ಜಕಣಾಚಾರಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಬೇಕು : ನಂಜುಂಡಿ

ಈ ಸುದ್ದಿಯನ್ನು ಶೇರ್ ಮಾಡಿ

Nanjundiಕೆ.ಆರ್.ಪೇಟೆ,ಡಿ.06- ರಾಜ್ಯ ಸರ್ಕಾರ ಜನವರಿ 1ರಂದು ಅಮರಶಿಲ್ಪಿ ಜಕಣಾಚಾರಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಅಚರಣೆ ಮಾಡುವ ಮೂಲಕ ವಿಶ್ವಕರ್ಮ ಜನಾಂಗದವರ ಆಶಯ ಈಡೇರಿಸಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಒತ್ತಾಯಿಸಿದರು. ಪಟ್ಟಣದ ವಿಶ್ವಕರ್ಮ ವಿವಿಧೋದ್ಧೇಶ ಕೈಗಾರಿಕಾ ಸಹಕಾರ ಸಂಘದ ಆವರಣದಲ್ಲಿ ನಡೆದ ತಾಲೂಕು ಮಟ್ಟದ ವಿಶ್ವಕರ್ಮ ಜಯಂತ್ಯುತ್ಸವದಲ್ಲಿ ಪಂಚಲೋಹದ ವಿಶ್ವಕರ್ಮ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ವಿಶ್ವವಿಖ್ಯಾತ ಶಿಲ್ಪಕಲೆ ಹೊಂದಿರುವ ಬೇಲೂರು-ಹಳೇಬೀಡು ದೇವಾಲಯಗಳನ್ನು ಕೆತ್ತಿರುವ ಅಮರಶಿಲ್ಪಿ ಜಕಣಾಚಾರಿ ಅವರ ಪ್ರತಿಮೆ ನಿರ್ಮಿಸಲು ಬೇಲೂರು ಚನ್ನಕೇಶವ ದೇವಾಲಯದ ಆವರಣದಲ್ಲಿ ಸ್ಥಳಾವಕಾಶ ಮಾಡಿಕೊಡಬೇಕು ಹಾಗೂ ರಾಜ್ಯದ ವಿಶ್ವವಿದ್ಯಾನಿಲಯವೊಂದಕ್ಕೆ ಜಕಣಾಚಾರಿ ಹೆಸರನ್ನು ಇಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ವಿಶ್ವಕರ್ಮ ಜನಾಂಗದವರ ಸಂಘಟನೆಯಲ್ಲಿ ರಾಜಕಾರಣ ಮಾಡದೇ ಭಿನ್ನಮತ ಬದಿಗಿಟ್ಟು ಸಮಾಜದ ಮುನ್ನಡೆ ಹಾಗೂ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ವಿಶ್ವಕರ್ಮ ಕರಕುಶಲ ಕಟ್ಟಡದ ನಿರ್ಮಾಣಕ್ಕೆ 4ಲಕ್ಷರೂ ಅನುಧಾನವನ್ನು ನೀಡುವುದಾಗಿ ಘೋಷಿಸಿದರು.
ವಿಧಾನಪರಿಷತ್ ಸದಸ್ಯ ರಘು ಆಚಾರ್ ಮಾತನಾಡಿ ವಿಶ್ವಕರ್ಮ ಜನಾಂಗದ ಬಡಮಕ್ಕಳ ಶೈಕ್ಷಣಿಕ ವಿಕಾಸಕ್ಕೆ ತೊಂದರೆಯಿರುವವರಿಗೆ ಸಹಾಯ ಮಾಡುವುದಾಗಿ ಘೋಷಿಸಿದ ಅವರು, ನಾನೂ ಒಬ್ಬ ವಿಶ್ವಕರ್ಮ, ಮೊದಲು ಕುಲ, ನಂತರ ರಾಜ್ಯ, ದೇಶ ಎಂದು ರಘು ಆಚಾರ್ ಅಭಿಮಾನದಿಂದ ಹೇಳಿದರು.

ತಮ್ಮ ಸಂವಿಧಾನ ಬದ್ಧ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕು. ರಾಜಕೀಯ ಪ್ರಜ್ಞಾ ಬೆಳೆಸಿಕೊಂಡು ರಾಜಕೀಯ ಸ್ಥಾನಮಾನ ಪಯಬೇಕು. ರಾಜ್ಯದಲ್ಲಿ 45ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ವಿಶ್ವಕರ್ಮ ಜನಾಂಗ ತಮ್ಮ ಶಕ್ತಿಪ್ರದರ್ಶನ ಮಾಡಬೇಕು. ಸಾಧನೆ ಮಾಡಲು ಛಲವನ್ನು ಬೆಳೆಸಿಕೊಳ್ಳಬೇಕು. ನಮ್ಮ ಪರಿಶ್ರಮ ಹಾಗೂ ಆತ್ಮವಿಶ್ವಾಸದ ಮೇಲೆ ನಂಬಿಕೆಯಿಟ್ಟು ಶ್ರದ್ಧೆಯಿಂದ ದುಡಿಮೆ ಮಾಡಬೇಕು ಎಂದು ರಘು ಅಚಾರ್ ಮನವಿ ಮಾಡಿದರು,
ಶಾಸಕ ಡಾ.ಕೆ.ಸಿ.ನಾರಾಯಣಗೌಡ ಮಾತನಾಡಿ ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ 10ಲಕ್ಷ ರೂಗಳ ಅನುದಾನ ನೀಡುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಸಮಾಜದ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅರೇಮಾದನಹಳ್ಳಿಯ ವಿಶ್ವ ಬ್ರಾಹ್ಮಣ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಶಿವ ಸುಜ್ಞಾನತೀರ್ಥ ಸ್ವಾಮಿಜಿ ವಹಿಸಿದ್ದರು. ಜಿಪಂ ಉಪಾಧ್ಯಕ್ಷೆ ಗಾಯತ್ರಿರೇವಣ್ಣ, ತಾಪಂ ಅಧ್ಯಕ್ಷೆ ಜಯಲಕ್ಷ್ಮೀ ಸ್ವಾಮಿನಾಯಕ್, ತಾಪಂ ಉಪಾಧ್ಯಕ್ಷ ಜಾನಕೀರಾಂ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು, ಜಿಪಂ ಸದಸ್ಯರಾದ ಬಿ.ಎಲ್.ದೇವರಾಜು, ರಾಮದಾಸ್, ತಾಲೂಕು ಬಿಜೆಪಿ ಅಧ್ಯಕ್ಷ ಬಿ.ಸಿ.ಮಂಜು ಭಾಗವಹಿಸಿದ್ದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )