ಸಿಎಂ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ ಟಿ.ಬಿ.ಜಯಚಂದ್ರ

ಈ ಸುದ್ದಿಯನ್ನು ಶೇರ್ ಮಾಡಿ

T-B-Jayachandra--01
ತುಮಕೂರು, ನ.20- ಬೆಳಗಾವಿಯಲ್ಲಿ ರೈತರು ನಡೆಸಿದ ಪ್ರತಿಭಟನೆ ಸಂಬಂಧ ರೈತ ಮಹಿಳೆ ಹಾಗೂ ರೈತರ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲಘುವಾಗಿ ಮಾತನಾಡಿರುವುದರ ಬಗ್ಗೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಬೇಸರವಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಅದರಲ್ಲಿಯೂ ದೇಶದ ಬೆನ್ನೆಲುಬು ಎಂದು ಕರೆಯುವ ರೈತರ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನಡೆದುಕೊಂಡ ರೀತಿ ಆಶ್ಚರ್ಯವಾಗಿದೆ. ನಾವು ಮಾತನಾಡುವಾಗ ಅತ್ಯಂತ ಸೂಕ್ಷ್ಮವಾಗಿ ಎಚ್ಚರಿಕೆ ವಹಿಸಿ ಮಾತನಾಡಬೇಕಿದೆ ಎಂದರು.

ರೈತರು ಗೂಂಡಾಗಳು ಎಂದಿರುವುದು, ನಾಲ್ಕು ವರ್ಷಗಳಿಂದ ಎಲ್ಲಿ ಮಲಗಿದ್ದೆ ಎಂದು ಕೇಳಿರುವುದರ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದರು. ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ, ಕಾನೂನು ಸಚಿವರಾಗಿ ಹಲವು ಖಾತೆಗಳನ್ನು ನಿಭಾಯಿಸಿರುವ ಟಿ.ಬಿ.ಜಯಚಂದ್ರ ಅವರನ್ನು ನಿರ್ಲಕ್ಷಿಸಿದ ಪರಿಣಾಮ ಇಂತಹ ಆಚಾತುರ್ಯ ನಡೆಯುತ್ತಿವೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಸೋತಿದ್ದೇನೆ. ಇದರ ಬಗ್ಗೆ ಹಾಲಿ ಸಚಿವರು, ಇದೇ ಜಿಲ್ಲೆಯ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರೂ ಆದ ಡಾ.ಜಿ.ಪರಮೇಶ್ವರ್ ಅವರೂ ಇದ್ದಾರೆ. ಅವರನ್ನು ಕೇಳಿ, ನನಗೇ ಏಕೆ ಪ್ರಶ್ನೆ ಮಾಡುತ್ತೀರ ಎಂದು ಹೇಳಿದರು.
ರೈತರ ಸಾಲಮನ್ನಾ ವಿಚಾರ ಕಳೆದ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಾಮಾಣಿಕವಾಗಿ ಸ್ಪಂದಿಸಿದ್ದಾರೆ ಎಂದರು.

ರೈತರ ಸಮಸ್ಯೆಯನ್ನು ಅತ್ಯಂತ ಸಹಾನುಭೂತಿಯಿಂದ ಆಲಿಸಬೇಕು. ಅವರ ಮನವಿಯನ್ನು ಜಾಗೃತಿಯಿಂದ ಪರಿಗಣಿಸಬೇಕು. ರೈತರ ಸಮಸ್ಯೆ ಬಂದಾಗ ನಾನು ಕೂಡ ಬಹಳ ಪ್ರಾಮುಖ್ಯತೆ ಕೊಟ್ಟು ಚರ್ಚೆ ಮಾಡುತ್ತಿದ್ದೆ. ರೈತರು ಈಗ ಅತ್ಯಂತ ಕಷ್ಟದಲ್ಲಿದ್ದಾರೆ. ನೂರಕ್ಕೂ ಹೆಚ್ಚು ತಾಲೂಕುಗಳು ಬರಗಾಲಕ್ಕೆ ತುತ್ತಾಗಿವೆ. ರಾಜ್ಯದಲ್ಲಿ ಅತಿವೃಷ್ಟಿ-ಅನಾವೃಷ್ಟಿ ಎರಡೂ ಆಗಿವೆ. ಹಾಗಾಗಿ ರೈತರಿಗೆ ಕಷ್ಟ ಬಂದಿದೆ. ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸಬೇಕು ಎಂದರು.

ನಾನು ಕ್ಷೇತ್ರದಲ್ಲಿ ಕಾರ್ಯಕರ್ತರಿಂದ ದೂರ ಉಳಿದಿಲ್ಲ. ಅವರ ಜತೆ ಇದ್ದೇನೆ. ಶಿರಾದಲ್ಲಿ ಎಸ್‍ಡಿಪಿಐ ಪಕ್ಷ ತಲೆ ಎತ್ತಿದೆ. ನಿಮ್ಮ ಗಮನಕ್ಕೆ ಬಂದಿಲ್ಲವೆ ಎಂದಾಗ ನನಗೆ ಗೊತ್ತಿಲ್ಲ ಎಂದರು. ಶಿರಾದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಕಾನೂನು ಬಾಹಿರ ಚಟುವಟಿಕೆಗಳು ಎಲ್ಲೆ ಮೀರಿ ನಡೆಯುತ್ತಿವೆ ಎಂಬ ಮಾಹಿತಿ ಇದೆ ಎಂದು ಕೇಳಿದ ಪ್ರಶ್ನೆಗೆ ನೂತನ ಶಾಸಕರಿದ್ದಾರೆ. ಈ ಬಗ್ಗೆ ಅವರನ್ನು ಕೇಳಿ ಎಂದು ಹೇಳಿದರು.

Facebook Comments

Sri Raghav

Admin