ಈ ವಾರ ರಾಜ್ಯಾದ್ಯಂತ ‘ಮುಂದಿನ ಬದಲಾವಣೆ’ ಚಿತ್ರ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Praveen Bhushan
ಬೆಳ್ಳಿ ಪರದೆ ಮೇಲೆ ಬಹಳಷ್ಟು ಯುವ ಪ್ರತಿಭೆಗಳು ಮಿಂಚಲು ತುದಿಗಾಲಲ್ಲಿ ನಿಂತಿದ್ದಾರೆ. ಆ ನಿಟ್ಟಿನಲ್ಲಿ ತುಮಕೂರು ಮೂಲದ ಯುವ ಪ್ರತಿಭೆ ಪ್ರವೀಣ್‍ಭೂಷಣ್ ನಾಯಕ ಹಾಗೂ ನಿರ್ದೇಶಕನಾಗಿ ಕಲಸ ಮಾಡಿರುವ ಮುಂದಿನ ಬದಲಾವಣೆ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಶೇ.60ರಷ್ಟು ಕಥಾಹಂದರ ಚಿತ್ರಮಂದಿರದೊಳಗೇ ನಡೆಯುತ್ತದೆ. ಚಿತ್ರಮಂದಿರಗಳಲ್ಲಿ ನಡೆಯುವ ಒಂದಷ್ಟು ರೋಚಕ ಘಟನೆಗಳೇ ಈ ಚಿತ್ರದ ಪ್ರಮುಖ ಕಥಾವಸ್ತು. ತಮ್ಮ ಪ್ರವೀಣ್ ಭೂಷಣ್ ಅವರ ಚಿತ್ರರಂಗದ ಕನಸನ್ನು ನನಸು ಮಾಡಲೆಂದು ಅವರ ಸಹೋದರ ಫಣಿಭೂಷಣ್ ಬಂಡವಾಳ ಹೂಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಬಹಳಷ್ಟು ಶೇಷತೆಗಳನ್ನು ಹೊಂದಿರುವ ಈ ಚಿತ್ರದ ಹೆಸರು ಕೂಡ ಅಷ್ಟೇ ಸ್ಪೆಷಲ್ ಆಗಿದ್ದು, ಇತ್ತೀಚೆಗೆ ನಡೆದ ಮುಂದಿನ ಬದಲಾವಣೆ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಇಡೀ ಚಿತ್ರತಂಡ ಹಾಜರಿದ್ದು, ಚಿತ್ರದ ಕುರಿತಂತೆ ಒಂದಷ್ಟು ವಿಷಯಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿತು.  ತನ್ನ ವಿಶೇಷ ಸಂಗೀತದ ಮೂಲಕ ಗುರುತಿಸಿಕೊಂಡಿರುವ ಕಾರ್ತಿಕ ವೆಂಕಟೇಶ್ ಅವರ ಸಂಗೀತ ನಿರ್ದೇಶನದಲ್ಲಿ ಈ ಚಿತ್ರದ ಆರು ಹಾಡುಗಳು ಸೊಗಸಾಗಿ ಮೂಡಿ ಬಂದಿವೆ.

ಬಹುತೇಕ ಹೊಸ ಪ್ರತಿಭೆಗಳನ್ನೇ ಈ ಚಿತ್ರದ ಕಲಾವಿದ, ತಂತ್ರಜ್ಞರಾಗಿ ಬಳಸಿಕೊಳ್ಳಲಾಗಿದೆ. ಚಿತ್ರರಂಗಕ್ಕೆ ಸಂಬಂಧಪಟ್ಟ ವಿಭಿನ್ನ ಕಥಾ ಹಂದರವನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಪ್ರವೀಣ್‍ಭೂಷಣ್ ನಾಯಕನಾಗಿ ಕಾಣಿಸಿಕೊಂಡಿದ್ದು, ನಾಯಕಿಯ ಪಾತ್ರದಲ್ಲಿ ಸಂಗೀತ ಕಾಣಿಸಿಕೊಂಡಿದ್ದಾರೆ. ಮಾಲಾಶ್ರೀ, ಕಾವ್ಯಗೌಡ, ಅಶ್ವಿನಿ ಇತರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರವೀಣ್‍ಭೂಷಣ್ ಕಳೆದ ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಸೈಕಲ್ ಹೊಡೆದಿದ್ದಾರೆ.  ಅಲ್ಲದೆ, ಒಂದಷ್ಟು ಕಿರುಚಿತ್ರಗಳನ್ನು ಕೂಡ ನಿರ್ದೇಶಿಸಿ ಅನುಭವ ಪಡೆದುಕೊಂಡಿದ್ದಾರೆ.

ಆರ್ಯನ್, ಗಿರೀಶ್, ಪ್ರವೀಣ್ ಹಾಗೂ ಲಕ್ಷ್ಮಣ್‍ಗೌಡ ಹಾಗೂ ಇತರರು ಈ ಚಿತ್ರದಲ್ಲಿನ ಉಳಿದ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ನೀರವ್ ಕ್ರಿಯೇಷನ್ಸ್ ಮೂಲಕ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಕೋಟೇಶ್ವರ ರಾವ್ ಅವರು ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ.  ಈ ಮುಂದಿನ ಬದಲಾವಣೆ ಚಿತ್ರತಂಡದವರು ಬಹಳಷ್ಟು ನಿರೀಕ್ಷೆಯೊಂದಿಗೆ ತೆರೆ ಮೇಲೆ
ಬರುತ್ತಿದ್ದಾರೆ.

Facebook Comments