ಮಧುಗಿರಿಗೆ ಭೇಟಿ ನೀಡಿದ ಕೇಂದ್ರ ಬರ ಅಧ್ಯಯನ ತಂಡ

ಈ ಸುದ್ದಿಯನ್ನು ಶೇರ್ ಮಾಡಿ

baraಮಧುಗಿರಿ,ನ.19- ಸತತ ಬರಗಾಲಕ್ಕೆ ತುತ್ತಾಗಿರುವ ಮಧುಗಿರಿ ತಾಲ್ಲೂಕಿಗೆ ಕೇಂದ್ರ ನೀತಿ ಆಯೋಗದ ಜಂಟಿ ಸಲಹೆಗಾರ ಮಾನಸ್ ಚೌಧರಿ ಅವರ ನೇತೃತ್ವದಲ್ಲಿ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ, ಇಲ್ಲಿನ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸಿತು.  ಚಿನ್ನೇನಹಳ್ಳಿ ಗ್ರಾಮದ ಸಮೀಪ ರೈತರ ಜಮೀನಿಗೆ ಭೇಟಿ ನೀಡಿ, ಶೇಂಗಾ ಬೆಳೆಯನ್ನು ವೀಕ್ಷಿಸಲು ಮುಂದಾದಾಗ ರೈತ ಮಹಿಳೆ ಜಯಮ್ಮ ನಮ್ಮ ಬಳಿ 1.10 ಗುಂಟೆ ಜಮೀನಿದ್ದು, ಶೇಂಗಾ ಬೆಳೆಯಲು ಸುಮಾರು 30ಸಾವಿರ ರೂ. ಸಾಲ ಮಾಡಿ ಖರ್ಚು ಮಾಡಿದರೂ ಮಳೆ ಕೈಕೊಟ್ಟ ಕಾರಣ ಬೆಳೆ ಒಣಗಿಹೋಗಿದೆ. ಜಾನುವಾರುಗಳಿಗೂ ಮೇವು ದೊರಕಂದಂತಾಗಿದೆ ಎಂದು ಕೇಂದ್ರ ಬರ ಅಧ್ಯಯನ ತಂಡದ ಎದುರು ಸಮಸ್ಯೆ ತೋಡಿಕೊಂಡರು.

ತಾಲೂಕಿನ ಕಸಬ ಹೋಬಳಿಯಬಸವನಹಳ್ಳಿ ಗ್ರಾಮದಲ್ಲಿ ಎಂ.ಎನ್.ಆರ್.ಇ.ಜಿಯ ಯೋಜನೆಯಡಿ ಮೂರು ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸುತ್ತಿರುವ ರಸ್ತೆ ಕಾಮಗಾರಿ ಹಾಗೂ ಶುದ್ದ ನೀರಿನ ಘಟಕವನ್ನು ವೀಕ್ಷಿಸಿ ನಂತರ ನಲ್ಲೇಕಾಮನಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಬಳಿ 2 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಗೋಕಟ್ಟೆ ಪರಿಶೀಲನೆ ನಡೆಸಿತು.

ಕೂಲಿಗಾರರೊಂದಿಗೆ ಮಾಹಿತಿ ಪಡೆಯುವಾಗ, ನಮಗೆ ಜಮೀನಿದ್ದರೂ ಸಹ ಬೆಳೆ ಇಡಲು ಭಯವಾಗುವಂತಹ ಬರಗಾಲ 3-4 ವರ್ಷಗಳಿಂದ ಕಾಡುತ್ತಿದ್ದು, ಮುಂದೆ ಏನು ಮಾಡಬೇಕು ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ. ನಾವು ಪ್ರಸ್ತುತ ನರೇಗಾ ಯೋಜನೆಯಡಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ ಎಂದು ಬರ ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದರು.

ಇದಕ್ಕೂ ಮುನ್ನಾ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಎಂ.ವಿ.ವೀರಭದ್ರಯ್ಯ ಕೇಂದ್ರ ಬರ ಅಧ್ಯಯನ ತಂಡದ ಜೊತೆ ಸಭೆ ನಡೆಸಿ ತಾಲ್ಲೂಕಿನಲ್ಲಿ ಶೇಂಗಾ ಬೆಳೆ ಜೊತೆಯಲ್ಲಿ ಮುಸುಕಿನ ಜೋಳ, ರಾಗಿ ಮುಂತಾದ ಎಲ್ಲಾ ಬೆಳೆಗಳು ಮಳೆ ಇಲ್ಲದೆ ಒಣಗಿಹೋಗಿರುವುದರಿಂದ ರೈತರಿಗೆ ಸಾಕಾಷ್ಟು ನಷ್ಟ ಉಂಟಾಗಿರುವ ಬಗ್ಗೆ ಸಮಾಲೋಚನೆ ನಡೆಸಿದರು.

ಸಂಸದ ಬಿ.ಎನ್.ಚಂದ್ರಪ್ಪ, ಜಿಲ್ಲಾಧಿಕಾರಿ ಕೆ.ರಾಕೇಶ್ ಕುಮಾರ್, ಸಿ.ಇ.ಓ.ಅನೀಸ್ ಕಣ್ಮಣಿ ಜಾಯ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ, ಆಹಾರ ನಾಗರೀಕರ ಸರಬರಾಜು ಇಲಾಖೆ ವ್ಯವಸ್ಥಾಪ ಡಿ.ಜಿ.ಎಂ.ಸತ್ಯಕುಮಾರ್, ಕೇಂದ್ರ ಸರ್ಕಾರದ ಆರ್ಥಿಕ ಇಲಾಖೆಯ ಜಂಟಿ ನಿರ್ದೇಶಕರಾದ ಸುಭಾಷ್‍ಚಂದ್ರ ಮೀನಾ ಮುಂತಾದವರು ಇದ್ದರು.

Facebook Comments