ಕೇಂದ್ರದಿಂದ ಚಿಕ್ಕಮಗಳೂರು ಜಿಲ್ಲೆಗೆ 1371ಕೋಟಿ ಅನುದಾನ : ಶೋಭಾ

ಈ ಸುದ್ದಿಯನ್ನು ಶೇರ್ ಮಾಡಿ

shobha karandlajeಚಿಕ್ಕಮಗಳೂರು, ನ.29-ನಾಲ್ಕೂವರೆ ವರ್ಷದಲ್ಲಿ ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಒಟ್ಟು 1371 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಸಂಸದೆ ಶೋಭಾಕರಂದ್ಲಾಜೆ ತಿಳಿಸಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಆರ್‍ಎಫ್ ನಿಧಿಯಡಿ 314 ಕೋಟಿ ಅನುದಾನ ಒದಗಿಸಲಾಗಿದೆ. 2017-18ನೇ ಸಾಲಿನ ಕಾಮಗಾರಿ ಪ್ರಗತಿಯಲ್ಲಿದೆ.

ಪಿಎಂಜಿಎಸ್‍ವಿ ಅಡಿ 36 ಕೋಟಿ ಒದಗಿಸಲಾಗಿದೆ. ದೀನ್‍ದಯಾಳ್ ಉಪಾಧ್ಯಾಯ್ ವಿದ್ಯುದೀಕರಣ ಯೋಜನೆಗಳ 146 ಕೋಟಿ, ನಗರ ವಿದ್ಯುದೀಕರಣ ಯೋಜನೆಗೆ 2.59 ಕೋಟಿ, ಉದ್ಯೋಗ ಖಾತ್ರಿಗೆ 156 ಕೋಟಿ, ಶಿಕ್ಛ್ಷಣ ಇಲಾಖೆಯ ಹೊಸ ಕಟ್ಟಡಕ್ಕೆ 45 ಕೋಟಿ, ಅಮೃತ ಯೋಜನೆಗೆ 136 ಕೋಟಿ, ಸ್ವಚ್ಛ ಭಾರತ್ ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕೆ 64 ಕೋಟಿ ಅಂಚೆ ಕಚೇರಿ ಕಟ್ಟಡ ನಿರ್ಮಾಣಕ್ಕೆ 2.86 ಕೋಟಿ ಒದಗಿಸಲಾಗಿದೆ ಎಂದು ತಿಳಿಸಿದರು.

ಸಣ್ಣ ಕಾಫಿ ಬೆಳೆಗಾರರಿಗೆ ಸಬ್ಸಿಡಿ ರೂಪದಲ್ಲಿ ಈ ಸಾಲಿನ ಕೊನೆಯ ಕಂತು 20 ಕೋಟಿ ಬಿಡುಗಡೆಯಾಗಿದೆ. ಮುಂದಿನ ತ್ರೈಮಾಸಿಕದಲ್ಲಿ ದೊಡ್ಡ ಬೆಳೆಗಾರರಿಗೆ ಸಬ್ಸಿಡಿ ನೀಡುವುದಾಗಿ ಹಣಕಾಸು ಇಲಾಖೆ ತಿಳಿಸಿದೆ ಎಂದರು.ಹಾಸನ, ಚಿಕ್ಕಮಗಳೂರು, ಕೊಡಗು ಅತಿವೃಷ್ಠಿಯಿಂದಾಗಿ ಶೇ.36ರಷ್ಟು ಕಾಫಿ ಬೆಳೆ ನಾಶವಾಗಿದೆ. ಕಾಫಿ ಮಂಡಳಿ ವರದಿ ನೀಡಿದ್ದು, ವರದಿ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಿ ನ್ಯಾಯ ಒದಗಿಸಲಾಗುವುದು ಎಂದರು. ಜಿಲ್ಲೆಯಲ್ಲಿ ಕಾಳು ಮೆಣಸು ಪಾರ್ಕ್ ನಿರ್ಮಿಸಬೇಕೆಂಬ ಬೇಡಿಕೆ ಇದೆ. ಪಾರ್ಕ್ ಸ್ಥಾಪನೆಗೆ ಜಾಗ ಒದಗಿಸುವುದಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಈ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದರೆ ಪಾರ್ಕ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಹೇಳಿದರು.

ಕಸ್ತೂರಿ ರಂಗನ್ ವರದಿ ಬಗ್ಗೆ ಸುಪ್ರೀಂಕೋರ್ಟ್‍ನಲ್ಲಿದ್ದು ಕೇಂದ್ರ ಸರ್ಕಾರ ಈ ಬಗ್ಗೆ ನಿಗಾ ಇಟ್ಟಿದೆ. ಕಸ್ತೂರಿ ರಂಗನ್ ವರದಿ ಆಧರಿಸಿ ಕೇರಳ ರಾಜ್ಯ ಕೆಲವು ವಿನಾಯಿತಿಯನ್ನು ಪಡೆದುಕೊಂಡಿದೆ. ಅದನ್ನು ಆಧರಿಸಿ ಇತರೆ ರಾಜ್ಯಗಳಿಗೆ ವಿನಾಯಿತಿ ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಮುಖಂಡರಾದ ಎಚ್.ಡಿ.ತಮ್ಮಯ್ಯ, ಸೋಮಶೇಖರಪ್ಪ, ಕೋಟೆ ರಂಗನಾಥ್, ವರಸಿದ್ಧಿ ವೇಣುಗೋಪಾಲ ಉಪಸ್ಥಿತರಿದ್ದರು.

Facebook Comments