ಸಿದ್ದರಾಮಯ್ಯ ಮೇಲೆ 35,000 ಕೋಟಿ ಭ್ರಷ್ಟಾಚಾರದ ಬಾಂಬ್ ಹಾಕಿದ ಬಿಜೆಪಿ…!

ಈ ಸುದ್ದಿಯನ್ನು ಶೇರ್ ಮಾಡಿ

Siddaramaaaa

ಬೆಂಗಳೂರು,ಡಿ.6-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2016-17ನೇ ಸಾಲಿನಲ್ಲಿ ಮಂಡಿಸಿದ್ದ ಬಜೆಟ್‍ನಲ್ಲಿ ವಿವಿಧ ಇಲಾಖೆಗಳು 35 ಸಾವಿರ ಕೋಟಿ ಭ್ರಷ್ಟಾಚಾರ ನಡೆಸಿರುವುದು ಮಹಾಲೇಖಪಾಲಕರ ವರದಿ ಯಲ್ಲಿ ಸಾಬೀತು ಆಗಿರುವುದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಬಿಜೆಪಿ ಒತ್ತಾಯಿಸಿದೆ.  ನಮ್ಮದು ಪಾರದರ್ಶಕ ಸರ್ಕಾರ, ನನ್ನ ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಕುಮಾರಸ್ವಾಮಿಯವರು ಹೇಳುತ್ತಿದ್ದಾರೆ. ಹಿಂದಿನ ಅವಧಿಯಲ್ಲಿ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಿಎಜಿ ವರದಿಯಲ್ಲಿ ಸಾಬೀತಾಗಿದೆ. ಈ ಕಾರಣ ಸಿದ್ದರಾಮಯ್ಯ ಹಾಗೂ ಹಿಂದಿನ ಸಚಿವರ ಮೇಲೆ ನೀವು ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು ವಿಧಾನಪರಿಷತ್ ಸದಸ್ಯ ರವಿಕುಮಾರ್ ಪ್ರಶ್ನಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸೋಮವಾರದಿಂದ ಬೆಳಗಾವಿಯಲ್ಲಿ ಆರಂಭವಾಗಲಿರುವ ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆÀಸಲು ಮತ್ತೊಮ್ಮೆ ಅವಕಾಶ ನೀಡಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳದಿದ್ದರೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಹೋರಾಟ ನಡಸುವುದಾಗಿ ಎಚ್ಚರಿಸಿದರು.  2016-17ನೇ ಸಾಲಿನಲ್ಲಿ ರಾಜ್ಯದಲ್ಲಿರುವ 778 ಕೆರೆಗಳಿಗೆ ನೀರು ತುಂಬಿಸಲು 143341 ಕೋಟಿ ಹಣವನ್ನು ಬಿಡುಗಡೆ ಮಾಡಲಾಯಿತ್ತು. ಆದರೆ ಒಂದೇ ಒಂದು ಕೆರೆಗೂ ಕೂಡ ನೀರು ತುಂಬಿಸಿಲ್ಲ. ಇಷ್ಟು ದೊಡ್ಡ ಮಟ್ಟದ ಹಣ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದರು.

ಹಿಂದೆ ಕೇಂದ್ರದ ಯುಪಿಎ ಸರ್ಕಾರದ ಅವಧಿಯಲ್ಲಿ 2ಜಿ ಸ್ಪೆಕ್ಟ್ರಂ, ಆದರ್ಶ ಸೊಸೈಟಿ, ಕಲ್ಲಿದ್ದಲು ಸೇರಿದಂತೆ ಹಲವು ಹಗರಣಗಳು ಸಿಎಜಿ ವರದಿಯಿಂದಲೇ ಬಹಿರಂಗಗೊಂಡಿತ್ತು. ಈ ವರದಿಯನ್ನು ಯಾವ ಕಾರಣಕ್ಕಾಗಿ ಮುಚ್ಚಿ ಹಾಕುವ ಯತ್ನ ಮಾಡುತ್ತಿದ್ದೀರಿ ಎಂದು ಆಕೋಶ ವ್ಯಕ್ತಪಡಿಸಿದರು.  1ರಿಂದ 10ನೇ ತರಗತಿಯ 47,45,846 ವಿದ್ಯಾರ್ಥಿಗಳಿಗೆ 52,73,028 ಸಮವಸ್ತ್ರವನ್ನು ಖರೀದಿ ಮಾಡಲಾಗಿದೆ. ಇದರಲ್ಲಿ 5,22,182 ಹೆಚ್ಚುವರಿ ವಿದ್ಯಾರ್ಥಿಗಳನ್ನು ತೋರಿಸಿದ್ದು, 1.27 ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಣ ಯಾರ ಜೇಬು ತುಂಬಿದೆ ಎಂದು ಟೀಕಿಸಿದರು.
ಪರಿಶಿಷ್ಟ ಜಾತಿ, ವರ್ಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‍ಟಾಪ್ ಖರೀದಿ ಮಾಡಲು 115 ಕೋಟಿ 10 ಲಕ್ಷ ಹಣವನ್ನು ಬ್ಯಾಂಕ್ ಖಾತೆಯಲ್ಲಿ ಇಡಲಾಗಿತ್ತು.ಮೊದಲ ತ್ರೈಮಾಸಿಕದಲ್ಲೇ ಇದನ್ನು ಬಳಸಬೇಕೆಂದು ಆದೇಶಿಸಿದರು.

ಒಂದು ವರ್ಷವಾದರೂ ಬಳಕೆ ಮಾಡಿಲ್ಲ. ಯಾವ ಕಾರಣಕ್ಕಾಗಿ ಬ್ಯಾಂಕ್‍ನಲ್ಲಿ ಹಣ ಇಡಲಾಗಿತ್ತು. ಇದಕ್ಕೆ ಬಂದ ಬಡ್ಡಿ ಯಾರ ಕೈಗೆ ಹೋಗಿದೆ ಎಂದು ಸಂಶಯ ವ್ಯಕ್ತಪಡಿಸಿದರು.  ಪೊಲೀಸ್ ಇಲಾಖೆಯ ಸುಧಾರಣೆ ಹಾಗೂ ಆಧುನಿಕ ಶಸ್ತ್ರಾಸ್ತ್ರ ಸಲಕರಣಿಗಳ ಖರೀದಿ ಮಾಡುವ ಸದ್ದುದ್ದೇಶದಿಂದ ಕೇಂದ್ರ ಸರ್ಕಾರ ರಾಜ್ಯಕ್ಕೆ 290.98 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದು, ಅಂದಿನ ಸಿದ್ದರಾಮಯ್ಯ ಸರ್ಕಾರ 222.48 ಕೋಟಿ ಹಣವನ್ನು ಖರ್ಚು ಮಾಡಿದೆ.ಉಳಿದಿರುವ 68.8 ಕೋಟಿ ಏನಾಯಿತು ಎಂಬುದು ಗೊತ್ತಿಲ್ಲ ಎಂದರು.

ಇದೇ ರೀತಿ ಲೋಕೋಪಯೋಗಿ ಕಂದಾಯ, ನಗರಾಭಿವೃದ್ಧಿ, ವಸತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವುದನ್ನು ಸಿಎಜಿ ಉಲ್ಲೇಖ ಮಾಡಿದೆ ಎಂದರು.   ಶಾಸಕಾಂಗದ ಅನುಮತಿ ಇಲ್ಲದೆ ಹೊಸ ಕಾಮಗಾರಿ ನಡೆಸಲು 124 ಕೋಟಿ ರೂ. ಬಿಡುಗಡೆ ಮಾಡಿರುವುದು, ಕೆಐಎಡಿಬಿ ಮಂಗಳೂರು ಸಮೀಪ ಎನ್‍ಟಿಪಿಸಿ ಯೋಜನೆ ಪ್ರಾರಂಭಿಸಲು 1.82 ಕೋಟಿ ರೂ. ಮರು ಪಾವತಿಸದ ಕಾರಣ 7 ಕೋಟಿ ಚಕ್ರಬಡ್ಡಿಯೊಂದಿಗೆ 8.2 ಕೋಟಿ ಹಣ ನೀಡಿದೆ. ಇದು ಭ್ರಷ್ಟಾಚಾರವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.

2016-17ನೇ ಸಾಲಿನಲ್ಲಿ ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯನವರು ಒಟ್ಟು 1,86,052 ಕೋಟಿ ಬಜೆಟ್ ಮಂಡಿಸಿದ್ದರು. ಇದರಲ್ಲಿ ಸುಮಾರು 35 ಸಾವಿರ ಕೋಟಿಯಷ್ಟು ವೆಚ್ಚ ಮತ್ತು ಸ್ವೀಕೃತಿ ಹೊಂದಾಣಿಕೆಯಾಗುತ್ತಿಲ್ಲ. ಅಂದರೆ ಶೇ. 19ರಷ್ಟು ಹಣ ಎಲ್ಲಿಗೆ ಹೋಗಿದೆ ಎಂಬುದು ತಿಳಿಯುತ್ತಿಲ್ಲ. ಇದಕ್ಕೆ ಲೆಕ್ಕ ಕೊಡುವವರು ಯಾರು ಎಂದು ಪ್ರಶ್ನೆ ಮಾಡಿದರು.  ಜಲಸಂಪನ್ಮೂಲ ಇಲಾಖೆಯಲ್ಲಿ 375.55 ಕೋಟಿ, ಲೋಕೋಪಯೋಗಿ ಇಲಾಖೆಯಲ್ಲಿ 166.43 ಕೋಟಿ, ಶಿಕ್ಷಣ ಇಲಾಖೆಯಲ್ಲಿ 54, 35,000 ಹಾಗೂ ನಗರಾಭಿವೃದ್ಧಿ ಇಲಾಖೆಯಲಿ 249.08 ಕೋಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 31.73 ಕೋಟಿ ಭ್ರಷ್ಟಾಚಾರವಾಗಿದೆ. ಈ ಬಗ್ಗೆ ಚರ್ಚಿಸಲು ಬೆಳಗಾವಿ ಅಧಿವೇಶನದಲ್ಲಿ ಅವಕಾಶ ಕೊಡಬೇಕು ಎಂದರು.  ಸುದ್ದಿಗೋಷ್ಟಿಯಲ್ಲಿ ಶಾಸಕ ಅಶ್ವಥ್ ನಾರಾಯಣ್, ಎ.ಎಚ್.ಅನಂದ್ ಉಪಸ್ಥಿತರಿದ್ದರು.

Facebook Comments

Sri Raghav

Admin