ಚೇತೇಶ್ವರ ಪೂಜಾರ ಶತಕ, 250ರ ಗಡಿ ಮುಟ್ಟಿದ ಭಾರತ

ಈ ಸುದ್ದಿಯನ್ನು ಶೇರ್ ಮಾಡಿ

Cheteshwar Pujaraಅಡಿಲೇಡ್, ಡಿ.6- ಟೆಸ್ಟ್ ಸ್ಪೆಷಾಲಿಸ್ಟ್ ಬ್ಯಾಟ್ಸ್ ಮನ್ ಚೇತೇಶ್ವರ ಪೂಜಾರ ಅವರ ಆಕರ್ಷಕ ಶತಕ (123) ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 250ರ ಗಡಿ ಮುಟ್ಟಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಆರಂಭಿಕ ಆಟಗಾರರಾದ ಕೆ.ಎಲ್.ರಾಹುಲ್ (2), ಮುರಳಿ ವಿಜಯ್ (11) ಆಸ್ಟ್ರೇಲಿಯಾದ ವೇಗದ ಬೌಲರ್ ದಾಳಿಗೆ ನಲುಗಿ ತಂಡದ ಮೊತ್ತ 15 ರನ್‍ಗಳಾಗು ವಷ್ಟರಲ್ಲೇ ಪೆವಿಲಿಯನ್ ಸೇರಿಕೊಂಡು ಆಘಾತ ನೀಡಿದರು.

ಕನ್ನಡಿಗ ಕೆ.ಎಲ್.ರಾಹುಲ್ ಔಟಾಗುತ್ತಿದ್ದಂತೆ ಕ್ರೀಸ್‍ಗಿಳಿದ ನಾಯಕ ವಿರಾಟ್ ಕೊಹ್ಲಿ ಕೂಡ 3 ರನ್ ಗಳಿಸಿ ಪ್ಯಾಟ್ ಕುಮ್ಮಿಂಗ್ಸ್‍ಗೆ ವಿಕೆಟ್ ಒಪ್ಪಿಸಿ ದಾಗ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತ್ತು. ಉಪನಾಯಕ ಅಜೆಂಕಾರಹಾನೆ (13 ರನ್, 1 ಸಿಕ್ಸರ್) ದೊಡ್ಡ ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡಿದರಾದರೂ ಹೇಜಲ್‍ವುಡ್ ಬೌಲಿಂಗ್‍ನಲ್ಲಿ ಹ್ಯಾಂಡ್ಸ್‍ಕೋಮ್ ಹಿಡಿದ ಅದ್ಭುತ ಕ್ಯಾಚಿಗೆ ಔಟಾದರು.

ರೋಹಿತ್- ಪೂಜಾರ ಆಸರೆ:41 ರನ್‍ಗಳಿಗೆ ಪ್ರಮುಖ 4 ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ ರೋಹಿತ್‍ಶರ್ಮಾ ಹಾಗೂ ಚೇತೇಶ್ವರ ಪೂಜಾರ್ ಅವರ ತಾಳ್ಮೆಯುತ ಆಟದಿಂದ ಬೃಹತ್ ಮೊತ್ತದತ್ತ ದಾಪುಗಾಲಿಡುವ ಲಕ್ಷಣಗಳು ಗೋಚರಿಸಿದವು. ರೋಹಿತ್‍ಶರ್ಮಾ ಆಸೀಸ್ ಬೌಲರ್‍ಗಳ ಕೋಟೆಯನ್ನು ದಿಟ್ಟವಾಗಿ ಎದುರಿಸಿ 2 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‍ಗಳ ನೆರವಿನಿಂದ 37 ರನ್ ಗಳಿಸಿ ಅರ್ಧಶತಕ ಗಳಿಸುವ ಸೂಚನೆ ನೀಡಿದರಾದರೂ ಸ್ಪಿನ್ನರ್ ಲಿಯೋನ್ ಬೌಲಿಂಗ್‍ನಲ್ಲಿ ಔಟಾಗಿ ನಿರಾಸೆ ಮೂಡಿಸಿದರು.ನಂತರ ಬಂದ ಯುವ ವಿಕೆಟ್‍ಕೀಪರ್ ರಿಷಭ್‍ಪಂತ್(25 ರನ್, 2 ಬೌಂಡರಿ, 1 ಸಿಕ್ಸರ್), ರವಿಚಂದ್ರನ್ ಅಶ್ವಿನ್ (25 ರನ್, 1 ಬೌಂಡರಿ) ತುಸು ಹೋರಾಟ ನಡೆಸಿದರಾದರೂ ಲಿಯೋನ್ ಹಾಗೂ ಕುಮ್ಮಿನ್ಸ್ ಬೌಲಿಂಗ್‍ನಲ್ಲಿ ಔಟಾದರು.

