ಪೊಲೀಸ್ ಠಾಣೆಗಳು ಜನಸ್ನೇಹಿಯಾಗಬೇಕು : ಉಪಮುಖ್ಯಮಂತ್ರಿ ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

DCMಬೆಂಗಳೂರು, ನ.19-ಪೊಲೀಸ್ ಠಾಣೆಗಳು ಜನಸ್ನೇಹಿಯಾಗಬೇಕು. ಪೊಲೀಸ್ ಠಾಣೆ ಎಂದರೆ ರಕ್ಷಣೆ ಸಿಗುವ ಸ್ಥಳ ಎಂಬ ಭಾವನೆ ಜನರಲ್ಲಿ ಮೂಡಬೇಕು ಎಂಬ ಉದ್ದೇಶದಿಂದ ಪೊಲೀಸರಿಗೆ ನೀಡುವ ತರಬೇತಿಯಲ್ಲಿ ಸಮಗ್ರ ಬದಲಾವಣೆ ತರಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಇನ್ಫೋಸಿಸ್ ಸಂಸ್ಥೆಯ ಸಹಯೋಗದಲ್ಲಿ ನವೀಕರಣಗೊಂಡ ತಿಲಕನಗರ ಪೊಲೀಸ್ ಠಾಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಠಾಣೆಗೆ ಬರುವ ಸಾರ್ವಜನಿಕರನ್ನು ಬಹಳ ಗೌರವದಿಂದ ನಡೆಸಿಕೊಳ್ಳಬೇಕು, ಬಂದವರು ಕುಳಿತುಕೊಳ್ಳಲು ಕುರ್ಚಿ, ಕುಡಿಯಲು ನೀರು, ಮತ್ತಿತರ ಅಗತ್ಯ ಸೌಲಭ್ಯ ಒದಗಿಸಲು ಪ್ರತಿ ಠಾಣೆಗೆ ತಲಾ ಒಂದು ಲಕ್ಷ ರೂ. ನೀಡಲಾಗುತ್ತಿದೆ ಎಂದರು.

ಪೊಲೀಸ್ ಇಲಾಖೆಯನ್ನು ಜನಸ್ನೇಹಿಯಾಗಿ ರೂಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ತರಬೇತಿ ನೀಡುವಾಗಲೇ ಸಾರ್ವಜನಿಕರೊಂದಿಗೆ ಹೇಗೆ ನಡೆದುಕೊಳ್ಳಬೇಕು. ಅವರ ವಿಶ್ವಾಸ ಗಳಿಸುವುದು ಹೇಗೆ ಮುಂತಾದ ವಿಷಯಗಳನ್ನು ತಿಳಿಸಿಕೊಡಲು ನಿರ್ಧರಿಸಲಾಗಿದೆ. ಈಗಿರುವ ತರಬೇತಿಯಲ್ಲಿ ಈ ಅಂಶಗಳಿಲ್ಲ. ಆದ್ದರಿಂದ ತರಬೇತಿಯನ್ನು ಸಮಗ್ರವಾಗಿ ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದ ಪೊಲೀಸ್ ಇಲಾಖೆ ದೇಶದಲ್ಲೇ ನಂಬರ್ ಒನ್ ಆಗಬೇಕು ಎಂಬುದು ನಮ್ಮ ಆಸೆಯಾಗಿದೆ. ಇದಕ್ಕಾಗಿ ನೂರಾರು ಕೋಟಿ ರೂ. ಖರ್ಚು ಮಾಡಲು ಉದ್ದೇಶಿಸಲಾಗಿದೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಸುಮಾರು 650 ಕೋಟಿ ರೂ. ಖರ್ಚು ಮಾಡಲು ಮುಂದಾಗಿದ್ದೇವೆ. 5 ಸಾವಿರಕ್ಕೂ ಅಧಿಕ ಅತ್ಯುತ್ತಮ ಗುಣಮಟ್ಟದ ಸಿಸಿಟಿವಿಗಳನ್ನು ಅಳವಡಿಸಲಾಗುತ್ತಿದೆ. ಅಪರಾಧ ಪ್ರಕರಣ ತನಿಖೆ ಶೀಘ್ರ ಮುಗಿಯಲು ಅನುಕೂಲವಾಗುವಂತೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ 300 ರಿಂದ 400 ಕೋಟಿ ರೂ. ವೆಚ್ಚದಲ್ಲಿ ಸಲಕರಣೆಗಳನ್ನು ಖರೀದಿಸಲಾಗುತ್ತಿದೆ ಎಂದು ಹೇಳಿದರು.

