ಕೋಮಾದಲ್ಲಿ ಬಿಬಿಎಂಪಿ ಕಾರ್ಪೊರೇಟರ್ ಏಳುಮಲೈ, ಹೆಚ್ಚಿನ ಚಿಕಿತ್ಸೆಗೆ ಸಿಂಗಾಪುರಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

 

Elumalai

ಬೆಂಗಳೂರು, ನ.19-ಚಿಕಿತ್ಸೆ ಸಂದರ್ಭದಲ್ಲಿ ಹೃದಯಾಘಾತಕ್ಕೊಳಗಾಗಿ ಕೋಮಾಕ್ಕೆ ತಲುಪಿದ್ದ ಸಗಾಯಿಪುರ ವಾರ್ಡ್ ಕಾರ್ಪೊರೇಟರ್ ಏಳುಮಲೈ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದೊಯ್ಯಲಾಗಿದೆ. ಮೂಗಿನಲ್ಲಿ ಗುಳ್ಳೆ ಇದೆ ಎಂದು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಅನಸ್ತೇಷಿಯಾ ನೀಡುವಾಗ ಹೃದಯಾಘಾತಕ್ಕೊಳಗಾಗಿ ಕೋಮಾಕ್ಕೆ ತಲುಪಿದ್ದ ಏಳುಮಲೈ ಅವರನ್ನು ನಗರದ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಳೆದ 15 ದಿನದಿಂದ ಅವರು ಕೋಮಾ ಸ್ಥಿತಿಯಲ್ಲಿಯೇ ಇದ್ದು, ಬಹು ಅಂಗಾಂಗ ವೈಫಲ್ಯದಿಂದ ನರಳುತ್ತಿದ್ದಾರೆ. ಅಲ್ಲದೆ ಎರಡೂ ಕಿಡ್ನಿಗಳು ವಿಫಲವಾಗಿವೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದು, ಅವರನ್ನು ಸಿಂಗಾಪೂರಕ್ಕೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿರುವ ಹಿನ್ನೆಲೆಯಲ್ಲಿ ಇಂದು ಸಿಂಗಾಪೂರಕ್ಕೆ ಕರೆದೊಯ್ಯಲಾಗಿದೆ ಎಂದು ಅವರ ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

# ಏನಾಗಿದೆ ಏಳುಮಲೈಗೆ..?
ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತಿರುವ ಸಗಾಯಪುರಂ ವಾರ್ಡ್ ಕಾಂಗ್ರೆಸ್ ಕಾರ್ಪೊರೇಟರ್ ಏಳುಮಲೈ ಆರೋಗ್ಯ ಸ್ಥಿತಿಯ ಬಗ್ಗೆ ಇರುವ ಗೊಂದಲ ದೂರವಾಗುತ್ತಲೇ ಇಲ್ಲ. ಅವರಿಗೆ ಏನಾಗಿದೆ, ಆರೋಗ್ಯ ಸ್ತಿತಿ ಹೇಗಿದೆ ಎನ್ನುವ ಮಾಹಿತಿ ಅವರ ವಾರ್ಡ್ ಜನರಿಗಷ್ಟೇ ಅಲ್ಲ, ಸ್ವತಃ ಮೇಯರ್ಗೂ ಗೊತ್ತಾಗುತ್ತಿಲ್ಲವಂತೆ. ಅಷ್ಟಕ್ಕೂ ಏಳುಮಲೈಗೆ ಆಗಿರುವುದಾದರೂ ಏನು ಎನ್ನುವುದು ಸ್ಪಷ್ಟವಾಗುತ್ತಿಲ್ಲ. ಅಷ್ಟರ ಮಟ್ಟಿಗೆ ಅವರ ಆರೋಗ್ಯದ ಸ್ಥಿತಿಯನ್ನು ಗೌಪ್ಯಗೊಳಿಸುವ ಅಗತ್ಯವೇನಿದೆಯೋ ಗೊತ್ತಾಗ್ತಿಲ್ಲ. ಅವರಿಗೆ ಆಗಿರುವುದು ಬ್ರೈನ್ ಹ್ಯಾಮರೇಜೋ, ಬ್ರೈನ್ ಡೆಡ್ಡೋ ಎನ್ನುವ ಗೊಂದಲಕ್ಕೂ ತೆರೆ ಎಳೆಯುವ ಕೆಲಸ ಆಗ್ತಿಲ್ಲ.

ಕಾರ್ಪೊರೇಟರ್ ಏಳುಮಲೈ ಅವರ ಸಂಬಂಧಿಕರು, ವಾರ್ಡ್ ಜನರು ಆಸ್ಪತ್ರೆಯ ಒಳಹೊರಗನ್ನು ಆವರಿಸಿಕೊಂಡಿರುವುದು ಸ್ವತಃ ವಿಕ್ರಂ ಆಸ್ಪತ್ರೆ ವೈದ್ಯರನ್ನೇ ಕಂಗಾಲು ಮಾಡಿದೆ. ಆದರೆ, ಐಸಿಯುನಲ್ಲಿರುವ ಏಳುಮಲೈ ಅವರನ್ನು ನೋಡಲು ಎರಡು ದಿನದಿಂದ ಯಾರನ್ನೂ ಒಳ ಬಿಡುತ್ತಿಲ್ಲ. ಅವರ ಸ್ವಂತದವರಿಗೂ ಪ್ರವೇಶ ನಿರ್ಬಂಧಿಸಲಾಗಿದೆ. ಹೆಲ್ತ್ ಬುಲೆಟಿನ್ ರಿಲೀಸ್ ಮಾಡದಂತೆಯೂ ಏಳುಮಲೈ ಸಹೋದರ ಆಸ್ಪತ್ರೆ ವೈದ್ಯರಿಗೆ ಎಚ್ಚರಿಕೆ ನೀಡಿದ್ದಾರೆನ್ನಲಾಗಿದೆ. ಹಾಗಾಗಿಯೇ ವೈದ್ಯರು ಏಳುಮಲೈ ಸಹೋದರನ ಕಡೆ ಬೊಟ್ಟು ಮಾಡಿ ತೋರಿಸಿತ್ತಾರೆಯೇ ಹೊರತು ಯಾವುದನ್ನೂ ಸ್ಪಷ್ಟಪಡಿಸ್ತಿಲ್ಲ.ಇದು ಆಳುಮಲೈ ಆರೋಗ್ಯದ ಬಗ್ಗೆ ಮತ್ತಷ್ಟು ಆತಂಕಗೊಳ್ಳುವಂತೆ ಮಾಡಿದೆ.

 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin