ಬೈಕ್‍ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ, ವ್ಯಕ್ತಿ ಸಾವು, ಗ್ರಾಮಸ್ಥರಿಂದ ಕಲ್ಲು ತೂರಾಟ

ಈ ಸುದ್ದಿಯನ್ನು ಶೇರ್ ಮಾಡಿ

Bike-Accident--01

ತುಮಕೂರು, ಡಿ.7-ಮುಂದೆ ಹೋಗುತ್ತಿದ್ದ ಬೈಕ್‍ಗೆ ಹಿಂದಿನಿಂದ ಅತಿವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಬಸ್ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದರು. ಗುಬ್ಬಿ ತಾಲೂಕಿನ ಒನಕಾಂಬಿ ಹಟ್ಟಿಯ ರಾಜಣ್ಣ(40) ಮೃತಪಟ್ಟ ದುರ್ದೈವಿಯಾಗಿದ್ದು, ಹಿಂಬದಿ ಸವಾರನ ಸ್ಥಿತಿ ಗಂಭೀರವಾಗಿದೆ.

ದೊಡ್ಡ ಗುಣಿ ಸಮೀಪ ಇರುವ ಗೊಲ್ಲರಹಟ್ಟಿಯಲ್ಲಿ ನಿನ್ನೆ ಹಬ್ಬವಿದ್ದುದರಿಂದ ರಾಜಣ್ಣ ತನ್ನ ಸ್ನೇಹಿತನನ್ನು ಕರೆದುಕೊಂಡು ಹೋಗಿದ್ದು, ಊಟ ಮುಗಿಸಿಕೊಂಡು ಮಧ್ಯರಾತ್ರಿ 12.30ರ ಸಮಯದಲ್ಲಿ ಬೈಕ್‍ನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬರುತ್ತಿದ್ದಾಗ ಅತಿ ವೇಗವಾಗಿ ಮುನ್ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ರಾಜಣ್ಣ ಸ್ಥಳದಲ್ಲೇ ಮೃತಪಟ್ಟು ಹಿಂಬದಿ ಸವಾರ ಗಂಭೀರ ಗಾಯಗೊಂಡಿದ್ದಾರೆ.

ಅಪಘಾತ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಸ್ಥಳಕ್ಕೆ ನೂರಾರು ಮಂದಿ ಜಮಾಯಿಸಿ ಕೆಎಸ್‌ಆರ್‌ಟಿಸಿ ಬಸ್ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಈ ಮಾರ್ಗದಲ್ಲಿ ಬಂದ ವಾಹನಗಳ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ. ಸುದ್ದಿ ತಿಳಿದ ಗುಬ್ಬಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿದ್ದರು.ಕಲ್ಲು ತೂರಾಟದಿಂದ ಬಸ್‍ನಲ್ಲಿದ್ದ ಪ್ರಯಾಣಿಕರಿಗೆ ಹಾಗೂ ಚಾಲಕನಿಗೆ ಗಾಯಗಳಾಗಿವೆ. ಈ ಸಂದರ್ಭದಲ್ಲಿ ಚಾಲಕ ಅಸಹಾಯಕರಾಗಿದ್ದರು. ಅಪಘಾತದ ಆಕ್ರೋಶಕ್ಕೆ ಬೆಳಗಿನ ಜಾವ 3 ಗಂಟೆಯಾದರೂ ಇಲ್ಲಿನ ಜನರು ಯಾವುದೇ ವಾಹನಗಳನ್ನು ಹೋಗಲು ಬಿಡದ ಪರಿಣಾಮ ಸುಮಾರು 10 ಕಿಲೋಮೀಟರ್ ದೂರದವರೆಗೂ ಎರಡೂ ಕಡೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.  ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಪೊಲೀಸರ ಹರಸಾಹಸ:
ವಾಹನಗಳನ್ನು ತಡೆದು ಇಲ್ಲಿನ ಜನರು ಪ್ರತಿಭಟನೆ ನಡೆಸುವ ಮೂಲಕ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದವರ ಮೇಲೆ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಸಬ್‍ಇನ್ಸ್‍ಪೆಕ್ಟರ್ ಗಂಗಾಧರ್ ಖಡಕ್ ಎಚ್ಚರಿಕೆ ನೀಡಿದಾಗ ಪ್ರತಿಭಟನೆಯಿಂದ ಹಿಂದೆ ಸರಿದರು. ಒಟ್ಟಾರೆ ಪೊಲೀಸರು ಹರಸಾಹಸಪಟ್ಟು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ನಂತರ ಮೃತ ದೇಹವನ್ನು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

Facebook Comments