‘ಯಾರು ಏನೇ ಮಾಟಮಂತ್ರ ಮಾಡಿದರೂ ನಮಗೇನೂ ಆಗಲ್ಲ’ : ಎಚ್.ಡಿ.ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

H-D-revanna
ಹಾಸನ, ಡಿ.6- ನಾನು ಯಾವುದೇ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಯಾವುದೇ ಇಲಾಖೆಯಲ್ಲಿ ಯಾವುದೇ ಅಧಿಕಾರಿಗಳನ್ನು ವರ್ಗಾವಣೆ ಮಾಡಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ಮಾತ್ರ ಅಧಿಕಾರಿಗಳ ವರ್ಗಾವಣೆಯಾಗಿದೆ. ಯಾವುದೇ ಇಲಾಖೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿಲ್ಲ. ಹಿಂದೆ ಇದ್ದ ಅಧಿಕಾರಿಗಳೇ ಈಗಲೂ ಮುಂದುವರೆದಿದ್ದಾರೆ.

ಇಲ್ಲಿ ಕಾಂಗ್ರೆಸ್, ಜೆಡಿಎಸ್ ಅಂತ ಏನೂ ಇಲ್ಲ. ಸಮನ್ವಯ ಸಮಿತಿ ಅಧ್ಯಕ್ಷರು ನನ್ನನ್ನು ಕರೆದು ಕೇಳಿದರೆ ನಾನು ಉತ್ತರಿಸುತ್ತೇನೆ. ಕೆಲವರಿಗೆ ನನ್ನ ಹೆಸರು ಹೇಳದಿದ್ದರೆ ನಿದ್ದೆ ಬರುವುದಿಲ್ಲ ಎಂದರು. ನಾನು ಮುಖ್ಯಮಂತ್ರಿ ಆಕಾಂಕ್ಷಿಯಲ್ಲ. ದೇವೇಗೌಡರು ನಮ್ಮ ನಾಯಕರು. ನಾವು ಬದುಕಿರುವವರೆಗೂ ಅಣ್ಣ, ತಮ್ಮಂದಿರು ಹೊಡೆದಾಡುವುದಿಲ್ಲ. ಯಾರು ಏನೇ ಮಾಟಮಂತ್ರ ಮಾಡಿದರೂ ಅದು ನಮಗೆ ತಗಲುವುದಿಲ್ಲ. ನಮ್ಮ ಕುಟುಂಬಕ್ಕೆ ಶಿವ, ಶೃಂಗೇರಿಯ ಶಾರದಾಂಬೆ ಆಶೀರ್ವಾದವಿದೆ ಎಂದು ಹೇಳಿದರು. ಹಾಸನ ಜಿಲ್ಲೆಯಲ್ಲಿ ಕುಡಿಯುವ ನೀರಿನ ತೊಂದರೆ, ತೆಂಗು ಬೆಳೆಗಾರರ ಪರಿಹಾರ, ಆಲೂಗಡ್ಡೆ ಖರೀದಿಗೆ ಹೊಸ ನೀತಿ ಮುಂತಾದವುಗಳ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ಮಾಡುತ್ತೇನೆ ಎಂದರು.

ಆನೆಗಳನ್ನು ಹಿಡಿಯಲು ಮುಖ್ಯಮಂತ್ರಿಗಳು ಸಭೆ ನಡೆಸಿದ್ದಾರೆ. ಶ್ರೀಲಂಕಾದಿಂದ ಆನೆ ತಜ್ಞರನ್ನು ಕರೆಸಿ ರಾಜ್ಯದಲ್ಲಿ ಕಾಡಾನೆಗಳನ್ನು ಹಿಡಿಯಲು ಚಿಂತನೆ ನಡೆಸಲಾಗಿದೆ. ಅಧಿವೇಶನದ ಬಳಿಕ ಸಿಎಂ ದೆಹಲಿಗೆ ತೆರಳಿ ಆನೆ ಕಾರಿಡಾರ್ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿಸಿದರು.  ಎತ್ತಿನಹೊಳೆ ಸಂಬಂಧ ಇಂದು ಅಧಿಕಾರಿಗಳ ಸಭೆ ನಡೆಸುತ್ತೇನೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಯೋಜನೆಗೆ ಚಾಲನೆ ನೀಡಿದ್ದಾರೆ ಎಂದು ಮಾಜಿ ಸಚಿವ ಬಿ.ಶಿವರಾಮ್ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಮಂಜೂರಾದ ಆದೇಶ ಪತ್ರ ಇದ್ದರೆ ಅವರು ಕೊಡಲಿ ಎಂದು ಸವಾಲು ಹಾಕಿದರು. ಎಲ್ಲವೂ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಕೆಲ ತಿಂಗಳುಗಳ ಹಿಂದೆ ಎಲ್ಲಾ ಕಾಮಗಾರಿಗಳು ಮಂಜೂರಾಗಿವೆ. ಕಳೆದ ಐದು ವರ್ಷಗಳಲ್ಲಿ ಯಡಿಯೂರಪ್ಪ ಏನು ಮಾಡಿದ್ದಾರೆ ಎಂದು ರೇವಣ್ಣ ಪ್ರಶ್ನಿಸಿದರು.

ಹಾಸನದ ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಸಮಸ್ಯೆಗಳನ್ನು ಪರಿಹರಿಸಬೇಕಿದೆ ಎಂದ ಅವರು, ಸಿದ್ದರಾಮಯ್ಯನವರ ಬಳಿ ನಾನೇನೂ ಡಿನೋಟಿಫಿಕೇಷನ್ ಮಾಡಿ ಎಂದು ಕೇಳೋಕ್ಕೆ ಹೋಗಿಲ್ಲ. ನಾನು ನನ್ನ ಕ್ಷೇತ್ರದ ಕೆಲಸಕ್ಕೆ ಹೋಗುತ್ತೇನೆ. ಈಗಲೂ ನಾವು ಚೆನ್ನಾಗಿದ್ದೇವೆ. ಮುಂದೆಯೂ ಚೆನ್ನಾಗಿರುತ್ತೇವೆ ಎಂದರು.

ಹಾಸನಕ್ಕೆ ಐಐಟಿ ಬರಬೇಕೆಂದು ನಾನೇ ಮೊದಲು ಕೇಳಿದ್ದೆ. ಆದರೆ, ಯುಪಿಎ ಸರ್ಕಾರದವರು ಐಐಟಿ ಕೊಡಲಿಲ್ಲ. ಗುಲ್ಬರ್ಗದಲ್ಲಿ 536 ಎಕರೆಯಲ್ಲಿ ವಿಮಾನ ನಿಲ್ದಾಣ ಮಾಡಿದ್ದಾರೆ. ಹಾಸನದಲ್ಲಿ 536 ಎಕರೆ ಜಮೀನು ಕೊಟ್ಟರೂ ಕೇಂದ್ರ ಸರ್ಕಾರ ವಿಮಾನ ನಿಲ್ದಾಣ ಮಾಡಿಲ್ಲ. ಏಳು ದಿನಗಳ ಗಡುವು ನೀಡಿದ್ದೇವೆ. ಅಷ್ಟೊರೊಳಗೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ನಾವು ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ರೇವಣ್ಣ ಎಚ್ಚರಿಕೆ ನೀಡಿದರು.

Facebook Comments

Sri Raghav

Admin