‘ಮರಳು ಸಿಗದಿದ್ದರೆ ಜನರು ದಂಗೆ ಏಳಬೇಕು’ : ಶಾಸಕ ರೇಣುಕಾಚಾರ್ಯ

ಈ ಸುದ್ದಿಯನ್ನು ಶೇರ್ ಮಾಡಿ

CM-Renukacharya-Kumaraswamy

ಬೆಂಗಳೂರು, ನ.22- ಆಶ್ರಯ ಮನೆ, ಶೌಚಾಲಯ, ಸಮುದಾಯ ಭವನ, ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಡೆಸಲು ಸಾರ್ವಜನಿಕರಿಗೆ ಮುಕ್ತವಾಗಿ ಮರಳು ಸಿಗದಿದ್ದರೆ ಜನರು ದಂಗೆ ಏಳಬೇಕೆಂದು ಹೊನ್ನಾವಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕರೆ ಕೊಟ್ಟಿದ್ದಾರೆ. ಕುರ್ಚಿ ಉಳಿಸಿಕೊಳ್ಳಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜನರಿಗೆ ದಂಗೆ ಏಳುವಂತೆ ಕರೆ ಕೊಡುತ್ತಾರೆ. ಅದೇ ರೀತಿ ನಮ್ಮ ಜನರಿಗೆ ಮರಳು ಸಿಗದಿರುವಾಗ ದಂಗೆ ಏಳುವಂತೆ ಕರೆ ಕೊಟ್ಟರೆ ತಪ್ಪೇನು ಎಂದು ಅವರು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನಾಳಿ ಕ್ಷೇತ್ರದಲ್ಲಿ ಜನರಿಗೆ ಮರಳು ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ, ಶೌಚಾಲಯ, ಕಟ್ಟಡ ಕಾಮಗಾರಿಗಳಿಗೆ ಮರಳು ಸಿಗದೆ ಸಂಪೂರ್ಣವಾಗಿ ನಿಂತು ಹೋಗಿವೆ. ಈ ಎಲ್ಲಾ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ, ಎಸ್‍ಪಿ, ಎಸಿ, ತಹಸೀಲ್ದಾರ್ ಕಾರಣಕರ್ತರು ಎಂದು ದೂರಿದರು.

ನನ್ನ ಕ್ಷೇತ್ರದ ಜನರಿಗೆ ಮುಕ್ತವಾಗಿ ಮರಳು ಸಿಗಬೇಕು, ಇದಕ್ಕಾಗಿ ನಾನು ಯಾವುದೇ ರೀತಿಯ ಹೋರಾಟ ಮಾಡಲು ಸಿದ್ದ. ತಾಕತ್ತಿದ್ದರೆ ಸರ್ಕಾರ ನನ್ನನ್ನು ಬಂಧಿಸಲಿ ಎಂದು ಸವಾಲು ಹಾಕಿದರು. ಮರಳು ಬ್ಲಾಕ್‍ಗಳನ್ನು ಹರಾಜು ಹಾಕಬೇಕೆಂದು ನಾನು ಕ್ಷೇತ್ರದ ಜನತೆ ಜತೆ ಎತ್ತಿನಗಾಡಿ ಮೂಲಕ ನದಿಗಿಳಿದು ಪ್ರತಿಭಟನೆ ಮಾಡಿದರೆ, ನನ್ನ ವಿರುದ್ಧ ಐಪಿಸಿ ಸೆಕ್ಷನ್ 117, 114, 143 ಹಾಗೂ 379 ದೂರುಗಳನ್ನು ದಾಖಲಿಸಿದ್ದಾರೆ. ಇನ್ನೂ ಇಂತಹ 50 ದೂರುಗಳನ್ನು ದಾಖಲಿಸಿದರೂ ನಾನು ಹೆದರುವುದಿಲ್ಲ. ಬೇಕಿದ್ದರೆ ಈಗಲೇ ಬಂಧಿಸಲಿ. ನನಗೆ ಇವೆಲ್ಲ ಹೊಸದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನ್ನ ವಿರುದ್ಧ ದೂರು ದಾಖಲಿಸಿದರೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅಮಾಯಕರ ಮೇಲೆ ಯಾವ ಕಾರಣಕ್ಕಾಗಿ ದೂರು ದಾಖಲಿಸಿದ್ದೀರಿ ? ರೈತರ ಮೇಲೆ ಲಾಠಿ ಪ್ರಹಾರ ನಡೆಸಲಾಗಿದೆ. ಇದಕ್ಕೆಲ್ಲ ಸಚಿವ ಎಸ್.ಆರ್.ಶ್ರೀನಿವಾಸ್ ಕಾರಣ. ಇಂತಹವರು ನಮ್ಮ ಜಿಲ್ಲೆಗೆ ಅಗತ್ಯವಿಲ್ಲ ಎಂದು ಟೀಕಿಸಿದರು. ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಇದ್ದರೂ ಶಾಸಕರು, ಸಂಸದರ ಜತೆ ಒಂದೇ ಒಂದು ಸಭೆಯನ್ನೂ ನಡೆಸಿಲ್ಲ. ಕೇವಲ ಶೋಕಿಗಾಗಿ ಮಾತ್ರ ಸಚಿವರು ಜಿಲ್ಲೆಗೆ ಬರುತ್ತಾರೆ. ಸಚಿವರ ಕುಮ್ಮಕ್ಕಿನಿಂದಲೇ ನನ್ನ ವಿರುದ್ಧ ದೂರು ದಾಖಲಿಸಲಾಗಿದೆ. ಇದಕ್ಕೆ ಕಾನೂನಿನ ಮೂಲಕವೇ ಉತ್ತರ ನೀಡುತ್ತೇನೆ ಎಂದು ಗುಡುಗಿದರು.

ಹಿಂದೆ ನನ್ನ ವಿರುದ್ಧ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ 50 ದೂರುಗಳನ್ನು ದಾಖಲಿಸಿದ್ದರು. ನನ್ನನ್ನು ಬಳ್ಳಾರಿ ಹಾಗೂ ಬೆಳಗಾವಿ ಜೈಲಿಗೆ ಹಾಕಲಾಗಿತ್ತು. ಹೋರಾಟದ ಮೂಲಕವೇ ಉತ್ತರ ನೀಡಿದ್ದೇನೆ. ಶಾಸಕರಾಗಿರುವ ನಾನು ಇದಕ್ಕೆಲ್ಲ ಜಗ್ಗುವುದಿಲ್ಲ. ಎಸ್.ಆರ್.ಶ್ರೀನಿವಾಸ್ ಎಷ್ಟು ದಿನ ಸಚಿವರಾಗಿರುತ್ತಾರೆ ಎಂದು ಸವಾಲು ಹಾಕಿದರು.

ಇತ್ತೀಚೆಗೆ ಮುಖ್ಯಮಂತ್ರಿಯವರು ದಾವಣಗೆರೆಗೆ ಬಂದಾಗ ಹೊನ್ನಾಳಿಯಲ್ಲಿ ಉಂಟಾಗಿರುವ ಮರಳಿನ ಸಮಸ್ಯೆ ಬಗ್ಗೆ ವಿವರಿಸಿದ್ದೆ. ಅಧಿಕಾರಿಗಳಿಗೆ ಪರಿಹರಿಸುವಂತೆ ಸಿಎಂ ಸೂಚನೆ ಕೊಟ್ಟರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸುಮಾರು 12 ಬ್ಲಾಕ್‍ಗಳಲ್ಲಿ ಮರಳು ಲಭ್ಯವಿದೆ. ಪ್ರತಿಯೊಂದು ಬ್ಲಾಕ್‍ನಲ್ಲಿ 3ರಿಂದ 4 ಸಾವಿರ ಲೋಡ್ ಮರಳು ಸಿಗುತ್ತದೆ. ಈ ಭಾಗದಿಂದ ಬೇರೆ ಬೇರೆ ಭಾಗಗಳಿಗೆ ಅಕ್ರಮವಾಗಿ ಮರಳು ಹೋಗುತ್ತಿದ್ದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ದೂರಿದರು.

ಸೋಮವಾರದಿಂದ ಮತ್ತೆ ರೈತರ ಜತೆಗೂಡಿ ಮರಳು ಸಿಗುವವರೆಗೂ ಹೋರಾಟ ಮಾಡುತ್ತೇನೆ. ನನ್ನನ್ನು ಬಂಧಿಸಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಎಷ್ಟು ದೂರು ದಾಖಲಿಸುತ್ತಾರೋ ದಾಖಲಿಸಲಿ. ಎಲ್ಲವನ್ನೂ ಎದುರಿಸಲು ಸಿದ್ದ ಎಂದು ರೇಣುಕಾಚಾರ್ಯ ಹೇಳಿದರು.

Facebook Comments

Sri Raghav

Admin