ದೂದ್‍ಪೇಡಾ-ಐಂದ್ರಿತಾ ಮಾದರಿ ಮದುವೆಗೆ ಮಹೂರ್ತ ಫಿಕ್ಸ್

ಈ ಸುದ್ದಿಯನ್ನು ಶೇರ್ ಮಾಡಿ

digant-aa01

ಬೆಂಗಳೂರು, ನ.21- ಸ್ಯಾಂಡಲ್‍ವುಡ್‍ನ ದೂದ್‍ಪೇಡಾ ದಿಗಂತ್ ಮತ್ತು ಇಂದ್ರಕನ್ಯೆ ಐಂದ್ರಿತಾ ರೇ ಮದುವೆ ಡಿಸೆಂಬರ್ 13ರಂದು ಉದ್ಯಾನನಗರಿ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ನಂಬಲಾರ್ಹ ಮೂಲಗಳು ತಿಳಿಸಿವೆ. ಇದರೊಂದಿಗೆ ಒಂಭತ್ತು ವರ್ಷಗಳ ಇವರಿಬ್ಬರ ಪ್ರೀತಿ-ಪ್ರೇಮ ಕೊನೆಗೂ ವಿವಾಹ ಬಂಧನದೊಂದಿಗೆ ಶುಭಂ ಆಗಲಿದೆ.

ದಿಗಂತ್ ಮತ್ತು ಐಂದಿತ್ರಾ ನಡುವೆ ಏನೋ ನಡೆಯುತ್ತಿದೆ ಎಂಬ ಗುಸು-ಗುಸು ಶುರುವಾಗಿ ಅನೇಕ ವರ್ಷಗಳೇ ಉರುಳಿವೆ. ಈ ಪ್ರಣಯದ ಪಕ್ಷಿಗಳು ಕೆಲವು ವರ್ಷಗಳ ಹಿಂದೆಯೇ ಸತಿ-ಪತಿಗಳಾಗಬೇಕಿತ್ತು. ಆದರೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕಲ್ಲವೇ ? ಈಗ ಡಿಸೆಂಬರ್ 13ರಂದು ದಿಗಂತ್, ಐಂದಿತ್ರಾಗೆ ಮಾಂಗಲ್ಯಧಾರಣೆ ಮಾಡುವುದು ಬಹುತೇಕ ಖಚಿತವಾಗಿದೆ.

ಈ ಜೋಡಿ ಇದುವರೆಗೂ ತಮ್ಮ ಪ್ರೀತಿ-ಪ್ರೇಮವನ್ನು ಮಾಧ್ಯಮದ ಎದುರು ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ. ಆದರೆ ಇತ್ತೀಚೆಗೆ ಖಾಸಗಿ ವಾಹಿನಿಗಳ ಪ್ರತ್ಯೇಕ ಟಾಕ್ ಶೋಗಳಲ್ಲಿ ದಿಗ್ಗಿ ಮತ್ತು ಐಂದ್ರಿತಾ ತಮ್ಮ ಲವ್ವಿ-ಡವ್ವಿ ಗುಟ್ಟನ್ನು ರಟ್ಟು ಮಾಡಿದ್ದರು. ಸ್ಯಾಂಡಲ್‍ವುಡ್ ಸೆಂಚುರಿ ಸ್ಟಾರ್ ಡಾ.ಶಿವರಾಜಕುಮಾರ್ ಟಾಕ್‍ಶೋನಲ್ಲಿ ದಿಗಂತ್‍ನಿಂದ ಇದನ್ನು ಬಾಯಿ ಬಿಡಿಸಿದ್ದರು. ಶಿವಣ್ಣ ಕೇಳಿದ ಪ್ರಶ್ನೆಗೆ ಉತ್ತರಿಸದೇ ಬೇರೆ ಮಾರ್ಗ ಇಲ್ಲದ ದಿಗಂತ್ ಇದೇ ವರ್ಷಾಂತ್ಯದಲ್ಲಿ ನಮ್ಮ ಮದುವೆ ನಡೆಯಲಿದೆ ಎಂದು ತಿಳಿಸಿದ್ದರು.

# ವಿವಾಹದಲ್ಲೂ ಸಾರ್ಥಕತೆ :
ಬೆಂಗಳೂರಿನಲ್ಲಿ ಈ ತಾರಾ ಜೋಡಿ ತಮ್ಮ ವಿವಾಹವನ್ನು ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಚಿತ್ರರಂಗದ ಖ್ಯಾತನಾಮರು ಸೇರಿದಂತೆ ಅತಿಗಣ್ಯ ವ್ಯಕ್ತಿಗಳು ಹಾಗೂ ಆಪ್ತೇಷ್ಟರನ್ನು ಮಾತ್ರ ಮದುವೆಗೆ ಆಹ್ವಾನಿಸಲಿದ್ದಾರೆ. ಅದ್ದೂರಿ ವಿವಾಹ ಮತ್ತು ಆರತಕ್ಷತೆಗೆ ದುಬಾರಿ ಹಣ ವ್ಯಯಿಸುವ ಬದಲು ಆ ಹಣವನ್ನು ಸಮಾಜದ ಒಳತಿಗಾಗಿ ಬಳಸಲು ಈ ಜೋಡಿ ನಿರ್ಧರಿಸಿದ್ದಾರಂತೆ. ಒಟ್ಟಾರೆ ಡಿಸೆಂಬರ್‍ನಲ್ಲಿ ಸ್ಯಾಂಡಲ್‍ವುಡ್‍ನಲ್ಲಿ ಲವ್‍ಬರ್ಡ್‍ಗಳ ಮದುವೆಗೆ ವೇದಿಕೆ ಸಜ್ಜಾಗುತ್ತಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin