ಪತಿಯ ಅಗಲಿಕೆಯಿಂದ ನೊಂದಿದ್ದ ಪತ್ನಿ ನೇಣಿಗೆ ಶರಣು

ಈ ಸುದ್ದಿಯನ್ನು ಶೇರ್ ಮಾಡಿ

susideದೇವನಹಳ್ಳಿ, ಡಿ.6- ಮರ್ಯಾದಾ ಹತ್ಯೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದ್ದು, ಪತಿಯ ಅಗಲಿಕೆಯಿಂದ ನೊಂದಿದ್ದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಶ್ವನಾಥಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಮದ ಮೀನಾಕ್ಷಿ (22) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮೀನಾಕ್ಷಿ ಕೆಲವು ತಿಂಗಳುಗಳ ಹಿಂದೆ ಹರೀಶ ಎಂಬಾತನೊಂದಿಗೆ ಅಂತರ್ಜಾತಿ ವಿವಾಹವಾಗಿ ಬಿದಲೂರಿನಲ್ಲಿ ವಾಸವಾಗಿದ್ದ ಇವರಿಬ್ಬರು ಅನ್ಯೋನ್ಯವಾಗಿಯೇ ಇದ್ದು, ಮೀನಾಕ್ಷಿ ಆರು ತಿಂಗಳ ಗರ್ಭಿಣಿಯಾಗಿದ್ದರು.ಆದರೆ, ಮೀನಾಕ್ಷಿಯ ಕುಟುಂಬದವರು ಈ ಮದುವೆಯನ್ನು ವಿರೋಧಿಸಿದ್ದರು. ಅಂದಿನಿಂದ ಮೀನಾಕ್ಷಿಯ ತಮ್ಮ ವಿನಯ್, ಅಕ್ಕನನ್ನು ಮದುವೆಯಾಗಿದ್ದ ಹರೀಶನ ಮೇಲೆ ದ್ವೇಷ ಸಾಧಿಸುತ್ತಿದ್ದನು.

ಈ ದ್ವೇಷದಿಂದಾಗಿ ನ.21ರಂದು ತೋಟವೊಂದರ ಬಳಿ ಹರೀಶನನ್ನು ಅಡ್ಡಗಟ್ಟಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದನು. ತಮ್ಮನೇ ತನ್ನ ಪತಿಯನ್ನು ಕೊಲೆ ಮಾಡಿದ್ದರಿಂದ ಮೀನಾಕ್ಷಿ ಖಿನ್ನತೆಗೊಳಗಾಗಿದ್ದರು. ಈ ನಡುವೆ ಪತಿಯ ಅಗಲಿಕೆಯಿಂದ ಹೊರಬರಲಾರದೆ ಮೀನಾಕ್ಷಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಒಟ್ಟಾರೆ ತಮ್ಮನ ಜಾತಿ ದ್ವೇಷಕ್ಕೆ ಮೂರು ಜೀವಗಳು ಬಲಿಯಾಗಿವೆ.  ಸುದ್ದಿ ತಿಳಿದ ವಿಶ್ವನಾಥಪುರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )