ಹುಷಾರ್, ನಿಮಗರಿವಿಲ್ಲದೆ ನಿಮ್ಮನ್ನು ಹಾಳು ಮಾಡುತ್ತಿವೆ ಸೋಷಿಯಲ್ ಮೀಡಿಯಾಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Social Mediaವಿಶ್ವ ಆರೋಗ್ಯ ಸಂಘಟನೆ ವರದಿ ಪ್ರಕಾರ ವಿಶ್ವದಲ್ಲಿ ಸುಮಾರು 300 ಮಿಲಿಯನ್ ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಮನುಷ್ಯನ ಅಶಕ್ತತೆಗೆ ಖಿನ್ನತೆ ಪ್ರಮುಖ ಕಾರಣವಾಗಿದೆ ಎಂದು ವರದಿ ಹೇಳುತ್ತದೆ. ಇದಕ್ಕೆ ಬಹುಮುಖ್ಯ ಕಾರಣ ಸೋಷಿಯಲ್ ಮೀಡಿಯಾ ಎನ್ನುತ್ತದೆ ವಿಶ್ವ ಆರೋಗ್ಯ ಸಂಘಟನೆ ವರದಿ.  ಫೇಸ್ ಟು ಫೇಸ್ ಮಾತಾಡೋರಿಗಿಂತ ಫೇಸ್ಬುಕ್ಕಲ್ಲಿ ಮಾತಾಡೋರೆ ಹೆಚ್ಚಾಗಿದ್ದಾರೆ. ಸತ್ತಾಗ ನಾಲ್ಕು ಮಂದಿ ಹೆಣ ಹೊರೋಕೆ ಬರೋದಕ್ಕಿಂತ, RIP ಹೇಳಿ ಕರ್ತವ್ಯ ಮುಗಿಸಿಬಿಡೋರೇ ಜಾಸ್ತಿ.

ಏನಾದ್ರೂ ಪೋಸ್ಟ್ ಹಾಕಿದಾಗ ನಾಲ್ಕು ಕಮೆಂಟ್ ಬಂದ್ರೆ ಸಾಕಪ್ಪಾ ಅನ್ನೋ ರೇಂಜಿಗೆ ಈ ವರ್ಗ ಶಿಫ್ಟ್ ಆಗ್ತಿದೆ. ಒಂದೇ ಮನೆಯಲ್ಲಿ ಇರೋರಿಗಿಂತ, ಫ್ರೆಂಡ್ಸ್ ಲಿಸ್ಟ್ ಅಲ್ಲಿ ಇರೋರಿಗೇ ಹೆಚ್ಚಿನ ಮಹತ್ವ ನೀಡಲಾಗ್ತಿದೆ. ಎಲ್ಲಿದ್ದೀವಿ? ಏನು ಮಾಡ್ತಾ ಇದ್ದೀವಿ? ಇವತ್ತು ಯಾವರೀತಿ ಫೀಲಿಂಗ್ ಇದೆ? ಫೀಲಿಂಗ್ ಹ್ಯಾಪಿನಾ, ಫೀಲಿಂಗ್ ಸ್ಯಾಡಾ? ಗರ್ಲ್ ಫ್ರೆಂಡ್ ಕೈ ಕೊಟ್ಲಾ? ಬಾಯ್ಫ್ರೆಂಡ್ ಬಿಟ್ಟೋದ್ನಾ? ಫ್ರೆಂಡ್ಸ್ ಮೊಸ ಮಾಡಿದ್ರಾ? ಅಪ್ಪ-ಅಮ್ಮ ಬೈದ್ರಾ? ಹೀಗೆ ಪ್ರತಿಯೊಂದನ್ನೂ ಮನೆಯವರಿಗಿಂತ ಫೇಸ್ಬುಕ್ಕಿನವರೇ ಹೆಚ್ಚಿಗೆ ತಿಳಿಯುವಂಥ ಪರಿಸ್ಥಿತಿಯನ್ನ ನಿರ್ಮಿಸಿಕೊಂಡಿದ್ದೀವಿ. ಇದು ಇಷ್ಟಕ್ಕೆ ನಿಲ್ತಿಲ್ಲ, ನಾವೆಲ್ಲ ಈ ಸೋಷಿಯಲ್ ಮೀಡಿಯಾ ಗೀಳಿಗೆ ಎಷ್ಟು ಅಂಟಿಕೊಂಡಿದ್ದೀವಿ ಅಂದ್ರೆ, ನಮ್ಮನ್ನು ಅಕ್ಷರಶಃ ಅದು ಆಳ್ತಾ ಇದೆ. ನಮ್ಮ ಮನಸ್ಥಿತಿ, ನಮ್ಮ ಇಷ್ಟ, ನಮ್ಮ ಹವ್ಯಾಸ ಹೀಗೆ ಪ್ರತಿಯೊಂದರಲ್ಲೂ ಈ ಸೋಷಿಯಲ್ ಮೀಡಿಯಾಗಳು ತಮ್ಮ ಪ್ರಭಾವವನ್ನು ಬೀರುತ್ತಿದೆ. ಅದಿಷ್ಟೇ ಅಲ್ಲ, ಅವು ನಮ್ಮ ಮಾನಸಿಕ ಸ್ಥಿತಿಗತಿ ಮೇಲೂ ನೇರ ಪರಿಣಾಮ ಬೀರುತ್ತಿವೆ ಅಂತಾ ಇತ್ತೀಚೆಗಿನ ಸಂಶೋಧನೆಗಳು ತಿಳಿಸಿವೆ. ಹಾಗಿದ್ದರೆ, ಮನುಷ್ಯನ ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಜಾಲತಾಣಗಳು ಬೀರುವ ಪ್ರಭಾವ ಎಂಥದ್ದು? ಇಲ್ಲಿದೆ ಡಿಟೇಲ್ಸ್..!

ನೀವು ಮನೆಯಲ್ಲಿ ಒಬ್ಬರೇ ಕುಳಿತು ಏಕತಾನತೆಯನ್ನು ಅನುಭವಿಸುತ್ತಿರುವಾಗ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ನಿಮ್ಮ ಸ್ನೇಹಿತರು ಹೊರಗಡೆ ಎಂಜಾಯ್ ಮಾಡುತ್ತಿರುವುದು ನೋಡಿದರೆ ನಿಮ್ಮಲ್ಲಿ ಋಣಾತ್ಮಕ ಭಾವ ಮೂಡಬಹುದು. ಇದು ನಿಧಾನವಾಗಿ ಖಿನ್ನತೆಗೆ ದಾರಿ ಮಾಡಿ ಕೊಡುತ್ತದೆ ಎಂದು ಅಮೆರಿಕಾದ ಮಾನಸಿಕ ಆರೋಗ್ಯ ರಾಷ್ಟ್ರೀಯ ಸಂಸ್ಥೆ ಹೇಳುತ್ತದೆ. ಅದು ನಡೆಸಿರುವ ಅಧ್ಯಯನ ಪ್ರಕಾರ ಸೋಷಿಯಲ್ ಮೀಡಿಯಾ ಮತ್ತು ಖಿನ್ನತೆ ಮಧ್ಯೆ ಬಹಳ ಹತ್ತಿರದ ಸಂಬಂಧವಿದೆ ಎಂದು ಹೇಳುತ್ತದೆ.

ಯುವಜನತೆ ಪ್ರತಿದಿನ ಸೋಷಿಯಲ್ ಮೀಡಿಯಾವನ್ನು ಬಳಸುವ ಮಟ್ಟ ಮತ್ತು ಪ್ರತಿ ವಾರ ಬಳಸುವ ಅವಧಿಗೆ ಅನುಗುಣವಾಗಿ ಖಿನ್ನತೆ ಮಟ್ಟ ಹೆಚ್ಚಾಗುತ್ತಾ ಹೋಗುತ್ತದೆ. ಇನ್ನು ಈಗಾಗಲೇ ಖಿನ್ನತೆಯಿಂದ ಬಳಲುತ್ತಿರುವವರು ವ್ಯಕ್ತಿಗಳ ಜೊತೆ ಸಂವಹನ ನಡೆಸುವ ಬದಲು ಸಾಮಾಜಿಕ ಮಾಧ್ಯಮಗಳಲ್ಲಿಯೇ ದಿನದ ಬಹುತೇಕ ಸಮಯ ಮುಳುಗಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಏನಾದರೊಂದು ಸ್ಟೇಟಸ್ ಹಾಕಿದರೆ ಅದಕ್ಕೆ ಲೈಕ್ಸ್, ಕಮೆಂಟ್ ಗಳು ಹೆಚ್ಚಾಗಿ ಬರುತ್ತದೆ ಎಂದು ಖುಷಿಪಡುವವರು ಕೂಡ ಇರುತ್ತಾರೆ.

ಇನ್ನು ಕೆಲವರು ಖಿನ್ನತೆ ಮತ್ತು ಸಾಮಾಜಿಕ ಕಾತರತೆಯಿಂದ ಬಳಲುತ್ತಿರುವವರಿಗೆ ಸೋಷಿಯಲ್ ಮೀಡಿಯಾ ಸಹಾಯ ಮಾಡುವ ಉದಾಹರಣೆಗಳು ಕೂಡ ಇವೆ, ಅದು ವ್ಯಕ್ತಿ ಸೋಷಿಯಲ್ ಮೀಡಿಯಾವನ್ನು ಹೇಗೆ ಬಳಸುತ್ತಾನೆ ಎಂಬುದನ್ನು ಆಧರಿಸಿಕೊಂಡು ಇರುತ್ತದೆ. ಸೋಷಿಯಲ್ ಮೀಡಿಯಾಗಳಲ್ಲಿ ಸಂತಸದ ಕ್ಷಣಗಳನ್ನು ಮತ್ತು ವಿಚಾರಗಳನ್ನು ಹಂಚಿಕೊಂಡವರ ಜೀವನವೆಲ್ಲವೂ ಖುಷಿಯಾಗಿರುತ್ತದೆ ಎಂದು ಅರ್ಥವಲ್ಲ ಎನ್ನುತ್ತಾರೆ ಮನಃಶಾಸ್ತ್ರಜ್ಞರು. ಹೀಗಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಸುವವರು ದ್ವೇಷ, ಅಸೂಯೆ, ಅಸಮರ್ಪಕತೆ, ಖಿನ್ನತೆ ಮತ್ತು ಸಾಮಾಜಿಕ ಹೋಲಿಕೆಗಳನ್ನು ಸಮಾನವಾಗಿ ಬಳಸುವುದನ್ನು ಕಲಿಯಬೇಕು.
-ಎಸ್ ಕೆ ಎಸ್

Facebook Comments