ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಜೊತೆಗಿನ ಸಿಎಂ ಸಭೆ ವಿಫಲ

ಈ ಸುದ್ದಿಯನ್ನು ಶೇರ್ ಮಾಡಿ

kumaraswamy

ಬೆಂಗಳೂರು.ನ. 20 : : ಕಬ್ಬು ಬೆಳೆಗಾರರಿಗೆ ನೀಡುವ ಬೆಂಬಲ ಬೆಲೆಗೆ ಸಂಬಂಧಪಟ್ಟಂತೆ ಕಬ್ಬಿನ ಸಕ್ಕರೆ ಕಾರ್ಖಾನೆ ಮಾಲೀಕರು ಬೆಂಬಲು ಬೆಲೆ ನೀಡುವುದಕ್ಕೆ ನಕಾರ ವ್ಯಕ್ತಪಡಿಸಿದ್ದು, ಮೊದಲ ಹಂತದ ಮಾತುಕತೆ ಬಹುತೇಕ ವಿಫಲವಾಗಿದೆ ಎನ್ನಲಾಗಿದೆ. ಇಂದು ವಿಧಾನಸೌಧದ ಕಾನ್ಫರೆನ್ಸ್ ಹಾಲ್ ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕಬ್ಬು ಬೆಳೆಗಾರ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆ ಮಾಲಿಕರು, ರೈತ ಮುಖಂಡರ ಸಭೆ ನಡೆಯಿತು. ಈ ವೇಳೆ ಎಫ್ ಆರ್ ಪಿ ದರದ ಪ್ರಕಾರ ಪ್ರತಿ ಟನ್ ಕಬ್ಬಿಗೆ 2,750 ರೂ ನೀಡಬೇಕು ಅಂತ ರೈತರು ಕೇಳಿಕೊಂಡಿದ್ದಾರೆ. ಇದಕ್ಕೆ ಸಕ್ಕರೆ ಕಾರ್ಖಾನೆ ಮಾಲೀಕರು ನಕಾರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸಭೆಯಲ್ಲಿ ಸಚಿವ ಜಾರ್ಜ್, ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ, ಶಾಸಕ ಕುಡುಚಿ ರಾಜೀವ್,ಮಹೇಶ್ ಕುಮಟಗಿ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್, ಸಿಎಸ್ ವಿಜಯ ಭಾಸ್ಕರ್ ಸೇರಿದಂತೆ ಇಲಾಖೆಯ ಅನೇಕ ಅಧಿಕಾರಿಗಳು ಹಾಜರಿದ್ದರು. ಸಭೆಯಲ್ಲಿ ಕಬ್ಬು ಬೆಳೆಗೆ ಸಂಬಂಧಪಟ್ಟಂತೆ ಕಾವೇರಿದ ಮಾತುಕತೆ ನಡೆಯಿತು ಎನ್ನಲಾಗಿದ್ದು, ಸಭೆಯಲ್ಲಿ ಬೆಂಬಲ ಬೆಲೆ ನೀಡಲು ಸಕ್ಕರೆ ಕಾರ್ಖಾನೆ ಮಾಲೀಕರು ನಕಾರ ವ್ಯಕ್ತಪಡಿಸಿದ್ದು, ಮಾತುಕತೆ ವಿಫಲ ವಾಗಿದೆ ಎನ್ನಲಾಗಿದೆ.

ಕಾರ್ಖಾನೆಗಳಿಗೆ ಕಬ್ಬು ತೆಗೆದುಕೊಂಡು ಹೋದ ಬಳಿಕ ಮಾಲೀಕರು ಸರಿಯಾಗಿ ಹಣ ಕೊಡುವುದಿಲ್ಲ. ಕಾರ್ಖಾನೆ ಮಾಲೀಕರು ಕೋಟ್ಯಾಂತರ ರೂಪಾಯಿ ಹಣ ಬಾಕಿ ಉಳಿಸಿಕೊಂಡಿದ್ದಾರೆ. ಇದರಿಂದ ನಮಗೆ ಬಹಳ ತೊಂದರೆ ಆಗ್ತಿದೆ. ನಾವು ಕಬ್ಬು ಬೆಳೆಯನ್ನೇ ನಂಬಿಕೊಂಡಿದ್ದೇವೆ. ಬಾಕಿ ಹಣ ಕೇಳಿದ್ರೆ ಮಾಲೀಕರು ನಮ್ಮನ್ನೇ ಬೆದರಿಸ್ತಾರೆ. ಇದರಿಂದ ನಮಗೆ ಬಹಳ ಸಮಸ್ಯೆಯಾಗ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಸಚಿವರ ಗಮನಕ್ಕೂ ತಂದರೂ ಅದು ಪ್ರಯೋಜನವಾಗ್ತಿಲ್ಲ. ರಾಜಕಾರಣಿಗಳೇ ಕಾರ್ಖಾನೆಗಳ ಮಾಲೀಕರಾಗಿದ್ದಾರೆ. ಸರ್ಕಾರದಲ್ಲಿರುವ ಸಚಿವರೇ ಮಾಲೀಕರಾಗಿದ್ದಾರೆ. ಹೀಗಿರುವಾಗ ನಾವು ಯಾರನ್ನು ಕೇಳಬೇಕು? ಅಂತಾ ಸಿಎಂ ಕುಮಾರಸ್ವಾಮಿ ಬಳಿ ಎಳೆ ಎಳೆಯಾಗಿ ತಮ್ಮ ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.

ರೈತಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಕೆ.ಟಿ.ಗಂಗಾಧರ್, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ, ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ, ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್, ಲೋಕೊಪಯೋಗಿ ಸಚಿವ ಎಚ್.ಡಿ.ರೇವಣ್ಣ ಸೇರಿದಂತೆ ವಿವಿಧ ಮುಖಂಡರು ಭಾಗಿಯಾಗಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin