ಜೆಡಿಎಸ್ ಮುಖಂಡನ ಹತ್ಯೆ ಆರೋಪಿಗಳನ್ನು ಗುಂಡುಹಾರಿಸಿ ಸೆರೆಹಿಡಿದ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

Firing--01

ಕನಕಪುರ, ನ.20- ಜೆಡಿಎಸ್ ಮುಖಂಡನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮುಂಜಾನೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಗುಂಡು ಹಾರಿಸುವ ಮೂಲಕ ವಶಕ್ಕೆ ಪಡೆದುಕೊಳ್ಳುವಲ್ಲಿ ಪಟ್ಟಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ದೀಪಕ್ ಮತ್ತು ರಾಮ ಅಲಿಯಾಸ್ ಕೋತಿ ರಾಮ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

# ಘಟನೆ ವಿವರ:
ಇದೇ 14ರಂದು ರಾತ್ರಿ ಕನಕಪುರದ ಜೆಡಿಎಸ್ ಮುಖಂಡ ರಾಜಗೋಪಾಲ್ ಎಂಬುವರು ಹಳೆ ಪೊಲೀಸ್ ಠಾಣೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಮೂವರು ದುಷ್ಕರ್ಮಿಗಳು ಏಕಾಏಕಿ ಇವರ ಮೇಲೆ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಆರೋಪಿಗಳ ಪತ್ತೆಗಾಗಿ ಪ್ರಕರಣ ದಾಖಲಿಸಿಕೊಂಡಿದ್ದ ಪಟ್ಟಣ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಹಲವು ಮಾಹಿತಿಗಳನ್ನು ಕಲೆಹಾಕಿದ್ದರು. ಈ ಘಟನೆಯಿಂದ ಪಟ್ಟಣ ಜನತೆ ಭಯಭೀತರಾಗಿದ್ದರು.

ಆರೋಪಿಗಳ ಬಂಧನಕ್ಕೆ ಪಟ್ಟಣ ಠಾಣೆ ಸಬ್‍ಇನ್ಸ್‍ಪೆಕ್ಟರ್‍ಗಳಾದ ಅನಂತರಾಮ್ ಹಾಗೂ ಕೃಷ್ಣಕುಮಾರ್ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ಘಟನಾ ಸ್ಥಳದಲ್ಲಿನ ಸಿಸಿ ಟಿವಿ ಆಧರಿಸಿ ಆರೋಪಿಗಳ ಚಹರೆ ಇನ್ನಿತರೆ ಮಾಹಿತಿಗಳನ್ನು ಸಂಗ್ರಹಿಸಿ ಶೋಧ ಕೈಗೊಂಡಿದ್ದವು. ಹಲವು ಬಾರಿ ಆರೋಪಿಗಳಿರುವ ಜಾಗ ತಿಳಿದು ಬಂಧಿಸಲು ಪೊಲೀಸರು ಹೋಗುತ್ತಿದ್ದಂತೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದರು.

ಈ ಮಧ್ಯೆ ಆರೋಪಿಗಳು ಮೈಸೂರು ಮೂಲಕ ತಮಿಳುನಾಡಿಗೆ ಹೋಗಿ ತಲೆಮರೆಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ನಿನ್ನೆ ರಾತ್ರಿ ಪೊಲೀಸರಿಗೆ ಬಂದಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆಗಿಳಿದರು. ಇಂದು ಬೆಳಗಿನ ಜಾವ ಮೂರು ಗಂಟೆ ಸಮಯದಲ್ಲಿ ಆರೋಪಿಗಳು ಸಾತನೂರಿನಿಂದ ಕನಕಪುರಕ್ಕೆ ಬರುವ ಮಾರ್ಗಮಧ್ಯೆಯ ಪೈಪ್‍ಲೈನ್ ರಸ್ತೆಯಲ್ಲಿ ಬಚ್ಚಿಟ್ಟಿಕೊಂಡಿದ್ದಾರೆ ಎಂಬ ಮಾಹಿತಿ ಮೇರೆಗೆ ಎರಡೂ ತಂಡಗಳು ಸ್ಥಳಕ್ಕೆ ತೆರಳಿವೆ.

ಪೊಲೀಸರು ಬರುತ್ತಿದ್ದಂತೆ ಸರ್ಕಲ್ ಇನ್ಸ್‍ಪೆಕ್ಟರ್ ಮಲ್ಲೇಶ್ ಮೇಲೆ ಆರೋಪಿಗಳು ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳಲು ಮುಂದಾದಾಗ ಕಾನ್‍ಸ್ಟೇಬಲ್ ಗೋವಿಂದ ಎಂಬುವರು ಅವರನ್ನು ಬೆನ್ನಟ್ಟಲು ಹೋಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಪರಾರಿಯಾಗಲು ಯತ್ನಿಸಿದ ಆರೋಪಿಗಳಿಗೆ ಶರಣಾಗುವಂತೆ ಇನ್ಸ್‍ಪೆಕ್ಟರ್ ತಿಳಿಸಿದರೂ ಕಿವಿಗೊಡದಿದ್ದಾಗ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ವೇಳೆ ಈ ಗುಂಡುಗಳು ಆರೋಪಿಗಳಿಬ್ಬರ ಕಾಲಿಗೆ ತಗುಲಿ ಕುಸಿದು ಬಿದ್ದಾಗ ತಕ್ಷಣ ಪೊಲೀಸರು ಇವರನ್ನು ವಶಕ್ಕೆ ಪಡೆದು ಕನಕಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಇದೀಗ ಪ್ರಮುಖ ಆರೋಪಿ ಕೌಶಿಕ್‍ಗಾಗಿ ತೀವ್ರ ಶೋಧ ಮುಂದುವರೆದಿದೆ.

Facebook Comments

Sri Raghav

Admin