# ಔರಾದ್ಕರ್ ವರದಿ ಜಾರಿ ಖಚಿತ:
ಪೊಲೀಸರ ಪರಿಸ್ಥಿತಿ ಚೆನ್ನಾಗಿದ್ದರೆ ಮಾತ್ರ ಅವರು ನಮಗೆ ಸರಿಯಾದ ಭದ್ರತೆ ಒದಗಿಸಲು ಸಾಧ್ಯ. ಆದ್ದರಿಂದ ಪೊಲೀಸರ ವೇತನ ಮತ್ತಿತರ ಸೌಲಭ್ಯಗಳ ಬಗ್ಗೆ ಅಧ್ಯಯನ ನಡೆಸಲು ಹಿರಿಯ ಪೊಲೀಸ್ ಅಧಿಕಾರಿ ಔರಾದ್ಕರ್ ನೇತೃತ್ವ ಸಮಿತಿ ನೀಡಿರುವ ವರದಿಯನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಬದ್ಧವಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.

ತಾವು ಈ ಹಿಂದೆ ಗೃಹ ಸಚಿವರಾಗಿದ್ದ ವೇಳೆ ಕಾನ್‍ಸ್ಟೆಬಲ್‍ನಿಂದ ಹಿಡಿದು ಸಬ್ ಇನ್ಸ್‍ಪೆಕ್ಟರ್‍ವರೆಗಿನ ಸಿಬ್ಬಂದಿಯ ವೇತನ ಇತರೆ ಇಲಾಖೆಗಳಲ್ಲಿರುವ ಅದೇ ಹುದ್ದೆಯ ಸಿಬ್ಬಂದಿಯ ವೇತನಕ್ಕೆ ಹೋಲಿಸಿ ವರದಿ ನೀಡುವಂತೆ ಸೂಚಿಸಿದ್ದೆ. ಇದೀಗ ವರದಿ ಸರ್ಕಾರದ ಕೈ ಸೇರಿದೆ. ಮುಖ್ಯಮಂತ್ರಿಯವರು ಕೂಡ ವರದಿ ಜಾರಿಗೆ ಒಪ್ಪಿಕೊಂಡಿದ್ದಾರೆ. ಶೀಘ್ರ ವರದಿಯ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು. ಸೈಬರ್ ಅಪರಾಧ ಮಟ್ಟ ಹಾಕುವುದು ದೊಡ್ಡ ಸವಾಲಾಗಿದೆ. ಇನ್ಫೋಸಿಸ್ ಸಂಸ್ಥೆಯು ರಾಜ್ಯದಲ್ಲಿ ಅತ್ಯಾಧುನಿಕ ಸೈಬರ್ ಕೇಂದ್ರ ಸ್ಥಾಪನೆಗೆ 22 ಕೋಟಿ ರೂ. ಅನುದಾನ ನೀಡಿದೆ. ಇದೀಗ ತಿಲಕನಗರ ಠಾಣೆಯನ್ನು ನವೀಕರಿಸಿದೆ. ಅದಕ್ಕಾಗಿ ಸರ್ಕಾರದ ವತಿಯಿಂದ ಇನ್ಫೋಸಿಸ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಸೌಮ್ಯರೆಡ್ಡಿ, ಇನ್ಫೋಸಿಸ್ ಮುಖ್ಯಸ್ಥರಾದ ಡಾ.ಸುಧಾಮೂರ್ತಿ, ಶಾಸಕರಾದ ವೆಂಕಟೇಶ್, ವೇಣುಗೋಪಾಲ್, ಉದಯಗರುಡಾಚಾರ್, ಮೇಯರ್ ಗಂಗಾಂಬಿಕೆ, ನಗರ ಪೊಲೀಸ್ ಆಯುಕ್ತ ಸುನೀಲ್‍ಕುಮಾರ್, ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‍ಕುಮಾರ್, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ಮತ್ತಿತರರು ಉಪಸ್ಥಿತರಿದ್ದರು.

Facebook Comments