ಚೇತೇಶ್ವರ ಪೂಜಾರ ಏಕಾಂಗಿ ಹೋರಾಟ:ಒಂದೆಡೆ ಭಾರತದ ಬ್ಯಾಟ್ಸ್‍ಮನ್‍ಗಳು ಓಟಾಗುತ್ತಿದ್ದರೆ ಕ್ರೀಸ್‍ನಲ್ಲಿ ಸವ್ಯಸಾಚಿಯಂತೆ ನಿಂತಿದ್ದ ಚೇತೇಶ್ವರಪೂಜಾರ ತಮ್ಮ ಅದ್ಭುತ ಇನ್ನಿಂಗ್ಶ್‍ನ ನೆರವಿನಿಂದ ಟೆಸ್ಟ್ ಜೀವನದಲ್ಲಿ ತಮ್ಮ 15ನೆ ಶತಕವನ್ನು ಸಿಡಿಸಿದರಲ್ಲದೆ ತಂಡವನ್ನು 250 ರನ್‍ಗಳ ಗುರಿ ಮುಟ್ಟಿಸಿದರು. ದಿನದ ಅಂತಿಮ ಓವರ್‍ವರೆಗೂ ಕ್ರೀಸ್‍ನಲ್ಲಿ ಉಳಿದಿದ್ದ ಚೇತೇಶ್ವರ ಪೂಜಾರ 7 ಬೌಂಡರಿ ಹಾಗೂ 2 ಸಿಕ್ಸರ್‍ಗಳನ್ನುಸಿಡಿಸಿ 123 ರನ್‍ಗಳಿಸಿದ್ದಾಗ ಇಲ್ಲದ ರನ್ ಕದಿಯಲು ಹೋಗಿ ಕುಮ್ಮಿನ್ಸ್‍ನ ಚುರುಕಿನ ಫೀಲ್ಡಿಂಗ್‍ಗೆ ಔಟಾಗುವ ಮೂಲಕ ಪೆವೆಲಿಯನ್‍ನತ್ತ ಹೆಜ್ಜೆ ಹಾಕುತ್ತಿದ್ದಂತೆ ಮೊದಲ ದಿನದಾಟವನ್ನು ಮುಗಿಸಲಾಯಿತು.

6 ರನ್ ಗಳಿಸಿರುವ ಮೊಹಮ್ಮದ್ ಶಮಿ ಹಾಗೂ ಬೂಮ್ರಾ ನಾಳೆ ಇನ್ನಿಂಗ್ಸ್ ಆರಂಭಿಸಲಿದ್ದು ಭಾರತ ತಂಡವು 9 ವಿಕೆಟ್‍ಗೆ 250 ರನ್‍ಗಳನ್ನು ಗಳಿಸಿದೆ.
ಆಸ್ಟ್ರೇಲಿಯಾ ಪರ ಮಿಚಲ್‍ಸ್ಟ್ರಾಕ್, ಹೇಜಲ್ ವುಡ್, ಕುಮ್ಮಿನ್ಸ್, ಲಿಯೋನ್ ತಲಾ 2 ವಿಕೆಟ್‍ಗಳನ್ನು ಕಬಳಿಸಿ ಭಾರತ ತಂಡದ ಬ್ಯಾಟ್ಸ್‍ಮನ್‍ಗಳಿಗೆ ಹೊಡೆತ ನೀಡಿದರು.

Facebook Comments