‘ನಾನು ಕಳ್ಳ ಎಂಬ ಹಣೆಪಟ್ಟಿ ರದ್ದು ಮಾಡಿ’ : ಮಲ್ಯ ಹೊಸ ವರಸೆ

ಈ ಸುದ್ದಿಯನ್ನು ಶೇರ್ ಮಾಡಿ

Vijaya-malya

ಲಂಡನ್, ಡಿ.6 (ಪಿಟಿಐ)- ಬ್ಯಾಂಕುಗಳಿಂದ ಪಡೆದ ಸಾಲವನ್ನು ಹಿಂತಿರುಗಿಸುತ್ತೇನೆ ಎಂದು ನಿನ್ನೆಯಷ್ಟೆ ಘೋಷಿಸಿ ಸದ್ದಿಯಾಗಿದ್ದ ಕಳಂಕಿತ ಉದ್ಯಮಿ ವಿಜಯ್ ಮಲ್ಯ ಇಂದು ಆ ಮಾತನ್ನು ಪುನರುಚ್ಚರಿಸಿದರಾದರೂ ಹೊಸ ವರಸೆ ತೆಗೆದಿದ್ದಾರೆ. ನಾನು ಹಣ ಕದ್ದಿದ್ದೇನೆಂಬ ಹಣೆಪಟ್ಟಿಯನ್ನು ತೆಗೆದುಹಾಕಬೇಕೆಂದು ಮದ್ಯದ ದೊರೆ ಕೋರಿದ್ದಾರೆ.

ಅನೇಕ ಬ್ಯಾಂಕ್‍ಗಳಿಂದ ಸಾಲ ಪಡೆದು ಹಿಂತಿರುಗಿಸಿಲ್ಲ ಎಂಬ ಆರೋಪಗಳು ಕೇಳಿಬರುತ್ತಿರುವುದಕ್ಕೆ ನಿನ್ನೆ ಟ್ವಿಟ್ಟರ್‍ನಲ್ಲಿ ಪ್ರತಿಕ್ರಿಯೆ ನೀಡಿದ್ದ ವಿಜಯ್ ಮಲ್ಯ ತಮ್ಮ ಬಳಿಯಿಂದ ಹಣವನ್ನು ಸ್ವೀಕರಿಸುವಂತೆ ಮನವಿ ಮಾಡಿದ್ದರು. ಭಾರತಕ್ಕೆ ನನ್ನನ್ನು ಹಸ್ತಾಂತರಿಸುವುದು ಮತ್ತು ಸಾಲ ಮರು ಪಾವತಿ ಎರಡು ಪ್ರತ್ಯೇಕ ಸಂಗತಿಗಳಾಗಿವೆ. ಅದು ಕಾನೂನು ರೀತಿಯಲ್ಲಿಯೇ ನಡೆಯಲಿ. ಸಾರ್ವಜನಿಕರ ದುಡ್ಡು ಪ್ರಮುಖ ಸಂಗತಿ.

ನಾನು ಪಡೆದಿರುವ ಸಾಲವನ್ನು ಮರುಪಾವತಿ ಮಾಡಲು ಸಿದ್ಧನಿದ್ದೇನೆ. ಬ್ಯಾಂಕ್ ಮತ್ತು ಸರ್ಕಾರ ಅದನ್ನು ದಯಮಾಡಿ ಸ್ವೀಕರಿಸಬೇಕು ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ. ತಮ್ಮ ಸಾಲ ಮರುಪಾವತಿ ಮತ್ತು ಭಾರತಕ್ಕೆ ಗಡಿಪಾರು ಮಾಡುವುದನ್ನು ತಡೆಹಿಡಿಯಬೇಕೆಂದು ಇಂಗ್ಲೆಂಡ್‍ನ ಕೋರ್ಟ್‍ಗೆ ಮಾಡಿರುವ ಮನವಿಗೆ ಯಾವುದೇ ಸಂಬಂಧವಿಲ್ಲ ಎಂದು ಕೂಡ ಹೇಳಿದ್ದಾರೆ.

ನನ್ನ ಬಗ್ಗೆ ಮಾತನಾಡುವವರಿಗೆ ನಾನು ಒಂದನ್ನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ನನ್ನನ್ನು ಗಡಿಪಾರು ಮಾಡುವ ತೀರ್ಮಾನ ಅಥವಾ ಇತ್ತೀಚೆಗೆ ದುಬೈಯಿಂದ ಗಡಿಪಾರು ಮಾಡಿರುವುದು ಮತ್ತು ಸಾಲವನ್ನು ಹಿಂತಿರುಗಿಸುತ್ತೇನೆ ಎಂದು ಹೇಳಿರುವುನ್ನು ಯಾವ ರೀತಿ ಒಂದಕ್ಕೊಂದು ಸಂಬಂಧ ಕಲ್ಪಿಸುತ್ತಾರೆ ಎಂದು ನನಗೆ ಅರ್ಥವಾಗುವುದಿಲ್ಲ. ನಾನು ಎಲ್ಲೇ ಇರಲಿ, ನನ್ನ ಮನವಿ ಒಂದೇ, ದಯವಿಟ್ಟು ಹಣ ಸ್ವೀಕರಿಸಿ ಎಂದು. ನಾನು ಹಣ ಕದ್ದಿದ್ದೇನೆ ಎಂದು ಹೇಳುವುದನ್ನು ನಿಲ್ಲಿಸಬೇಕೆಂಬುದಷ್ಟೇ ನನ್ನ ಉದ್ದೇಶ ಎಂದು ಮಲ್ಯ ಇಂದು ಟ್ವೀಟ್ ಮಾಡಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin