ಕೋಮಾದಲ್ಲಿ ಬಿಬಿಎಂಪಿ ಸದಸ್ಯ ಏಳುಮಲೈ : ಕಾರಣ ಹುಡುಕಲು ತನಿಖೆಗೆ ಮೇಯರ್ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

Elumalai
ಬೆಂಗಳೂರು, ನ.29- ಮೂಗಿನಲ್ಲಿ ಎದ್ದಿದ್ದ ಸಣ್ಣ ಗುಳ್ಳೆಯ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿ ಪಕ್ಷೇತರ ಸದಸ್ಯ ಏಳುಮಲೈ ಅವರು ಕೋಮಾಸ್ಥಿತಿ ತಲುಪಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ, ಇಡೀ ಪ್ರಕರಣವನ್ನು ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲು ತೀರ್ಮಾನಿಸಿದೆ.

ಪಾಲಿಕೆ ಸಭೆಯಲ್ಲಿಂದು ಮಾತನಾಡಿದ ಮೇಯರ್ ಗಂಗಾಂಬಿಕೆ, ಏಳುಮಲೈ ಅವರಿಗೆ ಚಿಕಿತ್ಸೆ ನೀಡಿದ ಫ್ರೇಜರ್‍ಟೌನ್‍ನ ಸಂತೋಷ್ ಆಸ್ಪತ್ರೆ ಬಗ್ಗೆ ತಕ್ಷಣ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಆದೇಶಿಸಿದರು. ಕಾರ್ಪೋರ್ಟರ್ ರೊಬ್ಬರು ಕೋಮಾಗೆ ತಲುಪಿದ್ದು, ಇಡೀ ಪ್ರಕರಣದ ಪೂರ್ಣ ತನಿಖೆ ನಡೆಸಲಾಗುವುದು ಎಂದು ಹೇಳಿದರು.ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ವಿಷಯ ಪ್ರಸ್ತಾಪಿಸಿ, ಸಗಾಯಿಪುರಂ ಸದಸ್ಯ ಏಳುಮಲೈ ಅವರು ಫ್ರೇಜರ್‍ಟೌನ್‍ನ ಸಂತೋಷ್ ಆಸ್ಪತ್ರೆಗೆ ಮೂಗಿನಲ್ಲಿನ ಸಣ್ಣ ಗುಳ್ಳೆ ತೋರಿಸಿಕೊಳ್ಳಲು ಹೋಗಿದ್ದರು.

