32 ಕಿ.ಮೀ. ದೂರದಿಂದಲೇ ಹಾರ್ಟ್ ಆಪರೇಷನ್ ಮಾಡಿ ಇತಿಹಾಸ ಸೃಷ್ಟಿಸಿದ ಡಾಕ್ಟರ್ ..!

ಈ ಸುದ್ದಿಯನ್ನು ಶೇರ್ ಮಾಡಿ

Gujarat-Doctor---01

ಗಾಂಧಿನಗರ, ಡಿ.6- ಇದು ವೈದ್ಯ ಲೋಕದ ಮತ್ತೊಂದು ವಿಸ್ಮಯ. ಗುಜರಾತ್‍ನ ಗಾಂಧಿನಗರದ ಸ್ವಾಮಿನಾರಾಯಣ ದೇವಸ್ಥಾನ ಇರುವ ಅಕ್ಷರಧಾಮ ದೇಗುಲ ಆವರಣದಿಂದ ಹಿರಿಯ ಹೃದ್ರೋಗ ತಜ್ಞರೊಬ್ಬರು 32 ಕಿ.ಮೀ. ದೂರದ ಆಪರೇಷನ್ ಥಿಯೇಟರ್‍ನಲ್ಲಿದ್ದ ಮಹಿಳೆಯೊಬ್ಬರಿಗೆ ಯಶಸ್ವಿಯಾಗಿ ಚಿಕಿತ್ಸೆ ನಡೆಸಿದ ಅಚ್ಚರಿ ಘಟನೆ ಇದು.

ಇದನ್ನು ವಿಶ್ವದ ಪ್ರಥಮ ಇನ್-ಹ್ಯೂಮನ್ ಟೆಲಿರೋಬಟಿಕ್ ಕರೋನರಿ ಇಂಟರ್‍ವೆನ್ಷನ್ ಚಿಕಿತ್ಸೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಡಾ.ತೇಜಸ್ ಪಟೇಲ್ ಈ ಯಶಸ್ವಿ ಪ್ರಯೋಗ ನಡೆಸಿದ ವಿಶ್ವದ ಮೊದಲ ವೈದ್ಯರು ಎಂಬ ಕೀರ್ತಿಗಳಿಸಿದ್ದಾರೆ.

ಮಧ್ಯ ವಯಸ್ಸಿನ ಮಹಿಳೆಯೊಬ್ಬರಿಗೆ ಹೃದಯಘಾತವಾಗಿತ್ತು. ಆಕೆಯನ್ನು ಪರೀಕ್ಷೆಗೆ ಒಳಪಡಿಸಿದಾಗ ಹೃದಯ ರಕ್ತನಾಳಗಳಲ್ಲಿ ಕೊಬ್ಬು ಹೆಪ್ಪುಗಟ್ಟಿರುವುದು ಪತ್ತೆಯಾಗಿದೆ.  ತಮ್ಮ ಅಪೆಕ್ಸ್ ಆಸ್ಪತ್ರೆಯಲ್ಲಿ ಮಹಿಳೆಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ ಡಾ.ಪಟೇಲ್, ಅಲ್ಲಿಂದ 32 ಕಿ.ಮೀ. ದೂರದಲ್ಲಿರುವ ಅಕ್ಷರಧಾಮ ದೇವಸ್ಥಾನದ ಆವರಣದಲ್ಲಿನ ವಿಶೇಷ ಕೊಠಡಿಯೊಂದರಲ್ಲಿ ದೂರ ನಿಯಂತ್ರಿತ ರಿಮೋಟ್ ಚಿಕಿತ್ಸೆಗೆ ವಿಶೇಷ ವ್ಯವಸ್ಥೆ ಮಾಡಿದರು.

ಇದಕ್ಕೆ ಟೆಲಿಮೆಡಿಷನ್ ಮತ್ತು ರೋಬೋ ತಂತ್ರಜ್ಞಾನವನ್ನು ಬಳಸಲಾಗಿತ್ತು. ಜತೆಗೆ ಇಂಟರ್‍ನೆಟ್ ನೆರವಿನ ಅತ್ಯಾಧುನಿಕ ವಿಧಾನವನ್ನೂ ಸಹ ಅಳವಡಿಸಲಾಗಿತ್ತು.ನಂತರ ಬಹು ದೂರದಿಂದಲೇ ವಿಶೇಷ ಸಾಧನಗಳ ಮೂಲಕ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನಡೆಸುವಲ್ಲಿ ಯಶಸ್ವಿಯಾದರು. ಸುರಕ್ಷತಾ ದೃಷ್ಟಿಯಿಂದ ಆಪರೇಷನ್ ಥಿಯೇಟರ್‍ನಲ್ಲಿ ವಿಶೇಷ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ತಂಡವೊಂದನ್ನು ನಿಯೋಜಿಸಲಾಗಿತ್ತು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin