ಜಮೀನಿನಲ್ಲಿ ಕಾಲಿಟ್ಟಲ್ಲೆಲ್ಲಾ ಕರೆಂಟ್…!

ಈ ಸುದ್ದಿಯನ್ನು ಶೇರ್ ಮಾಡಿ

Current--01

ದೊಡ್ಡಬಳ್ಳಾಪುರ, ನ.21-ಜಮೀನಿನಲ್ಲಿ ಕಾಲಿಟ್ಟಲ್ಲೆಲ್ಲಾ ಕರೆಂಟ್…! ತೋಟಗಳಿಗೆ ಹೋಗಲು ಹೆದರುತ್ತಿರುವ ರೈತರು.ಇದರಿಂದಾಗಿ ಇಡೀ ಗ್ರಾಮವೇ ಆತಂಕದಲ್ಲಿದೆ. ತಾಲೂಕಿನ ಕುರುವೆಗೆರೆ ಗ್ರಾಮದ ರೈತರ ಜಮೀನುಗಳ ಮೇಲೆ ಹಾದು ಹೋಗಿರುವ ಹೈಟೆನ್ಷನ್ ವಿದ್ಯುತ್ ಲೈನ್‍ಗಳಿಂದ ಭೂಮಿಯಲ್ಲಿ ವಿದ್ಯುತ್ ಪ್ರವಹಿಸುತ್ತಿದೆ.

ತಮಿಳುನಾಡಿನ ಧರ್ಮಪುರಿಯಿಂದ ಮಧುಗಿರಿಗೆ ಹಾದು ಹೋಗಿರುವ ಪವರ್ ಲೈನ್‍ನಲ್ಲಿ 765 ಕೆವಿ ವ್ಯಾಟ್ ವಿದ್ಯುತ್ ಪ್ರಸರಣ ಮಾಡುವ ಎಕ್ಸ್‍ಪ್ರೆಸ್ ಕಾರಿಡಾರ್‍ನಿಂದ ವಿದ್ಯುತ್ ಹರಿಯುತ್ತಿದೆ. ಇದರಿಂದ ಭಯಗೊಂಡ ರೈತರು ಬೆಸ್ಕಾಂ ಅಧಿಕಾರಿಗಳಿಗೆ ಸುದ್ದಿ ತಿಳಿಸಿದ್ದು, ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಮಣ್ಣಿನಲ್ಲಿ ಬಲ್ಬ್ ಉರಿಯುತ್ತಿರುವುದನ್ನು ಕಂಡು ಅವರೇ ದಂಗಾಗಿ ಹೋಗಿದ್ದಾರೆ.

ಕೂಲಿ ಕಾರ್ಮಿಕರಂತೂ ತೋಟಗಳಿಗೆ ಕೆಲಸ ಮಾಡಲು ಬರಲು ಹೆದರುತ್ತಿದ್ದಾರೆ. ಕಂಬ ಅಳವಡಿಕೆಯಲ್ಲಿ ತಾಂತ್ರಿಕ ದೋಷ ಉಂಟಾಗಿ ಈ ರೀತಿ ವಿದ್ಯುತ್ ಪ್ರವಹಿಸುತ್ತಿದೆ. ಸುಮಾರು 300 ಮೀಟರ್‍ವರೆಗೂ ವಿದ್ಯುತ್ ಹರಿಯುತ್ತಿದ್ದು, ಕಂಬ ಮತ್ತು ತಂತಿ ಅಳವಡಿಕೆ ನಂತರ ತಾಂತ್ರಿಕ ಪರೀಕ್ಷಿಸದೆ ವಿದ್ಯುತ್ ಹರಿಸಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಹೈಟೆನ್ಷನ್ ತಂತಿ ಹಾದು ಹೋಗಿರುವ ಸ್ಥಳಗಳಲ್ಲಿ ಇದೇ ಪರಿಸ್ಥಿತಿ ಉಂಟಾಗಿದೆ. ಇದಲ್ಲದೆ, ಲೈನ್ ಬಿಗಿ ಇಲ್ಲದೆ ಜೋತು ಬಿದ್ದಿವೆ. ಹಲವು ಭಾಗಗಳಲ್ಲಿ ಮರಗಳಿಗೂ ತಾಗುತ್ತಿವೆ. ಪವರ್ ಗ್ರಿಡ್ ಕಂಬ ಅಳವಡಿಕೆ ವೇಳೆ ಅರ್ಥಿಂಗ್ ಬದಲಾಗಿ ಫೇಸ್ ವಿದ್ಯುತ್ ಹರಿಯುತ್ತಿರುವ ಶಂಕೆ ವ್ಯಕ್ತವಾಗಿದೆ.ಇದಲ್ಲದೆ, ವಿದ್ಯುತ್ ಲೈನ್ ಹಾದು ಹೋಗಿರುವ ಆಸುಪಾಸಿನಲ್ಲಿ ಬೆಳೆಯಲಾಗಿದ್ದ ಬೆಳೆಗಳು ಸುಟ್ಟು ಕರಕಲಾಗುತ್ತಿವೆ. ದ್ರಾಕ್ಷಿ ಬೆಳೆಯಂತೂ ವಿದ್ಯುತ್ ಶಾಖದಿಂದ ಬಹುತೇಕ ನಾಶವಾಗಿದೆ. ಬೆಂಕಿ ರೋಗದಂತೆ ಎಲೆಗಳು, ಬಳ್ಳಿ ಸುಟ್ಟು ಹೋಗಿವೆ. ಹಾಗಾಗಿ ಕೈಗೆ ಬಂದ ಬೆಳೆ ಬಾಯಿಗೆ ಬಾರದಂತಾಗಿದೆ.

Current--02

ಬೆಸ್ಕಾಂ ಹಾಗೂ ಪವರ್ ಗ್ರಿಡ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಹೋಗಿದ್ದಾರೆ. ಆದರೆ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಪವರ್‍ಗ್ರಿಡ್ ಹಾಗೂ ಬೆಸ್ಕಾಂ ಅಧಿಕಾರಿಗಳ ಕೆಸರೆರಚಾಟದಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ಒಟ್ಟಾರೆ ಇದರಿಂದ ರೈತರು ಭಾರೀ ಸಂಕಷ್ಟಕ್ಕೀಡಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಹೆಚ್ಚಿನ ಅನಾಹುತ ಸಂಭವಿಸುವ ಮೊದಲು ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Facebook Comments

Sri Raghav

Admin