ಚಿಕಿತ್ಸೆಗಾಗಿ ಏರ್ ಆಂಬುಲೆನ್ಸ್ ಮೂಲಕ ಸಿದ್ಧಗಂಗಾ ಶ್ರೀಗಳು ಚೆನ್ನೈಗೆ ಶಿಫ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Air-Ambulence--01
ತುಮಕೂರು, ಡಿ.7- ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ದೇಹದಲ್ಲಿ ಅಳವಡಿಸಿರುವ ಸ್ಟಂಟ್‍ಗಳನ್ನು ಸರ್ಜರಿ ಮಾಡಿ ತೆಗೆದು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚೆನ್ನೈನ ರೇಲಾ ಆಸ್ಪತ್ರೆಗೆ ವಿಶೇಷ ವಿಮಾನದ ಮೂಲಕ ಕರೆದೊಯ್ದು ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ.

ಇಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ರಸ್ತೆ ಮೂಲಕ ತೆರಳಿ ಅಲ್ಲಿಂದ 12 ಗಂಟೆಗೆ ವಿಮಾನ ನಿಲ್ದಾಣದಿಂದ ಏರ್ ಆ್ಯಂಬುಲೆನ್ಸ್‍ನಲ್ಲಿ ಚೆನ್ನೈನ ರೇಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚೆನ್ನೈನ ಅರವಳಿಕೆ ತಜ್ಞ ವೈದ್ಯ ಡಾ.ಕಲೈಮೂರ್ತಿ ಇಳನ್‍ಕುಮಾರ್ ನೇತೃತ್ವದ ತಂಡ ನಿನ್ನೆ ರಾತ್ರಿ ಶ್ರೀಗಳನ್ನು ವಿವಿಧ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಶಸ್ತ್ರ ಚಿಕಿತ್ಸೆಗಾಗಿ ಚೆನ್ನೈಗೆ ಕಳುಹಿಸಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಶ್ರೀಗಳನ್ನು ಕಳುಹಿಸಿಕೊಡಲಾಗಿದೆ. ಇಂಟರ್‍ನ್ಯಾಷನಲ್ ಸರ್ಜನ್ ಡಾ.ಮಹಮ್ಮದ್ ರೆಹಲ್ಲಾ, ಡಾ.ಪಳನಿ ವೇಲು ಅವರ ತಂಡ ಚಿಕಿತ್ಸೆ ನಡೆಸಲಿದೆ.

ದೇಹದಲ್ಲಿ ಅಳವಡಿಸಿರುವ ಎರಡು ಸ್ಟಂಟ್‍ಗಳು ಬಿದ್ದುಹೋಗಿವೆ. ಅವುಗಳನ್ನು ಸರ್ಜರಿ ಮಾಡಿ ತೆಗೆಯಬೇಕಾ ಅಥವಾ ಎಂಡೋಸ್ಕೋಪಿ ಮಾಡುವ ಮೂಲಕ ತೆಗೆಯಬಹುದಾ ಎಂಬುದನ್ನು ತಜ್ಞ ವೈದ್ಯರ ತಂಡ ನಿರ್ಧರಿಸಲಿದೆ. ತಜ್ಞ ವೈದ್ಯರು ಚೆನ್ನೈನಲ್ಲಿದ್ದು, ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಿದ್ಧಗಂಗಾ ಆಸ್ಪತ್ರೆ ವೈದ್ಯರಾದ ಡಾ.ಪರಮೇಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ಡಾ.ಶ್ರೀ ಶಿವಕುಮಾರ ಶ್ರೀಗಳ ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲ. ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈಗೆ ಕರೆದೊಯ್ಯಲಾಗಿದೆ ಎಂದು ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ. ಶ್ರೀಗಳ ಆರೋಗ್ಯದ ಕುರಿತು ಮಾತನಾಡಿದ ಅವರು, ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಭಕ್ತರು ಆತಂಕ ಪಡುವ ಅಗತ್ಯವಿಲ್ಲ. ಅವರು ಆರೋಗ್ಯವಾಗಿದ್ದಾರೆ. ಹೆಚ್ಚಿನ ಚಿಕಿತ್ಸೆ ನೀಡುವ ಸಲುವಾಗಿ ಚೆನ್ನೈನಿಂದ ವೈದ್ಯರು ಆಗಮಿಸಿದ್ದರು. ಶ್ರೀಗಳ ಆರೋಗ್ಯದ ಮತ್ತಷ್ಟು ಸುಧಾರಣೆಗಾಗಿ ಚೆನ್ನೈಗೆ ಕರೆದೊಯ್ಯಬೇಕೆಂದು ಸಲಹೆ ಮಾಡಿದ ಹಿನ್ನೆಲೆಯಲ್ಲಿ ಅಲ್ಲಿನ ರೇಲಾ ಇನ್ಸ್‍ಟಿಟ್ಯೂಟ್‍ನಲ್ಲಿ ಚಿಕಿತ್ಸೆ ಕೊಡಿಸಲು ತೀರ್ಮಾನಿಸಲಾಗಿದೆ. ಡಾ.ಮಹಮ್ಮದ್ ರೇಲಾ ಅವರಿಂದ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ಚೆನ್ನೈನ ನುರಿತ ವೈದ್ಯರ ತಂಡ ತುಮಕೂರಿನಲ್ಲಿರುವ ಮಠಕ್ಕೆ ಬಂದು ಶ್ರೀಗಳ ಆರೋಗ್ಯವನ್ನು ಖುದ್ದಾಗಿ ಪರಿಶೀಲಿಸಿದೆ. ಶ್ರೀಗಳು ಆರೋಗ್ಯವಾಗಿದ್ದಾರೆ. ನಮ್ಮ ಬಳಿ ಮಾತನಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.  ಶತಾಯುಷಿ ಡಾ.ಶ್ರೀ ಶಿವಕುಮಾರ ಶ್ರೀಗಳ ಆರೋಗ್ಯದ ಬಗ್ಗೆ ರಾಜ್ಯಸರ್ಕಾರವು ಕೂಡ ನಿರಂತರ ನಿಗಾ ವಹಿಸಿದೆ. ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಶ್ರೀಗಳ ಆರೋಗ್ಯ ವಿಚಾರಿಸುತ್ತಿದ್ದಾರೆ. ತುಮಕೂರು ಜಿಲ್ಲಾಧಿಕಾರಿ ಡಾ.ರಾಕೇಶ್ ಸಂಪೂರ್ಣ ಮಾಹಿತಿ ನೀಡಿದ್ದಾರೆ ಎಂದರು.

ಐದು ದಿನಗಳ ಹಿಂದೆ ಶ್ರೀಗಳಿಗೆ ಜ್ವರ ಮತ್ತು ರಕ್ತದ ಸೋಂಕು ಉಂಟಾಗಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು-ಮೂರು ದಿನಗಳ ನಂತರ ಅವರ ಆರೋಗ್ಯ ಸ್ಥಿತಿ ಸುಧಾರಣೆಗೊಂಡು ಡಿಸ್ಜಾರ್ಜ್ ಮಾಡಲಾಗಿತ್ತು.111 ವರ್ಷದ ಶ್ರೀಗಳ ಯಕೃತ್ತಿನಲ್ಲಿ ಈ ಮೊದಲೇ 8 ಸ್ಟಂಟ್‍ಗಳನ್ನು ಹಾಕಲಾಗಿದೆ. ಮತ್ತೊಂದು ಸ್ಟಂಟ್ ಅಳವಡಿಸಲು ಸಾಧ್ಯವಾಗುವುದಿಲ್ಲ. ಶ್ರೀಗಳಿಗೆ ಮತ್ತೊಮ್ಮೆ ಲಿವರ್ ಸೋಂಕು ಉಂಟಾದರೆ ಚಿಕಿತ್ಸೆ ನೀಡಲು ವೈದ್ಯರಿಗೆ ಕಷ್ಟವಾಗುತ್ತದೆ. ಹಾಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈಗೆ ಕಳುಹಿಸಿಕೊಡಲಾಗಿದೆ. ಅಲ್ಲಿ ನುರಿತ ವೈದ್ಯರ ತಂಡ ಚಿಕಿತ್ಸೆ ನೀಡಲಿದೆ.

Facebook Comments

Sri Raghav

Admin