ಶಸ್ತ್ರಾಗಾರದ ಬಳಿ ಸಂಭವಿಸಿ ಸ್ಫೋಟದಲ್ಲಿ 6 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Blast--01

ವಾರ್ಧಾ, ನ.20-ಶಸ್ತ್ರಾಗಾರದ ಬಳಿ ಸಂಭವಿಸಿದ ಸ್ಫೋಟವೊಂದರಲ್ಲಿ ಆರು ಮಂದಿ ಮೃತಪಟ್ಟು ಕೆಲವರು ತೀವ್ರ ಗಾಯಗೊಂಡಿರುವ ಭೀಕರ ಘಟನೆ ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಶಸ್ತ್ರಾಸ್ತ್ರ ಕೋಠಿಗೆ(ಆರ್ಡ್‍ನೆನ್ಸ್ ಡಿಪೋ) ಹಳೆಯ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಸಾಗಿಸುತ್ತಿದ್ದಾಗ ಇಂದು ಬೆಳಗ್ಗೆ 7 ಗಂಟೆಯಲ್ಲಿ ಈ ಸ್ಪೋಟ ಸಂಭವಿಸಿತು ಎಂದು ರಕ್ಷಣಾ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಭೀಕರ ಸ್ಫೋಟ ಸಂಭವಿಸಿದಾಗ ಶಸ್ತಾಗಾರದ ನೌಕರರು ಮತ್ತು 15 ಕೂಲಿ ಕಾರ್ಮಿಕರು ಸ್ಥಳದಲ್ಲಿದ್ದರು ಎಂದು ವಾರ್ಧಾದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಪಿಂಗ್ಲೆ ತಿಳಿಸಿದ್ಧಾರೆ. ತೀವ್ರ ಗಾಯಗೊಂಡ 10 ಮಂದಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ಅವರು ಹೇಳಿದ್ದಾರೆ.

ಹಳೆ ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ನಾಶಪಡಿಸುವುದಕ್ಕಾಗಿ ಇವುಗಳನ್ನು ಬೇರೆಡೆಗೆ ಸಾಗಿಸುತ್ತಿದ್ದಾಗ ಈ ಸ್ಫೋಟ ಸಂಭವಿಸಿತು. ಒಂದು ಪೆಟ್ಟಿಗೆಯಲ್ಲಿದ್ದ ಸ್ಪೋಟಕ ಸ್ಫೋಟಗೊಂಡಿತು. ಮುಕ್ತ ಬಯಲಿನಲ್ಲಿ ಈ ಘಟನೆ ನಡೆದಿದೆ ಎಂದು ಅವರು ವಿವರಿಸಿದ್ದಾರೆ. ಈ ದುರ್ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರು. ಇನ್ನಿಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಪೊಲೀಸ್ ಮಹಾ ನಿರೀಕ್ಷಕ (ನಾಗ್ಪುರ ವಲಯ) ಕೆ.ಎಂ.ಎಂ.ಪ್ರಸನ್ನ ತಿಳಿಸಿದ್ದಾರೆ.

ಸ್ಥಳಕ್ಕೆ ಪೊಲೀಸ್ ಮತ್ತು ರಕ್ಷಣಾ ಇಲಾಖೆಯ ಉನ್ನತಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಾರ್ಧಾ ಜಿಲ್ಲೆಯ ಪಲ್‍ಗಾಂವ್ ಜಿಲ್ಲೆಯ ಕೇಂದ್ರೀಯ ಶಸ್ತ್ರಾಗಾರದ ಸ್ಪೋಟಕಗಳು ಮತ್ತು ಮದ್ದುಗುಂಡುಗಳ ನಿಷ್ಕ್ರಿಯ ಸ್ಥಳವನ್ನು ಈ ಉದ್ದೇಶಗಳಿಗಾಗಿ ಈ ಕಾರ್ಖಾನೆಗೆ ಅಧಿಕೃತವಾಗಿ ನೀಡಲಾಗಿತ್ತು. 2016ರಲ್ಲಿ ಪಲ್‍ಗಾಂವ್‍ನ ಶಸ್ತ್ರಾಸ್ತ್ರ ಕೋಠಿಯಲ್ಲಿ ಭಾರೀ ಸ್ಫೋಟ ಸಂಭವಿಸಿ 16 ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದರು.

Blast--01

Facebook Comments

Sri Raghav

Admin