ರೂ. ಸಂಪನ್ಮೂಲದ ಅಗತ್ಯವಿದೆ. ಇದಕ್ಕಾಗಿ ಪ್ರತಿ ಸಾಲದ ಖಾತೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಸಮಯಾವಕಾಶ ಬೇಕಿದೆ ಎಂದು ಕೋರಿದ್ದಾರೆ.  ಕೃಷಿ ಲಾಭದಾಯಕವಾಗಬೇಕು ಎಂಬ ಕನಸು ಕಂಡವನು ನಾನು. ಈ ನಿಟ್ಟಿನಲ್ಲಿ ಸಾವಯವ ಕೃಷಿ, ಶೂನ್ಯ ಬಂಡವಾಳ, ನೈಸರ್ಗಿಕ ಕೃಷಿ ಹಾಗೂ ಇಸ್ರೇಲ್ ಮಾದರಿಯ ಕೃಷಿ ಪದ್ದತಿ ಕುರಿತು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ರೈತರು ತಾಳ್ಮೆ ಕಳೆದುಕೊಳ್ಳದೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin