ಸಿಬಿಐ ನಿರ್ದೇಶಕರ ಗೌಪ್ಯ ಪ್ರತ್ಯುತ್ತರ ಸೋರಿಕೆ ಕುರಿತು ಸುಪೀಂ ತೀವ್ರ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

CBI-Supreme-Court

ನವದೆಹಲಿ, ನ.20-ಕೇಂದ್ರೀಯ ತನಿಖಾ ದಳ(ಸಿಬಿಐ) ನಿರ್ದೇಶಕ ಅಲೋಕ್ ವರ್ಮ ಅವರ ಗೌಪ್ಯ ವರದಿ ಮಾಧ್ಯಮಗಳಿಗೆ ಸೋರಿಕೆಯಾಗಿರುವ ಬಗ್ಗೆ ಇಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಅವರ ಪ್ರಕರಣದ ವಿಚಾರಣೆಯನ್ನು ನ.29ಕ್ಕೆ ಮುಂದೂಡಿದೆ. ಸಿಬಿಐ ನಿರ್ದೇಶಕರ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ ತನಿಖೆ ನಡೆಸಿದ್ದ ಕೇಂದ್ರೀಯ ಜಾಗೃತ ಆಯೋಗ(ಸಿವಿಸಿ) ಸುಪ್ರೀಂಕೋರ್ಟ್‍ಗೆ ತನ್ನ ಪ್ರಾಥಮಿಕ ವರದಿ ಸಲ್ಲಿಸಿತ್ತು.

ಇದಕ್ಕೆ ಪ್ರತ್ಯುತ್ತರ ನೀಡುವಂತೆ ನ್ಯಾಯಾಲಯದ ಅಲೋಕ್ ವರ್ಮ ಅವರಿಗೆ ಸೂಚನೆ ನೀಡಿತ್ತು. ಅದರಂತೆ ನಿನ್ನೆ ವರ್ಮ ಅವರು ಮೊಹರು ಮಾಡಿದ ಲಕೋಟೆಯಲ್ಲಿ(ಸೀಲ್ಡ್ ಕವರ್)ಮಹಾ ಕಾರ್ಯದರ್ಶಿ ಅವರಿಗೆ ಪ್ರತ್ಯುತ್ತರ ಸಲ್ಲಿಸಿದ್ದರು. ಆದರೆ ಈ ಗೋಪ್ಯ ವರದಿ ಮಾಧ್ಯಮಗಳಲ್ಲಿ ಬಹಿರಂಗಗೊಂಡಿರುವ ಬಗ್ಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಕೆ.ಎಂ. ಜೋಸೆಫ್ ಅವರನ್ನು ಒಳಗೊಂಡ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಪೀಠವು ವರ್ಮ ಪರ ಹಿರಿಯ ವಕೀಲ ಫಾಲಿ ಎಸ್.ನಾರಿಮನ್ ಅವರಿಗೆ ನ್ಯೂಸ್ ಪೋರ್ಟಲ್ (ಸುದ್ದಿ ಜಾಲತಾಣ) ಒಂದರಲ್ಲಿ ಪ್ರಕಟವಾದ ಸಿಬಿಐ ನಿರ್ದೇಶಕರ ಪ್ರತಿಕ್ರಿಯೆಯ ಪ್ರತಿಯೊಂದನ್ನು ನೀಡಿದೆ. ಮಾಧ್ಯಮದ ವರದಿಯನ್ನು ಪರಾಮರ್ಶಿಸಿದ ನಂತರ ಇದು ಸೋರಿಕೆಯಾಗಿರುವ ಬಗ್ಗೆ ಪೀಠದ ಮುಂದೆ ಸೋರಿಕೆಯಾಗಿರುವ ವರದಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದು ದಿಗ್ಭ್ರಮೆ ಮತ್ತು ಆಘಾತಕಾರಿ ಸಂಗತಿಯಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಮಾಧ್ಯಮಗಳು ಜವಾಬ್ದಾರಿಯಿಂದ ವರ್ತಿಸಬೇಕು. ಇದಕ್ಕಾಗಿ ಆ ಸುದ್ದಿ ತಾಣ ಮತ್ತು ಪತ್ರಕರ್ತರಿಗೆ ಸಮನ್ಸ್ ಜಾರಿಗೊಳಿಸಬೇಕು ಎಂದು ನಾರಿಮನ್ ಕೋರ್ಟ್‍ಗ ಹೇಳಿದರು. ಗೋಪ್ಯ ವರದಿಯೇ ಮಾಧ್ಯಮದಲ್ಲಿ ಸೋರಿಕೆಯಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್ ಅಲೋಕ್ ವರ್ಮ ಪ್ರಕರಣದ ವಿಚಾರಣೆಯನ್ನು ನ.29ಕ್ಕೆ ಮುಂದೂಡಿತು. ವರ್ಮ ಪರ ವಕೀಲರಾದ ನಾರಿಮನ್ ಮತ್ತು ಗೋಪಾಲ್ ಶಂಕರನಾರಾಯಣನ್ ಅವರು ಮತ್ತೆ ಪೀಠಕ್ಕೆ ಮನವಿ ಮಾಡಿ ಈ ಪ್ರಕರಣ ವಿಚಾರಣೆ ನಡೆಸುವಂತೆ ಕೋರಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin