ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಬಡವರ ಬಂಧು’ ಯೋಜನೆಗೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Badavara-Bandhu-01

ಬೆಂಗಳೂರು, ನ.22- ಬೀದಿ ಬದಿ ವ್ಯಾಪಾರಿಗಳಿಗೆ ಪೊಲೀಸರು ಮತ್ತು ಅಧಿಕಾರಿಗಳು ಗದಾಪ್ರಹಾರ ಮಾಡಿ ಎತ್ತಂಗಡಿ ಮಾಡದೆ ಅವರಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚಿಸಿದರು. ಸಹಕಾರ ಇಲಾಖೆ ಯಶವಂತಪುರ ಎಪಿಎಂಸಿ ಮಾರುಕಟ್ಟೆ ಯಾರ್ಡ್‍ನಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಬಡವರ ಬಂಧು ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಣ್ಣ ಪುಟ್ಟ ವ್ಯಾಪಾರಿಗಳಿಗೆ ತೊಂದರೆ ಕೊಡದೆ ಅವರಿಗೆ ಜಾಗ ಗುರುತಿಸಿಕೊಡಿ. ಅವರಿಂದ 50, 100ರೂ. ವಸೂಲಿ ಮಾಡುವುದಕ್ಕೆ ಕಡಿವಾಣ ಹಾಕಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಹೇಳಿದರು. ಕಾನ್‍ಸ್ಟೇಬಲ್‍ಗಳಿಗೆ ಸಂಬಳ ಸಾಕಾಗುತ್ತಿಲ್ಲ ಎಂಬುದು ಗೊತ್ತಿದೆ. ಅವರ ಸಮಸ್ಯೆಗೆ ಪರಿಹಾರ ನೀಡಿ ಉತ್ತಮ ಜೀವನಕ್ಕೂ ಸವಲತ್ತು ಕೊಡಲಾಗುವುದು. ನಿಷ್ಟೆಯಿಂದ ಕೆಲಸ ಮಾಡಿ ಎಂದು ತಿಳಿಸಿದರು.

ಚಿಕ್ಕಂದಿನಿಂದ ಬಡವರ ಕಷ್ಟ ನೋಡಿದ್ದೇನೆ. ಅವರ ಕಷ್ಟಗಳಿಗೆ ಸ್ಪಂದಿಸಬೇಕೆಂಬ ಉದ್ದೇಶದಿಂದ ಬಡವರ ಬಂಧು ಯೋಜನೆ ಪ್ರಾರಂಭಿಸಿದ್ದೇನೆ. ಲೇವಾದೇವಿದಾರರಿಂದ ಕಿರುಕುಳಕ್ಕೊಳಗಾಗುತ್ತಿರುವ ಸಣ್ಣ ವ್ಯಾಪಾರಿಗಳ ಬದುಕು ನೆಮ್ಮದಿಯಾಗಿರಲಿ ಎಂಬುದೂ ನಮ್ಮ ಉದ್ದೇಶ ಎಂದರು. ಕೈಗೆ ಚಿನ್ನದ ಕಡಗ, ಕತ್ತಿಗೆ ಚಿನ್ನದ ಸರ ಧರಿಸಿದವರು ಬೆಳಗ್ಗೆ ಸಾಲ ಕೊಡುತ್ತಾರೆ. ಸಂಜೆ ವಸೂಲು ಮಾಡುತ್ತಾರೆ. ಬೆಳಗ್ಗೆ 5 ಗಂಟೆ ವೇಳೆಗೆ ತಳ್ಳುವ ಗಾಡಿ ಕೆಳಗೆ ಮಕ್ಕಳನ್ನು ಮಲಗಿಸಿ ವ್ಯಾಪಾರ ಮಾಡಿದರೂ ನೆಮ್ಮದಿ ಇರುತ್ತಿರಲಿಲ್ಲ. ರಕ್ತ ಹೀರುವವರ ಕಪಿ ಮುಷ್ಟಿಯಿಂದ ಅವರನ್ನು ಹೊರತರಲು 10 ಸಾವಿರ ರೂ.ವರೆಗೂ ಬಡ್ಡಿ ರಹಿತ ಸಾಲ ನೀಡುವ ಯೋಜನೆ ತರಲಾಗಿದೆ. ಸಂಜೆ ಮನೆಗೆ ನೆಮ್ಮದಿಯಾಗಿ ಮರಳಬೇಕು ಎಂಬ ಉದ್ದೇಶದಿಂದ ಆರ್ಥಿಕ ಇಲಾಖೆ ನೀಡಿದ ಹೊರೆಯಾಗಲಿದೆ ಎಂಬ ಸಲಹೆಯನ್ನು ಬದಿಗಿರಿಸಿ ನಾಲ್ಕೂವರೆ ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲವಾಗುವ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ ಎಂದರು.

ಉತ್ತಮ ರೀತಿಯಲ್ಲಿ ಈ ಯೋಜನೆಯನ್ನು ಬಳಸಿಕೊಳ್ಳಿ, ಚಕ್ರಬಡ್ಡಿ ನೀಡುತ್ತಿದ್ದವರಿಗೆ ಯಾವ ರೀತಿ ಮರುಪಾವತಿ ಮಾಡುತ್ತಿದ್ದಿರೋ ಅದೇ ರೀತಿ ಇಲಾಖೆಗೆ ಸಾಲ ಮರುಪಾವತಿಸುವುದರಿಂದ ಮರು ಸಾಲ ಪಡೆಯಲು ಅನುಕೂಲವಾಗುತ್ತದೆ ಎಂದು ಸಿಎಂ ಸಲಹೆ ನೀಡಿದರು. ಇನ್‍ಫೋಸಿಸ್‍ನ ನಾರಾಯಣಮೂರ್ತಿ ಅವರು 10ಸಾವಿರ ಮೂಲ ಬಂಡವಾಳದಿಂದ ಪ್ರಾರಂಭಿಸಿ ಇಂದು ಲಕ್ಷಾಂತರ ಮಂದಿಗೆ ಉದ್ಯೋಗ ನೀಡುತ್ತಿದ್ದಾರೆ. ಅವರನ್ನು ಮಾದರಿಯನ್ನಾಗಿಟ್ಟುಕೊಳ್ಳಿ ನಿರಾಶರಾಗಬೇಡಿ. ನಿಮ್ಮ ಮನೆ ಬಾಗಿಲಿಗೆ ಸಾಲ ನೀಡುವ ಯೋಜನೆ ತಂದಿದ್ದೇವೆ ಎಂದರು.

ಜನ ಸಹಕಾರ ನೀಡಿದರೆ ಬೆಂಗಳೂರಿನ ವಾಹನ ದಟ್ಟಣೆ, ಕಸವಿಲೇವಾರಿ ಸಮಸ್ಯೆಗಳಿಗೂ ಕಠಿಣ ಕ್ರಮ ಕೈಗೊಳ್ಳುವ ಅಭಿಲಾಷೆ ಇದೆ. ಪೆರಿಪೆರಲ್ ರಿಂಗ್ ರಸ್ತೆಗೆ 12 ಸಾವಿರ ಕೋಟಿ ರೂ. ಬೇಕಾಗಿತ್ತು. ಈಗ 17 ಸಾವಿರ ಕೋಟಿ ಬೇಕು. ಭೂ ಸ್ವಾಧೀನ ಮಾಡಿಕೊಳ್ಳಲು ಬೇಕಾಗಿರುವ ನಾಲ್ಕೂವರೆ ಸಾವಿರ ಕೋಟಿ ರೂ.ಗಳನ್ನು ಸರ್ಕಾರವೇ ಭರಿಸಲು ತೀರ್ಮಾನಿಸಿದೆ ಎಂದು ಸಿಎಂ ಹೇಳಿದರು. ಬಡ್ಡಿ ವಸೂಲಿ ಮಾಡುವವರು ಗುಂಡಾಗಳನ್ನು ಬಳಸುತ್ತಾರೆ ಎಂಬುವುದನ್ನು ಪ್ರಸ್ತಾಪಿಸಿ, ನಾನು ಯಾವ ರೀತಿ ಮಾತನಾಡಬೇಕು ಎಂಬ ಬಗ್ಗೆ ಸಮಿತಿ ರಚಿಸಿ ಅವರ ಸಲಹೆಯಂತೆ ಭಾಷಣ ಮಾಡಬೇಕೇನೋ ಎಂದು ಬೇಸರ ವ್ಯಕ್ತಪಡಿಸಿದರು.  ಕಬ್ಬು ಬೆಳೆಗಾರರ ಸಮಸ್ಯೆ ಇಂದಿನದಲ್ಲ. ಎಫ್‍ಆರ್‍ಪಿ ದರವನ್ನು ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತದೆ. ಅದರ ದರವನ್ನು ಕೊಡಿಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದು, ಬಾಯಿ ಮಾತಿಗೆ ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆ ಮಾಲೀಕರು ಒಪ್ಪಂದ ಮಾಡಿಕೊಂಡಿದ್ದಾರಿಂದ ಸಮಸ್ಯೆ ಎದುರಾಗಿದೆ ಎಂದು ಹೇಳಿದರು.

Badavara-Bandhu-02

# ಬಡವರ ಬಾಳಿನ ಬೆಳಕು:
ಡಿಸಿಎಂ ಡಾ.ಜಿ.ಪರಮೇಶ್ವರ್ ಮಾತನಾಡಿ, ಬಡವರ ಬಂಧು ಯೋಜನೆ ಬೀದಿ ಬದಿ ವ್ಯಾಪಾರಿಗಳ ಬಾಳಿಗೆ ಬೆಳಕು ನೀಡುವ ಯೋಜನೆಯಾಗಿದೆ ಎಂದು ಹೇಳಿದರು.ಶೇ.10ರಿಂದ 50ರಷ್ಟು ಬಡ್ಡಿ ಕಟ್ಟಿ ಶಾರೀರಿಕ, ಮಾನಸಿಕ, ಹಿಂಸೆ ಅನುಭವಸುತ್ತಿದ್ದುದನ್ನು ತಪ್ಪಿಸಲು ನಮ್ಮ ಸಮ್ಮಿಶ್ರ ಸರ್ಕಾರ ಈ ಯೋಜನೆ ತಂದಿದೆ ಎಂದು ತಿಳಿಸಿದರು.  ಈ ಯೋಜನೆ ಯಾವುದೇ ಕಾರಣಕ್ಕೂ ವ್ಯರ್ಥವಾಗಬಾರದು. ನಮ್ಮ ಕ್ಷೇತ್ರದ ಹೂ ಮಾರುವ ರಾಜಮ್ಮ ಎಂಬಾಕೆಯ ಮಗ ಐಎಎಸ್ ಆಗಿದ್ದಾನೆ. ನೀವೂ ಕೂಡ ನಿರಾಶರಾಗಬೇಡಿ. ನಿಮ್ಮ ಮಕ್ಕಳೂ ಸಹ ಇಂಜಿನಿಯರ್, ಡಾಕ್ಟರ್ ಆಗಬಹುದು. ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.  ಕಬ್ಬು ಬೆಳೆಗಾರರ ಸಮಸ್ಯೆ ಆಲಿಸಲು ಸತತ ಆರು ಗಂಟೆ ಕಾಲ ಮುಖ್ಯಮಂತ್ರಿಗಳು ಸಭೆ ನಡೆಸಬೇಕಾಯಿತು ಎಂದು ಸಮರ್ಥಿಸಿಕೊಂಡರು.

Badavara-Bandhu-03

#443 ಮನೆಗಳಿಗೆ ಅನುಮೋದನೆ ನೀಡಿ:
ಶಾಸಕ ಕೆ.ಗೋಪಾಲಯ್ಯ ಮಾತನಾಡಿ, ನನ್ನ ಕ್ಷೇತ್ರದಲ್ಲಿ 443 ಮನೆಗಳಿಗೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಅನುಮೋದನೆ ನೀಡಬೇಕು. 30, 40 ವರ್ಷದಿಂದ ನಮ್ಮ ಕ್ಷೇತ್ರದಲ್ಲಿ ವಾಸಿಸುತ್ತಿರುವವರಿಗೆ ಹಕ್ಕು ಪತ್ರ ನೀಡಬೇಕು, ಕಂಠೀರವ ಸ್ಟುಡಿಯೋ ಬಳಿ ಅರ್ಧಕ್ಕೆ ನಿಂತಿರುವ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು, ಬೋರ್ ಇರುವ ಮನೆಗಳಿಗೆ ವಿಧಿಸಿರುವ ಶುಲ್ಕದಿಂದ ವಿನಾಯ್ತಿ ನೀಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ದೊಡ್ಡ ಕಂಪೆನಿಗಳು ಎಪಿಎಂಸಿ ಪ್ರವೇಶಿಸುತ್ತಿವೆ. ಇದನ್ನು ತಡೆಯಲು ಕೂಡಲೇ ಮುಖ್ಯಮಂತ್ರಿಗಳು ವರ್ತಕರೊಂದಿಗೆ ಸಭೆ ನಡೆಸಬೇಕು. ಅಕ್ರಮ-ಸಕ್ರಮಗೊಳಿಸುವ ಸಂಬಂಧ ಸೂಕ್ತ ತಿದ್ದುಪಡಿ ತರಬೇಕೆಂದು ಗೋಪಾಲಯ್ಯ ಕೋರಿದರು. ಸಹಕಾರಿ ಪಿತಾಮಹಾ ಸಿದ್ದನಗೌಡ ಸಣ್ಣರಾಮಣ್ಣಗೌಡ ಅವರ ಪ್ರತಿಮೆಗೆ ಸಿಎಂ, ಡಿಸಿಎಂ ಸೇರಿದಂತೆ ಎಲ್ಲರೂ ಪುಷ್ಪನಮನ ಸಲ್ಲಿಸಿದರು.

ಮೇಯರ್ ಗಂಗಾಂಬಿಕೆ, ಮಾಜಿ ಉಪ ಮೇಯರ್ ಹೇಮಲತಾ, ಶಾಸಕ ಮುನಿರತ್ನ, ವಿಧಾನಪರಿಷತ್ ಸದಸ್ಯರಾದ ಎಸ್.ರವಿ, ಟಿ.ಎ.ಶರವಣ, ಆ.ದೇವೇಗೌಡ, ಸಹಕಾರಿ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಲಾಂಬಿಕಾದೇವಿ, ಸಹಕಾರಿ ಸಂಘಗಳ ನಿಬಂಧಕ ಎಂ.ಕೆ.ಅಯ್ಯಪ್ಪ, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್, ಪಾಲಿಕೆ ಸದಸ್ಯರಾದ ಎಂ.ಮಹದೇವ, ಭದ್ರೇಗೌಡ, ನೇತ್ರಾನಾರಾಯಣ್ ಮತ್ತಿತರರು ಪಾಲ್ಗೊಂಡಿದ್ದರು.

Facebook Comments

Sri Raghav

Admin