ಅರ್ಧಗಂಟೆಯಲ್ಲಿ ಶಸ್ತ್ರಚಿಕಿತ್ಸೆ ಮಾಡುತ್ತೇವೆ ಎಂದು ದಾಖಲು ಮಾಡಿಕೊಂಡರು. ಸಂಜೆಯಾದರೂ ಮನೆಯವರಿಗೆ ಸುದ್ದಿ ತಿಳಿಸಲೇಇಲ್ಲ. ಸಂಜೆ ಬಂದ ವೈದ್ಯರೊಬ್ಬರು ಏಳುಮಲೈ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದೆ ಅವರನ್ನು ಕೂಡಲೇ ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸಣ್ಣ ಗುಳ್ಳೆಗಾಗಿ ಅಡ್ಮಿಟ್ ಆಗಿ ಕೋಮಾಗೆ ಹೋಗಿ 20 ದಿನಗಳಾಗಿವೆ. ಇದನ್ನು ನೋಡಿದರೆ ಸಂತೋಷ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ. ಹಾಗಾಗಿ ಆಸ್ಪತ್ರೆ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಜೆಡಿಎಸ್ ಗುಂಪಿನ ನಾಯಕಿ ನೇತ್ರಾನಾರಾಯಣ್ ದನಿಗೂಡಿಸಿ, ತನಿಖೆ ನಡೆಸಲು ಬೆಂಬಲ ವ್ಯಕ್ತಪಡಿಸಿದರು. ಮಾಜಿ ಮೇಯರ್ ಮಂಜುನಾಥ್‍ರೆಡ್ಡಿ ಮಾತನಾಡಿ, ನಗರದ ಕÉಲವು ಆಸ್ಪತ್ರೆಗಳಲ್ಲಿ ಆ ಪರೀಕ್ಷೆ, ಈ ಪರೀಕ್ಷೆ ಎಂದು ಹೇಳಿ ಅಡ್ಮಿಟ್ ಮಾಡಿಕೊಳ್ಳುತ್ತಾರೆ. ಕೆಲವು ಆಸ್ಪತ್ರೆಗಳಂತೂ ಡೆತ್ ಸೆಂಟರ್ ಆಗಿ ಪರಿವರ್ತನೆಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಯಾವ್ಯಾವ ಆಸ್ಪತ್ರೆಯಲ್ಲಿ ಎಷ್ಟೆಷ್ಟು ಸಾವು ಸಂಭವಿಸಿದೆ ಎಂಬ ವರದಿ ತರಿಸಿಕೊಳ್ಳಿ. ಕರ್ತವ್ಯ ಮರೆತ ಆಸ್ಪತ್ರೆಗಳನ್ನು ಬಂದ್ ಮಾಡಿಸಿ ಎಂದು ಅವರು ಒತ್ತಾಯಿಸಿದರು. ಸಂತೋಷ್ ಆಸ್ಪತ್ರೆ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ. ಏಳುಮಲೈ ರೀತಿ ಕೆಲವು ಪ್ರಕರಣಗಳು ಅಲ್ಲಿ ಸಂಭವಿಸಿವೆ. ಪೊಲೀಸರ ರಕ್ಷಣೆ ಪಡೆದು ಆಸ್ಪತ್ರೆ ನಡೆಯುತ್ತಿದೆ. ಈ ಆಸ್ಪತ್ರೆ ಬಗ್ಗೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಿ ಎಂದು ಸದಸ್ಯರು ಒಕ್ಕೊರಲಿನ ಮನವಿ ಮಾಡಿದರು.  ಈ ವೇಳೆ ವಿಶೇಷ ಆಯುಕ್ತ ರಂದೀಪ್ ಪ್ರತಿಕ್ರಿಯಿಸಿ, ಬಿಬಿಎಂಪಿ ಆರೋಗ್ಯಾಧಿಕಾರಿಗಳು ಸಂತೋಷ್ ಆಸ್ಪತ್ರೆ ಬಗ್ಗೆ ವರದಿ ತಂದು ಮೇಯರ್‍ಗೆ ಕೊಡಬೇಕು. ಆಸ್ಪತ್ರೆಯನ್ನು ಮುಚ್ಚಿಸಲು ಪಾಲಿಕೆಗೆ ಅಧಿಕಾರವಿಲ್ಲ. ಸರ್ಕಾರದ ಆರೋಗ್ಯ ಇಲಾಖೆ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಮೇಯರ್ ಗಂಗಾಂಬಿಕೆ ಮಾತನಾಡಿ, ವೈದ್ಯೋ ನಾರಾಯಣ ಹರಿಃ ಎನ್ನುತ್ತಾರೆ ಆದರೆ ನಗರದ ಕೆಲವು ಆಸ್ಪತ್ರೆಗಳು ಬೇಜಬ್ದಾರಿ ಧೋರಣೆ ಅನುಸರಿಸುತ್ತಿವೆ. ಇದು ಸರಿಯಲ್ಲ. ಒಬ್ಬ ಕಾರ್ಪೊರೇಟರ್  ಗೆ ಈ ಗತಿಯಾದರೆ ಸಾಮಾನ್ಯ ಜನರ ಪಾಡೇನು? ಇದೆಲ್ಲ ನೋಡಿ ಜನರಲ್ಲಿ ಆತಂಕ ಮೂಡುತ್ತದೆ ಎಂದು ಹೇಳಿದರು.
ಕೂಡಲೇ ಸಂತೋಷ್ ಬಗ್ಗೆ ವರದಿ ತರಿಸಿಕೊಂಡು ತನಿಖೆ ನಡೆಸುವುದಾಗಿ ಘೋಷಿಸಿದರು.

Facebook Comments

Sri Raghav

Admin