BIG BREAKING : ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ..?

ಈ ಸುದ್ದಿಯನ್ನು ಶೇರ್ ಮಾಡಿ

Ramesh-Jarakihole

ಬೆಂಗಳೂರು, ನ.19-ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಪೌರಾಡಳಿತ ಸಚಿವ ರಮೇಶ್ ಜಾರಕಿ ಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ವದಂತಿ ವ್ಯಾಪಕವಾಗಿದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದ ಎನ್.ಮಹೇಶ್ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಈಗ ರಮೇಶ್ ಜಾರಕಿ ಹೊಳಿ ಅವರು ರಾಜೀನಾಮೆ ನೀಡಿದರೆ ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಎರಡನೇ ವಿಕೆಟ್ ಪತನವಾದಂತಾಗುತ್ತದೆ.

ಸ್ವತಃ ಸಕ್ಕರೆ ಕಾರ್ಖಾನೆ ಮಾಲೀಕರಾಗಿರುವ ರಮೇಶ್ ಜಾರಕಿ ಹೊಳಿ ಅವರು ರೈತರಿಗೆ ಕಬ್ಬು ಪೂರೈಸಿದ ಬಾಕಿ ಹಣ ಪಾವತಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಬಾಕಿ ಹಣಕ್ಕಾಗಿ ಬೆಳಗಾವಿ ಜಿಲ್ಲೆಯಲ್ಲಿ ರೈತ ಮುಖಂಡರು ಸಂಘಟಿತರಾಗಿ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಇದು ರಾಜ್ಯ ಸರ್ಕಾರದ ಜಂಘಾಬಲವನ್ನೇ ಅಲುಗಾಡಿಸಿದೆ. ಕಬ್ಬು ಬೆಳೆಗಾರರ ಪ್ರತಿಭಟನೆಯ ನೈತಿಕ ಹೊಣೆ ಹೊತ್ತು ರಮೇಶ್ ಜಾರಕಿ ಹೊಳಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಆದರೆ ಇದು ಇನ್ನೂ ಅಧಿಕೃತವಾಗಿ ಚರ್ಚಿತಗೊಂಡಿಲ್ಲ. ಈ ಮೊದಲು ರಾಜ್ಯಸರ್ಕಾರ ಕಬ್ಬು ಬೆಳೆಗಾರರ ಬಾಕಿ ಹಣ ಕೊಡಿಸಲು ಎಲ್ಲಾ ಸಕ್ಕರೆ ಕಾರ್ಖಾನೆಗಳಿಗೂ ನೋಟೀಸ್ ನೀಡಿ ಗಂಭೀರ ಕ್ರಮಕ್ಕೆ ಮುಂದಾಗಿತ್ತು. ಅದೇ ವೇಳೆಗೆ ಬೆಳಗಾವಿ ಪಿಎಲ್‍ಡಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ಹಿನ್ನೆಲೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ರಮೇಶ್ ಜಾರಕಿ ಹೊಳಿ ಅವರ ಸಹೋದರ ಹಾಗೂ ಪ್ರಭಾವಿ ನಾಯಕ ಸತೀಶ್ ಜಾರಕಿ ಹೊಳಿ ಅವರ ಗುಂಪಿನ ನಡುವೆ ಹಗ್ಗಾಜಗ್ಗಾಟ ನಡೆದಿತ್ತು.

ಇದು ಮೈತ್ರಿ ಸರ್ಕಾರದಲ್ಲಿ ಭಿನ್ನಮತೀಯ ಚಟುವಟಿಕೆಗೆ ನಾಂದಿಯಾಡಿದ್ದಲ್ಲದೆ, ಒಂದಷ್ಟು ಮಂದಿ ಶಾಸಕರು ರೆಸಾರ್ಟ್ ರಾಜಕೀಯಕ್ಕೂ ಮುಂದಾಗಿದ್ದರು. ಅಂತಿಮವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಿರಿಯ ನಾಯಕರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.ಹಾಗಾಗಿ ಭಿನ್ನಮತೀಯ ಚಟುವಟಿಕೆಗಳು ತಾತ್ಕಾಲಿಕವಾಗಿ ಶಮನಗೊಂಡಿದ್ದವು.

ಅದಕ್ಕಿಂತಲೂ ಪ್ರಮುಖವಾಗಿ ಜಾರಕಿ ಹೊಳಿ ಸಹೋದರರು ಖಾಸಗಿ ಹೊಟೇಲ್‍ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ರಹಸ್ಯ ಮಾತುಕತೆ ನಡೆಸಿದ್ದರಿಂದ ಭಿನ್ನಮತೀಯ ಚಟುವಟಿಕೆಗಳು ತಿಳಿಯಾಗಿದ್ದವು. ಎಲ್ಲವೂ ಸುಖಾಂತ್ಯವಾಗಿದೆ. ಮೈತ್ರಿ ಸರ್ಕಾರದ ಪರವಾಗಿ ಉಪಚುನಾವಣೆ ಫಲಿತಾಂಶ ಬಂದಿದೆ ಎಂದು ನಿಟ್ಟುಸಿರು ಬಿಡುವ ವೇಳೆಯಲ್ಲೇ ಕಬ್ಬು ಬೆಳೆಗಾರರ ಪ್ರತಿಭಟನೆ ಸರ್ಕಾರಕ್ಕೆ ಭಾರೀ ಶಾಕ್ ನೀಡಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin